ಚೆನ್ನೈ: ಮುಂದಿನ ತಿಂಗಳು ಏಪ್ರಿಲ್ 23ರಂದು ನಡೆಯಲಿರುವ ತಮಿಳುನಾಡು ವಿಧಾನಸಭೆ ಚುನಾವಣೆಗೆ(Tamil Nadu elections) ಬಿಜೆಪಿ ಮತ್ತು ಎಐಎಡಿಎಂಕೆ ನೇತೃತ್ವದ ಎನ್ಡಿಎ ಮೈತ್ರಿಕೂಟ ಇಂದು (ಮಾ. 23) ಸೀಟು ಹಂಚಿಕೆ ಒಪ್ಪಂದವನ್ನು ಅಂತಿಮಗೊಳಿಸಿವೆ ಎಂದು ವರದಿಯಾಗಿದೆ.
ಚೆನ್ನೈನಲ್ಲಿ ಎಐಎಡಿಎಂಕೆ ಕಚೇರಿಯಲ್ಲಿ ತಮಿಳುನಾಡು ಬಿಜೆಪಿ ಉಸ್ತುವಾರಿ ಮತ್ತು ಕೇಂದ್ರ ಸಚಿವ ಪಿಯೂಷ್ ಗೋಯಲ್ ಮತ್ತು ಎಐಎಡಿಎಂಕೆ ಮುಖ್ಯಸ್ಥ ಎಡಪ್ಪಾಡಿ ಕೆ ಪಳನಿಸ್ವಾಮಿ ಸೀಟು ಹಂಚಿಕೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಚುನಾವಣೆಯಲ್ಲಿ ಬಿಜೆಪಿ 27, ಪಿಎಂಕೆ 18 ಹಾಗೂ ಎಎಂಎಂಕೆ 11 ಸ್ಥಾನಗಳಲ್ಲಿ ಸ್ಪರ್ಧಿಸಿದ್ರೆ, ಉಳಿದ 178 ಸ್ಥಾನಗಳಲ್ಲಿ ಎಐಎಡಿಎಂಕೆ ಸ್ಪರ್ಧಿಸಲಿದೆ.ಈ ಕುರಿತು ಮಾತನಾಡಿರುವ ಕೇಂದ್ರ ಸಚಿವ ಪಿಯೂಷ್ ಗೋಯಲ್, ಮಹಾರಾಷ್ಟ್ರ, ಹರಿಯಾಣ, ಬಿಹಾರ ಹಾಗೂ ದೆಹಲಿಯ ಜನರು ಇಂಡಿಯಾ ಒಕ್ಕೂಟವನ್ನು ತಿರಸ್ಕರಿಸಿದಂತೆ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತಮಿಳುನಾಡಿನ ಜನರು ಡಿಎಂಕೆ-ಕಾಂಗ್ರೆಸ್ ಮೈತ್ರಿಕೂಟವನ್ನು ತಿರಸ್ಕರಿಸುತ್ತಾರೆ. ಮುಂದಿನ ಅವಧಿಗೆ ತಮಿಳುನಾಡು ಮತ್ತು ಪುದುಚೇರಿಯಲ್ಲಿ ಎನ್ಡಿಎ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಜನರು, ಯುವಕರು ಹಾಗೂ ಮಹಿಳೆಯರು ಏಳಿಗೆ ಹೊಂದಲು ಅವಕಾಶಗಳನ್ನು ಬಯಸುತ್ತಿದ್ದಾರೆ. ಉತ್ತಮ ಆಡಳಿತ, ಅಭಿವೃದ್ಧಿ ರಾಜಕೀಯ, ಉತ್ತಮ ಭವಿಷ್ಯವನ್ನು ಎನ್ಡಿಎ ಆಡಳಿತ ನೀಡಲಿದೆ. ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವ ಮತ್ತು ಮಾರ್ಗದರ್ಶನದಲ್ಲಿ ತಮಿಳುನಾಡಿನಲ್ಲಿ ಎನ್ಡಿಎ ಅಧಿಕಾರಕ್ಕೆ ಬರಲಿದೆ ಎಂದಿದ್ದಾರೆ.ತಮಿಳುನಾಡಿನ ಎಲ್ಲಾ 234 ವಿಧಾನಸಭಾ ಸ್ಥಾನಗಳಿಗೆ ಏಪ್ರಿಲ್ 23 ರಂದು ಒಂದೇ ಹಂತದ ಮತದಾನ ನಡೆಯಲಿದ್ದು, ನೆರೆಯ ಪುದುಚೇರಿಯ 30 ಸ್ಥಾನಗಳಿಗೆ ಏಪ್ರಿಲ್ 9 ರಂದು ಮತದಾನ ನಡೆಯಲಿದೆ. ಮೇ 04ರಂದು ಪಂಚರಾಜ್ಯಗಳ ಫಲಿತಾಂಶ ಪ್ರಕಟವಾಗಲಿದೆ













































