ಹೊಸದಿಲ್ಲಿ: ಮುಂದಿನ ಲೋಕಸಭಾ ಚುನಾವಣೆ ಮತ್ತು ಆ ಬಳಿಕದ ವಿಧಾನಸಭಾ ಚುನಾವಣೆಗಳಲ್ಲಿ ಶೇಕಡ 33ರಷ್ಟು ಮಹಿಳಾ ಮೀಸಲಾತಿಯನ್ನು ಜಾರಿಗೊಳಿಸಲು ಅನುವಾಗುವ ನಿಟ್ಟಿನಲ್ಲಿ ಸಂವಿಧಾನ ತಿದ್ದುಪಡಿ ಮಸೂದೆ ಸೇರಿದಂತೆ ಎರಡು ಹೊಸ ಮಸೂದೆಗಳನ್ನು ಪ್ರಸಕ್ತ ಅಧಿವೇಶನದಲ್ಲಿ ಮಂಡಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ. ಈ ನಡೆಯು ದೇಶದ ರಾಜಕೀಯ ಚಿತ್ರಣವನ್ನು ಬದಲಿಸಲಿದ್ದು ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆಗೆ ಪೂರ್ವಭಾವಿಯಾಗಿ ಪ್ರಧಾನಿ ನರೇಂದ್ರ ಮೋದಿಯವರ ಮಹಿಳಾ ಸಬಲೀಕರಣದ ಕಾರ್ಯಸೂಚಿಗೆ ಪೂರಕವಾಗಿ ಈ ಕ್ರಮಕ್ಕೆ ಸರ್ಕಾರ ಮುಂದಾಗಿದೆ.
ಸರ್ಕಾರ ಮಹಿಳಾ ಮೀಸಲಾತಿಯನ್ನು ಜಾರಿಗೊಳಿಸುವುದಾದಲ್ಲಿ ಲೋಕಸಭೆ ಸ್ಥಾನಗಳ ಸಂಖ್ಯೆ ಶೇಕಡ 50ರಷ್ಟು ಹೆಚ್ಚಲಿವೆ. ಹಾಲಿ ಇರುವ 543 ಸ್ಥಾನಗಳ ಬದಲಾಗಿ 273 ಹೆಚ್ಚುವರಿ ಸ್ಥಾನಗಳು ಸೇರಿ ಒಟ್ಟು ಸ್ಥಾನಗಳ ಸಂಖ್ಯೆ 816ಕ್ಕೆ ಏರಿಕೆಯಾಗಲಿದೆ. ಹೆಚ್ಚುವರಿ ಸ್ಥಾನಗಳನ್ನು ಮಹಿಳೆಯರಿಗೆ ಮೀಸಲು ಇಡುವುದರಿಂದ ಹಾಲಿ ಪುರುಷ ಸಂಸದರ ಸ್ಥಾನಕ್ಕೆ ಕುತ್ತು ಬರದಂತಹ ರಾಜಕೀಯ ಚಿತ್ರಣ ರೂಪುಗೊಳ್ಳಲಿದೆ ಎಂದು ಹೇಳಲಾಗಿದೆ.ಹೊಸ ವ್ಯವಸ್ಥೆಯ ಬಳಿಕ ಬಹುಮತಕ್ಕೆ ಅಗತ್ಯ ಸ್ಥಾನಗಳ ಸಂಖ್ಯೆ 409 ಆಗಲಿದೆ. ಐದು ದಶಕಗಳಲ್ಲೇ ಮೊದಲ ಬಾರಿಗೆ ಲೋಕಸಭೆಯ ಸದಸ್ಯಬಲ ಹೆಚ್ಚಲಿದ್ದು, ರಾಜ್ಯಸಭೆ ಮತ್ತು ವಿಧಾನ ಪರಿಷತ್ ಸ್ಥಾನಗಳ ಸಂಖ್ಯೆಯ ಮೇಲೆ ಇದರಿಂದ ಯಾವುದೇ ಪರಿಣಾಮ ಉಂಟಾಗುವುದಿಲ್ಲ.ಕ್ಷೇತ್ರ ಪುನರ್ ವಿಂಗಡಣೆ ಮತ್ತು ಸಂವಿಧಾನ ತಿದ್ದುಪಡಿ ಮಸೂದೆಗಳನ್ನು ಪ್ರಸಕ್ತ ಅಧಿವೇಶನದಲ್ಲೇ ಆಂಗೀಕರಿಸಿ ಜಾರಿಗೊಳಿಸಲು ಸರ್ಕಾರ ಮುಂದಾಗಿದೆ. ಮಸೂದೆಗಳ ಅಂಗೀಕಾರಕ್ಕೆ ಎನ್‌ಡಿಎಗೆ ಸ್ವಂತ ಸದಸ್ಯಬಲ ಇಲ್ಲದಿದ್ದರೂ, ಏಪ್ರಿಲ್ 4ಕ್ಕೆ ಕೊನೆಗೊಳ್ಳುವ ಬಜೆಟ್ ಅಧಿವೇಶನದಲ್ಲೇ ಇವುಗಳಿಗೆ ಅಂಗೀಕಾರ ಪಡೆಯಲು ಸರ್ಕಾರ ಉತ್ಸುಕವಾಗಿದೆ.














































