ವಾಷಿಂಗ್ಟನ್: ತಮ್ಮ ಮಿಲಿಟರಿ ಸೋಲು ಅನುಭವಿಸಿದೆ ಎಂದುಒಪ್ಪಿಕೊಳ್ಳದಿದ್ದರೆ ಇರಾನ್ ಮೇಲೆ ಮತ್ತಷ್ಟು ಭೀಕರ ದಾಳಿ ನಡೆಸಿ, ನರಕ ತೋರಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಿದ್ದರಾಗಿದ್ದಾರೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕೆರೋಲಿನ್ ಲೀವಿಟ್ ಕಠಿಣ ಎಚ್ಚರಿಕೆ ನೀಡಿದ್ದಾರೆ.
‘ಅಧ್ಯಕ್ಷ ಟ್ರಂಪ್ ಸುಮ್ಮನೆ ಹೇಳುವುದಿಲ್ಲ. ನರಕ ತೋರಿಸಲು ಸಿದ್ಧರಾಗಿದ್ದಾರೆ. ಇರಾನ್ ಟ್ರಂಪ್ ಅವರ ಬಗ್ಗೆ ಮತ್ತೆ ತಪ್ಪು ಲೆಕ್ಕಾಚಾರ ಮಾಡದೇ ಸೋಲೊಪ್ಪಿಕೊಳ್ಳಲಿ’ಎಂದು ಲೀವಿಟ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.’ಇರಾನ್ ವಾಸ್ತವ ಪರಿಸ್ಥಿತಿಯನ್ನು ಒಪ್ಪಿಕೊಳ್ಳದಿದ್ದರೆ, ಮಿಲಿಟರಿ ಸೋಲನ್ನು ಅನುಭವಿಸಿರುವುದನ್ನು ಅಂಗೀಕರಿಸದಿದ್ದರೆ ಮತ್ತೆ ಮತ್ತೆ ಸೋಲುತ್ತಲೇ ಇರುತ್ತಾರೆ. ಅಧ್ಯಕ್ಷ ಟ್ರಂಪ್ ಅವರು ಹಿಂದೆಂದೂ ಕಾಣದಷ್ಟು ಕಠಿಣ ದಾಳಿಯನ್ನು ನಡೆಸಲು ಸಿದ್ದರಾಗಿದ್ದಾರೆ’ಎಂದು ಅವರು ಹೇಳಿದ್ದಾರೆ.ಇರಾನ್ ವಿರುದ್ಧ ಅಮೆರಿಕ-ಇಸ್ರೇಲ್‌ನ ಜಂಟಿ ಯುದ್ಧವು ನಾಲ್ಕನೇ ವಾರಕ್ಕೆ ಕಾಲಿಟ್ಟಿದ್ದು, ಪಾಕಿಸ್ತಾನ, ಟರ್ಕಿ ಮತ್ತು ಈಜಿಪ್ಟ್ನಂತಹ ಹಲವು ದೇಶಗಳು ಯುದ್ಧವನ್ನು ಕೊನೆಗೊಳಿಸಲು ಸಂಭಾವ್ಯ ಮಾತುಕತೆಗೆ ಮಧ್ಯಸ್ಥಿಕೆ ವಹಿಸಲು ಪ್ರಯತ್ನ ನಡೆಸುತ್ತಿವೆ. ಆದರೆ, ಯಾವ ಮಾತುಕತೆಗಳು ಎಲ್ಲಿ ಮತ್ತು ಯಾವಾಗ ನಡೆಯುತ್ತವೆ. ಯಾವಾಗ ಕಾರ್ಯರೂಪಕ್ಕೆ ಬರುತ್ತವೆ ಎಂಬುದರ ಬಗ್ಗೆ ಅನಿಶ್ಚಿತತೆ ಮುಂದುವರೆದಿದೆ.
ಯುದ್ಧವನ್ನು ಕೊನೆಗೊಳಿಸುವ ಅಮೆರಿಕದ ಪ್ರಸ್ತಾವನೆಯನ್ನು ಇರಾನ್ ಇನ್ನೂ ಪರಿಶೀಲಿಸುತ್ತಿದೆ. ಆರಂಭಿಕ ಪ್ರತಿಕ್ರಿಯೆ ನಕಾರಾತ್ಮಕವಾಗಿದ್ದರೂ, ಪ್ರಸ್ತಾವನೆಯನ್ನು ಸಂಪೂರ್ಣ ತಿರಸ್ಕರಿಸುವುದರಿಂದ ಇರಾನ್ ಹಿಂದೆ ಸರಿದಿದೆ ಎಂದು ಇರಾನ್‌ನ ಹಿರಿಯ ಅಧಿಕಾರಿಯೊಬ್ಬರು ಬುಧವಾರ ರಾಯಿಟರ್ಸ್‌ಗೆ ತಿಳಿಸಿದ್ದಾರೆ.













































