ನವದೆಹಲಿ: ದೇಶದ ಖಾಸಗಿ ವಲಯದ ಅತಿದೊಡ್ಡ ತೈಲೋತ್ಪನ್ನ ಮಾರಾಟ ಕಂಪನಿ ನಯಾರಾ ಎನರ್ಜಿ ಪೆಟ್ರೋಲ್ ಬೆಲೆಯನ್ನು ಲೀಟರಿಗೆ ₹5ರಷ್ಟು, ಡೀಸೆಲ್ ಬೆಲೆಯನ್ನು ₹3ರಷ್ಟು ಹೆಚ್ಚಿಸಿದೆ ಎಂದು ಮೂಲಗಳು ತಿಳಿಸಿವೆ. ಈ ಮೂಲಕ ಕಚ್ಚಾ ತೈಲದ ಬೆಲೆ ಏರಿಕೆಯನ್ನು ಅದು ಗ್ರಾಹಕರಿಗೆ ಭಾಗಶಃ ವರ್ಗಾವಣೆ ಮಾಡಿದೆ.
ಫೆಬ್ರುವರಿ 28ರ ನಂತರ ಕಚ್ಚಾ ತೈಲದ ಬೆಲೆಯು ಸರಿಸುಮಾರು ಶೇ 50ರಷ್ಟು ಹೆಚ್ಚಳ ಕಂಡಿದೆ. ದೇಶದಲ್ಲಿರುವ ಒಟ್ಟು 1.02 ಲಕ್ಷ ಪೆಟ್ರೋಲ್ ಬಂಕ್‌ಗಳಲ್ಲಿ 6,967 ಬಂಕ್‌ಗಳು ನಯಾರಾ ಎನರ್ಜಿ ಕಂಪನಿಗೆ ಸೇರಿದವು.ಕಚ್ಚಾ ತೈಲ ಪೂರೈಕೆಯಲ್ಲಿ ಆಗಿರುವ ವ್ಯತ್ಯಯವು ಹಿಂದೆಂದೂ ಕಾಣದಂತಹ ಸವಾಲುಗಳನ್ನು ಸೃಷ್ಟಿಸಿದೆ ಎಂದು ನಯಾರಾ ಎನರ್ಜಿ ಪ್ರಕಟಣೆ ತಿಳಿಸಿದೆ.ಖಾಸಗಿ ವಲಯದ ಇನ್ನೊಂದು ಕಂಪನಿಯಾದ ಜಿಯೊ-ಬಿಪಿ ಇದುವರೆಗೆ ಬೆಲೆ ಹೆಚ್ಚಳ ಮಾಡಿಲ್ಲ. ಆದರೆ ಕಂಪನಿಯು ಪೆಟ್ರೋಲ್ ಮತ್ತು ಡೀಸೆಲ್ ಮಾರಾಟದಿಂದ ಭಾರಿ ನಷ್ಟ ಅನುಭವಿಸುತ್ತಿದೆ. ಕಂಪನಿಯು 2,185 ಬಂಕ್‌ಗಳನ್ನು ಹೊಂದಿದೆ.
ಸರ್ಕಾರಿ ಸ್ವಾಮ್ಯದ ತೈಲೋತ್ಪನ್ನಗಳ ಕಂಪನಿಗಳು ಪ್ರೀಮಿಯಂ ಪೆಟ್ರೋಲ್ ಹಾಗೂ ಕೈಗಾರಿಕಾ ಬಳಕೆಯ ಡೀಸೆಲ್ ಬೆಲೆಯನ್ನು ಮಾತ್ರ ಈಚೆಗೆ ಹೆಚ್ಚಿಸಿವೆ.













































