ಇರಾನ್ ಭೀಕರ ಪ್ರತಿಕಾರ: ಮಧ್ಯಪ್ರಾಚ್ಯದ 13 ಅಮೆರಿಕನ್ ಸೇನಾ ನೆಲೆಗಳು ಧೂಳೀಪಟ!

Picture of Savistara

Savistara

Bureau Report

ವಾಷಿಂಗ್ಟನ್: ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಜ್ವಾಲೆ ಈಗ ನಿಯಂತ್ರಣ ಮೀರಿ ಹರಡುತ್ತಿದೆ. ಇರಾನ್‌ನ ಸುಪ್ರೀಂ ಲೀಡರ್ ಆಯತೊಲ್ಲಾ ಅಲಿ ಖಮೇನಿ ಹತ್ಯೆಗೆ ಪ್ರತಿಯಾಗಿ ಇರಾನ್ ನಡೆಸಿರುವ ಸರಣಿ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳು ಅಮೆರಿಕದ ಹೆಮ್ಮೆಯ ಸೇನಾ ನೆಲೆಗಳನ್ನು(Iran attacks US Bases) ಸ್ಮಶಾನ ಸದೃಶವಾಗಿಸಿವೆ.

ನ್ಯೂಯಾರ್ಕ್ ಟೈಮ್ಸ್ ವರದಿಯ ಪ್ರಕಾರ, ಮಧ್ಯಪ್ರಾಚ್ಯದಲ್ಲಿರುವ ಅಮೆರಿಕದ ಸುಮಾರು 13 ಪ್ರಮುಖ ಮಿಲಿಟರಿ ನೆಲೆಗಳು ಈಗ ವಾಸಿಸಲು ಅಯೋಗ್ಯ ಎಂಬಷ್ಟು ಹಾನಿಗೀಡಾಗಿವೆ.

ಅಮೆರಿಕ ಮತ್ತು ಇಸ್ರೇಲ್‌ನ ತಪ್ಪು ಲೆಕ್ಕಾಚಾರ!

ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ಖಮೇನಿ ಹತರಾದಾಗ, ಇರಾನ್ ಇಷ್ಟು ದೊಡ್ಡ ಮಟ್ಟದ ಪ್ರತಿಘಾತ ನೀಡಬಹುದು ಎಂದು ವಾಷಿಂಗ್ಟನ್ ಊಹಿಸಿರಲಿಲ್ಲ. ಆದರೆ, ಇರಾನ್ ತನ್ನ ಅತ್ಯಾಧುನಿಕ ಹೈ-ಪ್ರಿಸಿಶನ್ ಕ್ಷಿಪಣಿಗಳು ಮತ್ತು ಕಾಮಿಕೇಜ್ ಡ್ರೋನ್‌ಗಳ ಮೂಲಕ ಅಮೆರಿಕದ ಮಿಲಿಟರಿ ಮತ್ತು ಇಂಧನ ಕೇಂದ್ರಗಳ ಮೇಲೆ ಅಕ್ಷರಶಃ ಬೆಂಕಿ ಮಳೆ ಸುರಿಸಿದೆ. ಈ ದಾಳಿಯ ತೀವ್ರತೆಗೆ ಅಮೆರಿಕದ ರಕ್ಷಣಾ ವ್ಯವಸ್ಥೆಗಳಾದ ಪೇಟ್ರಿಯಾಟ್ ಕೂಡ ಮಂಡಿಯೂರಿವೆ ಎಂದು ವರದಿಗಳು ತಿಳಿಸಿವೆ.

ಹೋಟೆಲ್, ತಾತ್ಕಾಲಿಕ ಕಚೇರಿಗಳೇ ಈಗ ಸೈನಿಕರಿಗೆ ಆಸರೆ!

ಇರಾನ್​ನ ದಾಳಿಯ ಭೀಕರತೆ ಎಷ್ಟಿತ್ತೆಂದರೆ, ಸುಸಜ್ಜಿತವಾಗಿದ್ದ ಅಮೆರಿಕದ ಸೇನಾ ಬ್ಯಾರಕ್‌ಗಳು ಈಗ ಅವಶೇಷಗಳ ರಾಶಿಯಾಗಿವೆ. ಇದರಿಂದಾಗಿ ಸಾವಿರಾರು ಅಮೆರಿಕನ್ ಸೈನಿಕರನ್ನು ಧ್ವಂಸಗೊಂಡ ನೆಲೆಗಳಿಂದ ಸ್ಥಳಾಂತರಿಸಲಾಗಿದ್ದು, ಅವರನ್ನು ಹತ್ತಿರದ ಹೋಟೆಲ್‌ಗಳು ಮತ್ತು ತಾತ್ಕಾಲಿಕ ಕಚೇರಿ ಕಟ್ಟಡಗಳಲ್ಲಿ ಇರಿಸಲಾಗಿದೆ. ಅಮೆರಿಕದ ರಕ್ಷಣಾ ಇಲಾಖೆ ಇದನ್ನು ದೀರ್ಘಾವಧಿ ಯುದ್ಧ ಎಂದು ಘೋಷಿಸಿದ್ದು, ಸೈನಿಕರ ಸುರಕ್ಷತೆ ಈಗ ದೊಡ್ಡ ಸವಾಲಾಗಿದೆ.

ಯಾವೆಲ್ಲಾ ನೆಲೆಗಳು ಧ್ವಂಸವಾಗಿವೆ..?

ಇರಾನ್ ತನ್ನ ಗಡಿಗೆ ಹತ್ತಿರವಿರುವ ಕುವೈತ್‌ನ ನೆಲೆಗಳನ್ನು ಪ್ರಮುಖವಾಗಿ ಗುರಿಯಾಗಿಸಿಕೊಂಡಿದೆ.

ಕುವೈತ್: ಪೋರ್ಟ್ ಶುವೈಬಾ, ಅಲಿ ಅಲ್ ಸಾಲೆಮ್ ಏರ್ ಬೇಸ್ ಮತ್ತು ಕ್ಯಾಂಪ್ ಬ್ಯುಹ್ರಿಂಗ್ ಮೇಲೆ ಭೀಕರ ದಾಳಿ ನಡೆದಿದೆ. ಈ ನೆಲೆಗಳಲ್ಲಿನ ರನ್‌ವೇಗಳು ಮತ್ತು ಇಂಧನ ಪೈಪ್‌ಲೈನ್‌ಗಳು ಸಂಪೂರ್ಣ ನಾಶವಾಗಿವೆ.

ಕತಾರ್, ಬಹ್ರೇನ್ ಮತ್ತು ಸೌದಿ ಅರೇಬಿಯಾ: ಈ ದೇಶಗಳಲ್ಲಿರುವ ಅಮೆರಿಕದ ಮಿಲಿಟರಿ ತಾಂತ್ರಿಕ ಕೇಂದ್ರಗಳು ಮತ್ತು ರಾಜತಾಂತ್ರಿಕ ಕಚೇರಿಗಳ ಮೇಲೂ ಇರಾನ್ ದಾಳಿ ನಡೆಸಿದೆ.

ಸಂಪರ್ಕ ಕ್ರಾಂತಿ ಕಡಿತ:.ಲಾಜಿಸ್ಟಿಕ್ಸ್ ಜಾಲಕ್ಕೆ ಪೆಟ್ಟು

ಅಮೆರಿಕದ ಸೇನಾ ಕಾರ್ಯಾಚರಣೆಗೆ ಬೇಕಾದ ಸಂವಹನ ವ್ಯವಸ್ಥೆ ಮತ್ತು ಏರ್‌ಫೀಲ್ಡ್ ಮೂಲಸೌಕರ್ಯಗಳು ಈಗ ಕತ್ತಲಲ್ಲಿವೆ. ತೈಲ ಪೂರೈಕೆ ಮಾರ್ಗಗಳು ಕಡಿತಗೊಂಡಿರುವುದರಿಂದ ಅಮೆರಿಕದ ಯುದ್ಧ ವಿಮಾನಗಳು ಮತ್ತು ಟ್ಯಾಂಕರ್‌ಗಳಿಗೆ ಇಂಧನದ ಕೊರತೆ ಎದುರಾಗಿದೆ. ಅಮೆರಿಕದ ಅಧಿಕಾರಿಗಳ ಪ್ರಕಾರ, ಕಳೆದ ಹಲವು ದಶಕಗಳಲ್ಲಿ ಯುಎಸ್ ಸೈನಿಕರು ಇಷ್ಟೊಂದು ದೊಡ್ಡ ಮಟ್ಟದ ಜೀವದ ಹಾನಿ ಮತ್ತು ಮೂಲಸೌಕರ್ಯ ನಷ್ಟವನ್ನು ಕಂಡಿರಲಿಲ್ಲ.

ರಿಮೋಟ್ ವಾರ್‌ಫೇರ್​ಗೆ ಮೊರೆ ಹೋದ ಅಮೆರಿಕ

ನೆಲೆಗಳು ನಾಶವಾಗಿರುವುದರಿಂದ ಅಮೆರಿಕದ ಪದಾತಿ ದಳ ಈಗ ಅಕ್ಷರಶಃ ದಿಕ್ಕುತಪ್ಪಿದೆ. ಅನಿವಾರ್ಯವಾಗಿ ಅಮೆರಿಕ ಈಗ ರಿಮೋಟ್ ವಾರ್‌ಫೇರ್ ಅಂದರೆ ದೂರದ ಪ್ರದೇಶಗಳಿಂದ ಅಥವಾ ಹಡಗುಗಳಿಂದ ಮಾತ್ರ ದಾಳಿ ನಡೆಸುವ ಸ್ಥಿತಿಗೆ ತಲುಪಿದೆ. ಇರಾನ್‌ನ ಈ ನಿರಂತರ ದಾಳಿಗಳು ಅಮೆರಿಕದ ಮಧ್ಯಪ್ರಾಚ್ಯದ ಪೊಲೀಸ್ ಎಂಬ ಇಮೇಜ್‌ಗೆ ದೊಡ್ಡ ಪೆಟ್ಟು ನೀಡಿವೆ.

ಜಾಗತಿಕ ಪರಿಣಾಮ ಮತ್ತು ಭಾರತದ ಆತಂಕ

ಮಧ್ಯಪ್ರಾಚ್ಯದ ಈ ಅಸ್ಥಿರತೆ ಜಗತ್ತನ್ನು ತಲ್ಲಣಗೊಳಿಸಿದೆ.

ತೈಲ ಬಿಕ್ಕಟ್ಟು: ಯುಎಸ್ ನೆಲೆಗಳ ಜೊತೆಗೆ ಇಂಧನ ಕೇಂದ್ರಗಳ ಮೇಲೂ ದಾಳಿ ನಡೆದಿರುವುದು ತೈಲ ಬೆಲೆಯಲ್ಲಿ ಸ್ಫೋಟ ಉಂಟುಮಾಡಲಿದೆ.

ಭಾರತೀಯರ ಸುರಕ್ಷತೆ: ಕುವೈತ್, ಸೌದಿ ಮತ್ತು ಬಹ್ರೇನ್‌ನಲ್ಲಿ ಲಕ್ಷಾಂತರ ಭಾರತೀಯರು ಕೆಲಸ ಮಾಡುತ್ತಿದ್ದಾರೆ. ಯುದ್ಧದ ತೀವ್ರತೆ ಈ ದೇಶಗಳಿಗೆ ಹರಡಿರುವುದು ಭಾರತ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ.

ಸಾರ್ವಭೌಮತ್ವದ ಪ್ರಶ್ನೆ: ಇರಾನ್ ತನ್ನ ದೇಶದ ನಾಯಕನ ಹತ್ಯೆಗೆ ನೀಡಿದ ಈ ಪ್ರತಿಕ್ರಿಯೆಯಾಗಿದ್ದು, ಅಂತಾರಾಷ್ಟ್ರೀಯ ರಾಜತಾಂತ್ರಿಕತೆಯಲ್ಲಿ ಹೊಸ ಸಂಚಲನ ಮೂಡಿಸಿದೆ.

ಇರಾನ್‌ನ ಈ ರೌದ್ರಾವತಾರವು ಅಮೆರಿಕವನ್ನು ರಕ್ಷಣಾತ್ಮಕ ಸ್ಥಿತಿಗೆ ತಳ್ಳಿದೆ. 13 ನೆಲೆಗಳು ವಾಸಯೋಗ್ಯವಲ್ಲದ ಸ್ಥಿತಿ ತಲುಪಿರುವುದು ಸೂಪರ್ ಪವರ್ ಅಮೆರಿಕಕ್ಕೆ ಭಾರಿ ಮುಖಭಂಗವಾಗಿದೆ. ಟ್ರಂಪ್ ಸರ್ಕಾರ ಈಗ ಇರಾನ್ ಮೇಲೆ ಪೂರ್ಣ ಪ್ರಮಾಣದ ಭೂಸೇನಾ ದಾಳಿ ನಡೆಸುತ್ತದೆಯೇ ಅಥವಾ ಸಂಧಾನಕ್ಕೆ ಮುಂದಾಗುತ್ತದೆಯೇ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ

[t4b-ticker]
error: Content is protected !!