ಚಿಕ್ಕಮಗಳೂರು: ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳಮರು ಎಣಿಕೆ ಬೆಳಗಿನ ಜಾವ ಪೂರ್ಣಗೊಂಡಿದ್ದು, ಫಲಿತಾಂಶವನ್ನು ಮುಚ್ಚಿದ ಲಕೋಟೆಯಲ್ಲಿ ಚುನಾವಣಾ ಆಯೋಗಕ್ಕೆ ಅಧಿಕಾರಿಗಳು ಸಲ್ಲಿಸಿದ್ದಾರೆ. 2023ರ ಫಲಿತಾಂಶದ ಪ್ರಕಾರ 201 ಮತಗಳಲ್ಲಿ ಗೆಲುವು ಸಾಧಿಸಿದ್ದ ಹಾಲಿ ಶಾಸಕ ಟಿ.ಡಿ.ರಾಜೇಗೌಡ ಅವರಿಗೆ 255 ಮತಗಳು ಕಡಿಮೆಯಾಗಿವೆ.ಬಿಜೆಪಿ ಬೆಂಬಲಿಗರು ಸಂಭ್ರಮಾಚರಣೆ ಮಾಡಿದರೆ, ಮತಪತ್ರಗಳನ್ನು ತಿದ್ದಿರುವ ಆರೋಪದಲ್ಲಿ ಜೀವರಾಜ್ ಸೇರಿ ಮೂವರ ವಿರುದ್ಧ ಕಾಂಗ್ರೆಸ್ ಮುಖಂಡರು ಪೊಲೀಸರಿಗೆ ದೂರು ನೀಡಿದ್ದಾರೆ.
ಶನಿವಾರ ದಿನವಿಡೀ ನಡೆದ ಗೊಂದಲಗಳ ನಡುವೆ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಮತ ಎಣಿಕೆ ಪ್ರಕ್ರಿಯೆಯನ್ನು ಅಧಿಕಾರಿಗಳು ಪೂರ್ಣಗೊಳಿಸಿದರು. 2023ರ ಎಣಿಕೆ ವೇಳೆ ಮಾನ್ಯವಾಗಿದ್ದ ಮತಗಳ ಪೈಕಿ ಟಿ.ಡಿ.ರಾಜೇಗೌಡ ಅವರ 255 ಮತಗಳು ಈಗ ಅಮಾನ್ಯಗೊಂಡವು. ಡಿ.ಎನ್.ಜೀವರಾಜ್ ಅವರಿಗೆ ಬಂದಿದ್ದ ಮತಗಳ ಪೈಕಿ 2 ಮತಗಳು ಅಮಾನ್ಯಗೊಂಡವು. ಇದರಿಂದಾಗಿ 52 ಮತಗಳ ಅಂತರದಲ್ಲಿ ಜೀವರಾಜ್ ಜಯ ಸಾಧಿಸಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರು.ಎಣಿಕೆ ಪ್ರಕ್ರಿಯೆ ಮುಗಿದ ಬಳಿಕ ಮಾಹಿತಿ ನೀಡಿದ ಚುನಾವಣಾಧಿಕಾರಿ ಗೌರವಶೆಟ್ಟಿ, ‘2023ರ ಮತ ಎಣಿಕೆ ವೇಳೆ ಚಲಾವಣೆಯಾಗಿದ್ದ 1,822 ಅಂಚೆ ಮತಗಳ ಪೈಕಿ ಬಿಜೆಪಿ ಅಭ್ಯರ್ಥಿ ಜೀವರಾಜ್ ಅವರಿಗೆ 692 ಮತಗಳು, ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ. ರಾಜೇಗೌಡ ಅವರಿಗೆ 569 ಮತಗಳು ಲಭಿಸಿದ್ದವು. ಆದರೆ, ಶನಿವಾರ ನಡೆದ ಪರಿಶೀಲನೆ ಮತ್ತು ಮರು ಎಣಿಕೆಯ ಬಳಿಕ ಜೀವರಾಜ್ ಅವರ ಮತಗಳು 690 ಆಗಿದ್ದರೆ, ರಾಜೇಗೌಡ ಅವರ ಮತಗಳು 314ಕ್ಕೆ ಇಳಿದಿವೆ. ರಾಜೇಗೌಡ ಅವರಿಗೆ 255 ಮತಗಳು ಕಡಿಮೆಯಾಗಿದೆ’ ಎಂದು ಹೇಳಿದರು.
‘ನ್ಯಾಯಾಲಯದ ನಿರ್ದೇಶನದಂತೆ ಪರಿಶೀಲನೆ ಮತ್ತು ಮರುಎಣಿಕೆ ಪ್ರಕ್ರಿಯೆ ನಡೆಸಿ ಮತಪತ್ರಗಳನ್ನು ಮತ್ತೆ ಸ್ಟ್ರಾಂಗ್ ರೂಮಿನಲ್ಲಿ ಇರಿಸಿ ಸೀಲ್ ಮಾಡಲಾಗಿದೆ. ಎಣಿಕೆ ನಂತರ ಕಂಡು ಬಂದ ಮತ ವ್ಯತ್ಯಾಸದ ಕುರಿತು ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಸಲಾಗಿದೆ’ ಎಂದು ವಿವರಿಸಿದರು.
ಈ ವೇಳೆ ಮಾಧ್ಯಮಗಳ ಜತೆ ಮಾತನಾಡಿದ ಜೀವರಾಜ್, ‘ಮರು ಎಣಿಕೆಯಿಂದ ರಾಜೇಗೌಡರ ಮತಗಳು ಕಡಿಮೆಯಾಗಿದ್ದು, ನನಗೆ ಹೆಚ್ಚು ಮತಗಳು ಬಂದಿವೆ. ಚುನಾವಣಾಧಿಕಾರಿ ಫಲಿತಾಂಶ ಘೋಷಣೆ ಮಾಡಿ ಪ್ರಮಾಣ ಪತ್ರ ನೀಡುತ್ತಾರೆ ಎಂದು ನಿರೀಕ್ಷೆ ಮಾಡಿದ್ದೆ. ಆದರೆ, ಪ್ರಮಾಣಪತ್ರ ನೀಡಿಲ್ಲ. ನನಗೆ ಹೆಚ್ಚು ಮತಗಳು ಬಂದಿವೆ. ಅಧಿಕಾರಿಗಳು ಏನು ಕ್ರಮ ಕೈಗೊಳ್ಳುತ್ತಾರೆ ಎಂಬುದು ಗೊತ್ತಿಲ್ಲ, ಕಾಯುತ್ತೇನೆ’ ಎಂದು ಹೇಳಿದರು.ಎಣಿಕೆ ಬಳಿಕ ಪ್ರತಿಕ್ರಿಯಿಸಿದ ರಾಜೇಗೌಡ, ‘ನನ್ನ ಪರವಾಗಿ ಚಲಾವಣೆಯಾಗಿದ್ದ ಮತಪತ್ರಗಳ ಮೇಲೆ ಹೆಚ್ಚುವರಿ ಗುರುತುಗಳು ಕಾಣಿಸಿವೆ. ಬೇರೆಯವರ ಹೆಸರಿನ ಮುಂದೆ ಕೂಡ ಗೆರೆ ಎಳೆಯಲಾಗಿದೆ. ಇದು ಹೇಗೆ ಆಗಿದೆ ಎಂಬುದು ಗೊತ್ತಿಲ್ಲ. 2023ರ ಮತ ಎಣಿಕೆಯ ವೇಳೆ ಎಲ್ಲ ಪಕ್ಷಗಳ ಏಜೆಂಟ್‌ಗಳ ಸಮ್ಮುಖದಲ್ಲಿ ಈ ಮತಪತ್ರಗಳನ್ನು ಮಾನ್ಯ ಎಂದು ಪರಿಗಣಿಸಲಾಗಿತ್ತು. ಈಗ ಅದೇ ಮತಗಳನ್ನು ಅಮಾನ್ಯ ಎಂದು ಘೋಷಣೆ ಮಾಡಿರುವುದರಿಂದ ನನ್ನ ಮತಗಳ ಸಂಖ್ಯೆ ಕಡಿಮೆಯಾಗಿದೆ’ ಎಂದರು.
ರಾಜೇಗೌಡ ಅವರ ಪರವಾಗಿ ಎಣಿಕೆ ಏಜೆಂಟ್ ಆಗಿದ್ದ ಸುಧೀರ್‌ಕುಮಾರ್ ಮುರೊಳ್ಳಿ ಮಾತನಾಡಿ, ‘2023ರ ಮತ ಎಣಿಕೆಯ ವೇಳೆ ಆಗಿನ ಚುನಾವಣಾಧಿಕಾರಿ ಎಲ್ಲ ಪಕ್ಷಗಳ ಏಜೆಂಟ್‌ಗಳ ಸಮ್ಮುಖದಲ್ಲೇ ಅಂಚೆ ಮತಗಳನ್ನು ಎಣಿಸಿದ್ದರು. ಆದರೆ, ಈಗ ರಾಜೇಗೌಡ ಅವರಿಗೆ ಬಂದ ಮತಪತ್ರಗಳ ಕಟ್ಟುಗಳಷ್ಟೇ ಅಮಾನ್ಯ ಎಂದು ಪರಿಗಣಿಸಲಾಗಿದೆ. 2023ರ ಎಣಿಕೆಯಲ್ಲಿ ಇವೆಲ್ಲವೂ ಮಾನ್ಯ ಮತಗಳಾಗಿದ್ದವು. ಈಗ ಮತಪತ್ರಗಳಲ್ಲಿ ಮತ್ತೊಬ್ಬ ಅಭ್ಯರ್ಥಿಗೂ ಗೆರೆ ಎಳೆದಿರುವುದು ಕಾಣಿಸುತ್ತಿವೆ. ಈ ಬಗ್ಗೆ ತನಿಖೆಯಾಗಬೇಕು’ ಎಂದು ಹೇಳಿದರು.ನಂತರ ಸುಧೀರ್‌ಕುಮಾರ್ ಮುರೊಳ್ಳಿ ಅವರು ನಗರ ಠಾಣೆಗೆ ದೂರು ನೀಡಿದ್ದು, ‘ರಾಜೇಗೌಡ ಅವರ ಪರವಾಗಿ ಚಲಾವಣೆಯಾಗಿದ್ದ 255 ಮತಪತ್ರಗಳನ್ನು ತಿದ್ದಲಾಗಿದೆ. ಹಿಂದಿನ ಚುನಾವಣಾಧಿಕಾರಿ ವೇದಮೂರ್ತಿ, ಅಭ್ಯರ್ಥಿ ಡಿ.ಎನ್.ಜೀವರಾಜ್, ಹಿಂದಿನ ಜಿಲ್ಲಾಧಿಕಾರಿ ಕೆ.ಎನ್. ರಮೇಶ್ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸಬೇಕು’ ಎಂದು ಮನವಿ ಮಾಡಿದ್ದಾರೆ.










































