ಚಿಕ್ಕಮಗಳೂರು: ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ಪ್ರಕ್ರಿಯೆ ಹೈಕೋರ್ಟ್ ಸೂಚನೆಯಂತೆ ಪೂರ್ಣಗೊಂಡಿದೆ ಎಂದು ಚುನಾವಣಾಧಿಕಾರಿ ಗೌರವ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂಚೆ ಮತಗಳ ಮರು ಪರಿಶೀಲನೆ ಮತ್ತು ಎಣಿಕೆ ಕಾರ್ಯವನ್ನು ಮಾತ್ರ ಕೈಗೊಳ್ಳಲಾಗಿದ್ದು, ಒಟ್ಟು 1822 ಅಂಚೆ ಮತಗಳನ್ನು ಮರು ಎಣಿಕೆ ಮಾಡಲಾಗಿದೆ ಎಂದು ಹೇಳಿದರು.
2023ರ ಮೂಲ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಜೀವರಾಜ್ ಅವರು 692 ಮತಗಳನ್ನು ಪಡೆದಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ರಾಜೇಗೌಡ ಅವರಿಗೆ 569 ಮತಗಳು ಲಭಿಸಿದ್ದವು. ಆದರೆ 2026ರಲ್ಲಿ ನಡೆದ ಮರು ಎಣಿಕೆಯಲ್ಲಿ ಜೀವರಾಜ್ ಅವರಿಗೆ 690 ಮತಗಳು (2 ಮತ ಕಡಿಮೆ) ಹಾಗೂ ರಾಜೇಗೌಡ ಅವರಿಗೆ 314 ಮತಗಳು (255 ಮತ ಕಡಿಮೆ) ಲಭಿಸಿದ್ದವು ಎಂದು ವಿವರಿಸಿದರು.
ಇದಲ್ಲದೆ, ರಾಜೇಗೌಡ ಅವರಿಗೆ ಬಿದ್ದಿದ್ದ 318 ಮತಗಳನ್ನು ಮರು ಎಣಿಕೆಯಲ್ಲಿ ಅಸಿಂಧು ಎಂದು ಘೋಷಿಸಲಾಗಿದೆ ಎಂದು ಅವರು ಹೇಳಿದರು. 2023ರಲ್ಲಿ ಒಟ್ಟು 1822 ಅಂಚೆ ಮತಗಳಲ್ಲಿ 1543 ಸಿಂಧುವಾಗಿರುವ ಮತಗಳು ಹಾಗೂ 279 ತಿರಸ್ಕೃತ ಮತಗಳು ಇದ್ದವು ಎಂದು ಮಾಹಿತಿ ನೀಡಿದರು.ಎಲ್ಲಾ ವರದಿಗಳನ್ನು ಚುನಾವಣಾ ಆಯೋಗ ಹಾಗೂ ಹೈಕೋರ್ಟ್ ಗೆ ಸಲ್ಲಿಸಲಾಗಿದೆ ಎಂದು ತಿಳಿಸಿದ ಅವರು, ಮತ ಟ್ಯಾಂಪರಿಂಗ್ ಆರೋಪಗಳ ಬಗ್ಗೆ ಪ್ರತಿಕ್ರಿಯೆ ನೀಡಲು ಅಧಿಕಾರ ಇಲ್ಲ ಎಂದು ಸ್ಪಷ್ಟಪಡಿಸಿದರು. ಸಿಂಧುವಾಗಿರುವ ಮತಗಳನ್ನು ಅಸಿಂಧುಗೊಳಿಸಿರುವ ವಿಚಾರವು ಚುನಾವಣಾ ಆಯೋಗದ ನಿರ್ದೇಶನದಂತೆ ನಡೆದ ಎಣಿಕೆ ಪ್ರಕ್ರಿಯೆಯ ಭಾಗವಾಗಿದೆ ಎಂದು ಹೇಳಿದರು.ಮರು ಎಣಿಕೆ ಬಳಿಕ ಮತಪತ್ರಗಳನ್ನು ಸ್ಟ್ರಾಂಗ್ ರೂಂನಲ್ಲಿ ಸೀಲ್ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.










































