ಮಂಗಳೂರು: ‘ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ನನ್ನನಡುವೆ ಯಾವುದೇ ಆತ್ಮೀಯತೆ, ವ್ಯಾವಹಾರಿಕ ಸಂಬಂಧ ಇಲ್ಲ. ಅಪಪ್ರಚಾರ ಮಾಡುವವರಿಗೆ ಭಗವಂತ ಒಳಿತು ಮಾಡಲಿ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ಶುಕ್ರವಾರ ಧರ್ಮಸ್ಥಳದಲ್ಲಿ ದೇವರಿಗೆ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.’ಇತ್ತೀಚೆಗೆ ನಡೆದ ವಿಧಾನ ಪರಿಷತ್ ಚುನಾವಣೆ ವೇಳೆ ಆಗಿರುವ ಅಡ್ಡ ಮತದಾನದಿಂದ ನನ್ನನ್ನು ಸೇರಿದಂತೆ ರಾಜ್ಯದ ಎಲ್ಲ ಕಾರ್ಯಕರ್ತರಿಗೆ ನೋವುಂಟು ಮಾಡಿದೆ. ಬಿಜೆಪಿ ಶಾಸಕರಿಂದ ನಡೆದ ಅಡ್ಡ ಮತದಾನ ಬೇರೆ ಬೇರೆ ಚರ್ಚೆಗಳನ್ನು ಹುಟ್ಟು ಹಾಕಿದೆ. ಹೀಗಾಗಿ ಫಲಿತಾಂಶದ ಮಾರನೇ ದಿನ ಆಣೆ ಪ್ರಮಾಣ, ಶಾಸಂಕಾಂಗ ಪಕ್ಷದ ಸಭೆ ಧರ್ಮಸ್ಥಳದಲ್ಲಿ ಆಗಬೇಕೇಂದು ಹೇಳಿದ್ದೆ. ನಾನು ಭಾವನಾತ್ಮಕ ವ್ಯಕ್ತಿ, ನನ್ನ ಮನಸ್ಸಿಗೆ ತೋಚಿದ್ದನ್ನು ಹೇಳಿದ್ದೇನೆ’ ಎಂದರು.’ಪಕ್ಷದ ಹಿರಿಯರು ಧರ್ಮಸ್ಥಳದ ತನಕ ಹೋಗುವುದು ಬೇಡ ಎಂದು ಹೇಳಿದ್ದರು. ನಾನು ದೇವರ ಪರಮ ಭಕ್ತನಾಗಿ ಈ ಕ್ಷೇತ್ರಕ್ಕೆ ಬಂದಿದ್ದೇನೆ. ಸಾಕಷ್ಟು ಅಪಪ್ರಚಾರ ಹಿಂದೆಯೂ ಆಗಿದೆ, ಈಗಲೂ ಆಗಿದೆ. ವಿಜಯೇಂದ್ರ ಮತ್ತು ಸಿಎಂ ಡಿಕೆಶಿ ನಡುವೆ ವ್ಯವಹಾರಿಕ ಸಂಬಂಧ, ಆತ್ಮೀಯತೆ ಇದೆ ಎಂದು ಆರೋಪ ಮಾಡಿದರು. ನಾನೇ ಅಡ್ಡ ಮತದಾನಕ್ಕೆ ಸಹಕಾರ ನೀಡಿದ್ದೇನೆ ಎಂಬ ಚರ್ಚೆಯನ್ನು ನಮ್ಮವರೇ ಮಾಡಿದರು’ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಆಶೀರ್ವಾದದಿಂದ ಪಕ್ಷದ ರಾಜ್ಯಾಧ್ಯಕ್ಷ ಆಗಿದ್ದೇನೆ. ರಾಜ್ಯಾಧ್ಯಕ್ಷನಾಗಿ ಇಂತಹ ಕೀಳು ಮಟ್ಟದ ಯೋಚನೆ ಮಾಡುವುದಿಲ್ಲ ಎಂದು ಹೇಳಿದರು.’ಮೂರ್ನಾಲ್ಕು ದಿನ ದೆಹಲಿಯಲ್ಲಿದ್ದು ಪಕ್ಷದ ಹಿರಿಯರನ್ನು ಭೇಟಿ ಮಾಡಿ ಬಂದಿದ್ದೇನೆ. ಗುರುವಾರ ರಾತ್ರಿ ದೆಹಲಿಯಿಂದ ನೇರವಾಗಿ ಮಂಗಳೂರಿಗೆ ಬಂದು ಧರ್ಮಸ್ಥಳಕ್ಕೆ ತಲುಪಿದ್ದೇನೆ.
ಮಂಜುನಾಥ ದೇವರಿಗೆ ಪ್ರಾರ್ಥನೆ ಸಲ್ಲಿಸಿ, ಭೀಕರ ಬರಗಾಲಪರಿಸ್ಥಿತಿ ದೂರವಾಗಲಿ ಎಂದು ಬೇಡಿಕೊಂಡಿದ್ದೇನೆ. ಕರ್ನಾಟಕದಲ್ಲಿ ಮತ್ತೊಮ್ಮೆ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರಬೇಕು. ಹಿಂದೂಗಳ ರಕ್ಷಣೆ ಮಾಡುವ ಸರ್ಕಾರ ಬರಬೇಕು. ಈ ಬಗ್ಗೆ ಪ್ರಾರ್ಥನೆ ಸಲ್ಲಿಸಿದ್ದೇನೆ’ ಎಂದು ವಿಜಯೇಂದ್ರ ಹೇಳಿದರು.
ಬಿಡದಿ ಟೌನ್ ಶಿಪ್ ಬಗ್ಗೆ ಪ್ರತಿಕ್ರಿಯೆ
ಬಿಡದಿ ಟೌನ್ ಶಿಪ್ ಕುರಿತ ಪ್ರಶ್ನೆ ಗೆ ಉತ್ತರಿಸಿದ ಅವರು, ‘ರೈತರನ್ನು ಒಕ್ಕಲೆಬ್ಬಿಸಲು ನಾವು ಬಿಡುವುದಿಲ್ಲ. ನಾವೂ ಹೋರಾಟ ಆರಂಭಿಸುತ್ತೇವೆ. ನಾಳೆ ಈ ಬಗ್ಗೆ ಬೆಂಗಳೂರಿನಲ್ಲಿ ಘೋಷಣೆ ಮಾಡುತ್ತೇನೆ’ ಎಂದರು. ಬಿಜೆಪಿ ಸ್ಥಳೀಯ ಶಾಸಕರು, ಸಂಸದರು ಜೊತೆಗಿದ್ದರು.











































