ಮೈಸೂರು: ‘ ಕಾಂಗ್ರೆಸ್ ಕಾರ್ಯಕರ್ತರು ಎಸ್ ಐಆರ್ಪ್ರಕ್ರಿಯೆಯನ್ನು ಎರಡನೇ ಸ್ವಾತಂತ್ರ್ಯ ಹೋರಾಟ ಎಂದು ಭಾವಿಸಿ ಯಾವ ಮತದಾರರ ಹೆಸರೂ ಕೈಬಿಡದಂತೆ ನೋಡಿಕೊಳ್ಳಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಹೇಳಿದರು.
ಇಲ್ಲಿನ ಜೆ.ಕೆ.ಮೈದಾನದಲ್ಲಿ ಭಾನುವಾರ ಕಾಂಗ್ರೆಸ್ ಆಯೋಜಿಸಿದ್ದ ಮೈಸೂರು ವಿಭಾಗೀಯ ಮಟ್ಟದ ಎಸ್ ಐಆರ್ ಜಾಗೃತಿ ಸಮಾವೇಶದಲ್ಲಿ ಅವರು ಮಾತನಾಡಿದರು.* ಮತದಾನದ ಹಕ್ಕೇ ನಮಗೆ ಎ.ಕೆ. 47. ಈ ಅಸ್ತ್ರವನ್ನು ಉಳಿಸಿಕೊಳ್ಳಲು ನಾವೆಲ್ಲ ಹೋರಾಟ ಮಾಡಬೇಕು. ಇಲ್ಲವಾದರೆ ದೇಶ ಮತ್ತೆ ಗುಲಾಮಗಿರಿಗೆ ಹೋಗುತ್ತದೆ’ ಎಂದು ಎಚ್ಚರಿಸಿದರು.’ಬಿಜೆಪಿ ಹಾಗೂ ಆರ್ ಎಸ್ ಎಸ್ ಪ್ರೇರಿತ ಎಸ್ ಐಆರ್ ಇದಾಗಿದೆ. ಪರಿಷ್ಕರಣೆಗೆ ನಮ್ಮ ವಿರೋಧ ಇಲ್ಲ. ಸತ್ತವರು, ಎರಡೆರಡು ಕಡೆ ಇರುವವರ ಹೆಸರು ಕೈಬಿಡಿ. ಆದರೆ ಅರ್ಹರನ್ನು ಜಾತಿ ಆಧಾರದಲ್ಲಿ ಕೈಬಿಡಲು ಅವಕಾಶ ನೀಡುವುದಿಲ್ಲ. ಇದು ಪ್ರಜಾಪ್ರಭುತ್ವಕ್ಕೆ ಆಘಾತಕಾರಿ ವಿಷಯ’ ಎಂದರು.
‘ಬಿಜೆಪಿ ಕೇವಲ ಧರ್ಮಾಧಾರಿತ, ಶ್ರೇಣಿಕೃತ ರಾಜಕಾರಣದಲ್ಲಿ ನಂಬಿಕೆ ಇಟ್ಟಿರುವ ಪಕ್ಷ. ಅವರಿಗೆ ಸಂವಿಧಾನ, ತ್ರಿವರ್ಣ ಧ್ವಜ, ಜಾತ್ಯತೀತತೆ ಮೇಲೆ ನಂಬಿಕೆ ಇಲ್ಲ. ನಾವೆಲ್ಲರೂ ಜೊತೆಗೂಡಿ ಸಂವಿಧಾನ ಉಳಿಸಬೇಕಿದೆ’ ಎಂದರು.











































