ಹೂಸ್ಟನ್: ಕೊನೆಯ ಕ್ಷಣದವರೆಗೂ ರೋಮಾಂಚನಕಾರಿಯಾಗಿಸಾಗಿದ ಪಂದ್ಯದಲ್ಲಿ ಸ್ಟಾಪೇಜ್-ಟೈಮ್‌ನಲ್ಲಿ (ಹೆಚ್ಚುವರಿ ಸಮಯ) ಸಿಡಿದ ಸ್ಟೀಫನ್ ಯುಸ್ಟಾಕಿಯೋ ಅವರ ಅದ್ಭುತ ಗೋಲಿನ ನೆರವಿನಿಂದ ಕೆನಡಾ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ ರೋಚಕ ಜಯ ಸಾಧಿಸಿದೆ. ಈ ಮೂಲಕ ಫುಟ್ಬಾಲ್ ವಿಶ್ವಕಪ್ ಇತಿಹಾಸದಲ್ಲೇ ಕೆನಡಾ ತನ್ನ ಮೊದಲ ನಾಕೌಟ್ ಗೆಲುವನ್ನು ದಾಖಲಿಸಿ ಸಂಭ್ರಮಿಸಿದೆ.
ಕೊನೆ ಕ್ಷಣದ ಹೀರೋ ಯುಸ್ಟಾಕಿಯೋ!
ಪಂದ್ಯದಾದ್ಯಂತ ಉಭಯ ತಂಡಗಳು ಗೋಲು ಬಾರಿಸಲು ತೀವ್ರ ಹೋರಾಟ ನಡೆಸಿದವು. ಆದರೆ, ಹೆಚ್ಚುವರಿ ಅವಧಿಯಲ್ಲಿ ದಕ್ಷಿಣ ಆಫ್ರಿಕಾದ ಡಿಫೆಂಡರ್‌ಗಳು ಹೆಡರ್ ಮೂಲಕ ಚೆಂಡನ್ನು ಕ್ಲಿಯರ್ ಮಾಡಲು ಮಾಡಿದ ಸಣ್ಣ ತಪ್ಪನ್ನು ಸರಿಯಾಗಿ ಬಳಸಿಕೊಂಡ ಕೆನಡಾದ ಸ್ಟೀಫನ್ ಯುಸ್ಟಾಕಿಯೋ ಗೋಲು ಬಾರಿಸುವ ಮೂಲಕ ಕೆನಡಾ ಪಾಲಿನ ರಿಯಲ್ ಹೀರೋ ಎನಿಸಿಕೊಂಡರು.
ಪಂದ್ಯದ ಆರಂಭದಿಂದಲೇ ಕೆನಡಾ ತಂಡವು ಪೂರ್ಣ ಪ್ರಾಬಲ್ಯ ಸಾಧಿಸಿತ್ತು. ಪಂದ್ಯದಲ್ಲಿ ಕೆನಡಾ ಒಟ್ಟು 18 ಬಾರಿ ಗೋಲು ಬಾರಿಸಲು ಯತ್ನಿಸಿದ್ದು, ಅದರಲ್ಲಿ 12 ಬಾರಿ ದಕ್ಷಿಣ ಆಫ್ರಿಕಾದ ಗೋಲು ಪೆಟ್ಟಿಗೆಯ ಕಡೆಗೆ ದಾಳಿ ನಡೆಸಿತ್ತು. ಇದರಲ್ಲಿ 7 ಶಾಟ್‌ಗಳು ನೇರವಾಗಿ ಗೋಲಿನ ಗುರಿ ಹೊಂದಿದ್ದವು. ಇದಕ್ಕೆ ವಿರುದ್ಧವಾಗಿ ದಕ್ಷಿಣ ಆಫ್ರಿಕಾ ಕೇವಲ ಒಂದು ಶಾಟ್ ಅನ್ನು ಮಾತ್ರ ಗುರಿಯತ್ತ ಹೊಡೆಯಲು ಶಕ್ತವಾಗಿತ್ತು.ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಕೆನಡಾದ ಸ್ಟಾರ್ ಆಟಗಾರ ಹಾಗೂ ಬೇಯರ್ನ್ ಮ್ಯೂನಿಚ್ ತಂಡದ ಡಿಫೆಂಡರ್ ಅಲ್ಫಾನ್ನೋ ಡೇವಿಸ್, ಪಂದ್ಯದ 75ನೇ ನಿಮಿಷದಲ್ಲಿ ಮೈದಾನ ಪ್ರವೇಶಿಸಿದ್ದು ಕ್ರೀಡಾಂಗಣದಲ್ಲಿದ್ದ ಅಭಿಮಾನಿಗಳಲ್ಲಿ ಹೊಸ ಜೋಶ್ ತುಂಬಿತು. ಮೇ 6ರ ನಂತರ ಗಾಯದ ಬಳಿಕ ಅವರ ಮೊದಲ ಪ್ರದರ್ಶನ ಇದಾಗಿದ್ದು, ಮೈದಾನಕ್ಕೆ ಬಂದ ತಕ್ಷಣವೇ ಅವರು ಪ್ರಾಮಿಸ್ ಡೇವಿಡ್‌ಗೆ ಗೋಲು ಬಾರಿಸಲು ಅತ್ಯುತ್ತಮ ಪಾಸ್ ನೀಡಿದರು.ಆದರೆ ಆ ಯತ್ನವು ಸ್ವಲ್ಪದರಲ್ಲೇ ವಿಫಲವಾಯಿತು.ಈ ಗೆಲುವಿನೊಂದಿಗೆ ಕ್ವಾರ್ಟರ್ ಫೈನಲ್ ರೇಸ್‌ನಲ್ಲಿ ಮುನ್ನಡೆದಿರುವ ಕೆನಡಾ ತಂಡವು, ಸೋಮವಾರ ಮೆಕ್ಸಿಕೋದ ಗ್ವಾಡಾಲುಪೆಯಲ್ಲಿ ನಡೆಯಲಿರುವ ಮುಂದಿನ ಪಂದ್ಯದಲ್ಲಿ ಮೊರಾಕೊ ಮತ್ತು ನೆದರ್ಲ್ಯಾಂಡ್ಸ್ ನಡುವಿನ ಪಂದ್ಯದ ವಿಜೇತರನ್ನು ಎದುರಿಸಲಿದೆ.











































