ಬೆಂಗಳೂರು: ಪಕ್ಷದ ರಾಷ್ಟ್ರೀಯ ಮತ್ತು ರಾಜ್ಯ ನಾಯಕರ ವಿರುದ್ಧಅವಹೇಳನಕಾರಿ ಆರೋಪ ಮಾಡಿ ಶಿಸ್ತು ಉಲ್ಲಂಘಿಸಿದ ಆರೋಪದಲ್ಲಿ ಬಿಜೆಪಿ ರಾಜ್ಯ ಘಟಕದ ವಕ್ತಾರ, ಮೈಸೂರಿನ ಎಂ.ಜಿ. ಮಹೇಶ್ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ 6 ವರ್ಷಗಳ ಅವಧಿಗೆ ಉಚ್ಚಾಟಿಸಲಾಗಿದೆ.
ಜೂನ್ 19ರಂದು ನಡೆದ ಪಕ್ಷದ ಪ್ರಮುಖರ ಸಭೆಯಲ್ಲಿ ಎಂ.ಜಿ. ಮಹೇಶ್ ಅವರು ಹಿರಿಯ ನಾಯಕರ ವಿರುದ್ಧ ಆಧಾರರಹಿತ ಮತ್ತು ಕೀಳುಮಟ್ಟದ ಆರೋಪಗಳನ್ನು ಮಾಡುವ ಮೂಲಕ ಪಕ್ಷದ ಶಿಸ್ತು ಉಲ್ಲಂಘಿಸಿದ್ದರು. ಈ ಸಂಬಂಧ ಅವರಿಗೆ ರಾಜ್ಯ ಶಿಸ್ತು ಸಮಿತಿಯು ನೋಟಿಸ್ ಜಾರಿ ಮಾಡಿ ಸ್ಪಷ್ಟಿಕರಣ ಕೇಳಿತ್ತು.ಆದರೆ, ಅವರು ನೀಡಿದ ಸ್ಪಷ್ಟಿಕರಣವು ತೃಪ್ತಿಕರವಲ್ಲದ ಕಾರಣ, ತಕ್ಷಣದಿಂದ ಜಾರಿಗೆ ಬರುವಂತೆ ಅವರನ್ನು ಪಕ್ಷದ ಎಲ್ಲಾ ಜವಾಬ್ದಾರಿಗಳಿಂದ ಮುಕ್ತಗೊಳಿಸಿ, 6 ವರ್ಷಗಳ ಕಾಲ ಉಚ್ಚಾಟನೆ ಮಾಡಲಾಗಿದೆ ಎಂದು ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜು ಪಾಟೀಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.











































