ನಿರ್ಣಾಯಕ ಖನಿಜಗಳನ್ನು ‘ಅಸ್ತ್ರೀಕರಣ’ ಮಾಡುವುದು ಜಾಗತಿಕ ಬೆಳವಣಿಗೆಗೆ ಅಡ್ಡಿಯಾಗಬಹುದು: ಮೋದಿ

Picture of Savistara

Savistara

Bureau Report

ಹೊಸದಿಲ್ಲಿ: ಬ್ರಿಕ್ಸ್ ಶೃಂಗಸಭೆಯ ಸಮಾರೋಪ ಭಾಷಣದಲ್ಲಿಎಲ್ಲರನ್ನೂ ಒಳಗೊಂಡ ಅಭಿವೃದ್ಧಿಗೆ ಒತ್ತು ನೀಡಿದ ಪ್ರಧಾನಿ ನರೇಂದ್ರ ಮೋದಿ, ತಂತ್ರಜ್ಞಾನ ಮತ್ತು ನಿರ್ಣಾಯಕ ಖನಿಜಗಳನ್ನು ‘ಅಸ್ತ್ರೀಕರಣ’ ಮಾಡುವ ಕ್ರಮಗಳ ವಿರುದ್ಧ ರವಿವಾರ (ಸೆ.13) ಎಚ್ಚರಿಕೆ ನೀಡಿ,ಇಂತಹ ಕ್ರಮಗಳು ಸಾಮಾನ್ಯ ಬೆಳವಣಿಗೆಗೆ ‘ಅಡ್ಡಿ’ ಉಂಟುಮಾಡಬಹುದು ಹೇಳಿದ್ದಾರೆ.’ಗ್ಲೋಬಲ್ ಸೌತ್’ ದೇಶಗಳ ಬ್ರಿಕ್ಸ್ ಮೇಲಿನ ವಿಶ್ವಾಸ ಹೆಚ್ಚಾಗಿದೆ ಎಂದು ವೈಯಕ್ತಿಕ ಅನುಭವದ ಆಧಾರದಲ್ಲಿ ಹೇಳಬಲ್ಲೆ. ಏಕೆಂದರೆ ಇಲ್ಲಿ ಅವರ ಧ್ವನಿಗಳಿಗೆ ಮನ್ನಣೆ ದೊರೆಯುತ್ತಿದೆ, ಅವರ ಅನುಭವಗಳನ್ನು ಗೌರವಿಸಲಾಗುತ್ತಿದೆ ಹಾಗೂ ಅವರಿಗಾಗಿ ಮಾತ್ರವಲ್ಲದೆ, ಅವರ ಸಹಭಾಗಿತ್ವದಲ್ಲೇ ಪರಿಹಾರಗಳನ್ನು ರೂಪಿಸಲಾಗುತ್ತಿದೆ ಎಂದು ಮೋದಿ ಹೇಳಿದರು.ಬ್ರಿಕ್ಸ್‌ನ ಶಕ್ತಿ ಅದರ ವೈವಿಧ್ಯತೆ ಮತ್ತು ಸಹಕಾರದಲ್ಲಿದೆ. ನಾವು ವಿಭಿನ್ನ ವಾಸ್ತವಿಕತೆಗಳಲ್ಲಿ ಬೇರೂರಿದ್ದರೂ, ಸಹಕಾರದ ಮೂಲಕ ಒಟ್ಟಾಗಿ ಬೆಳೆಯುತ್ತೇವೆ. ಮಾನವಕುಲದ ಒಳಿತಿಗಾಗಿ ಪ್ರಗತಿಯ ಹಾದಿಯಲ್ಲಿ ಮುನ್ನಡೆಯುತ್ತೇವೆ. ನಮ್ಮ ವೈವಿಧ್ಯತೆಯೇ ನಮ್ಮ ಗುರುತಾಗಿ ಉಳಿಯಲಿ, ಸಹಕಾರವೇ ನಮ್ಮ ಪ್ರೇರಣೆಯಾಗಲಿ ಹಾಗೂ ನಮ್ಮ ಪ್ರಗತಿಯ ಲಾಭ ಇಡೀ ಮಾನವಕುಲಕ್ಕೆ ದೊರೆಯಲಿ ಎಂದು ಮೋದಿ ಆಶಿಸಿದರು.

ಈ ನಾಲ್ಕು ಆಧಾರಸ್ತಂಭಗಳನ್ನು ಮುಂದಿಟ್ಟುಕೊಂಡು ಬ್ರಿಕ್ಸ್ ಮೂಲಕ ಎಲ್ಲರನ್ನೂ ಒಳಗೊಂಡ ಜಾಗತಿಕ ಬೆಳವಣಿಗೆಯನ್ನು ಉತ್ತೇಜಿಸಲು ಪ್ರಯತ್ನಿಸಲಾಗಿದೆ. ಬ್ರಿಕ್ಸ್‌ನೊಳಗೆ ಅಭಿವೃದ್ಧಿಪಡಿಸುವ ಪರಿಹಾರಗಳ ಪ್ರಯೋಜನ ಕೇವಲ ಬ್ರಿಕ್ಸ್ ಗುಂಪಿಗೆ ಸೀಮಿತವಾಗಬಾರದು. ‘ಗ್ಲೋಬಲ್ ಸೌತ್’ ದೇಶಗಳ ಅಗತ್ಯಗಳಿಗೆ ಅನುಗುಣವಾಗಿ ಅವುಗಳನ್ನು ಅಳವಡಿಸಿಕೊಳ್ಳಲು ಮತ್ತು ಸುಲಭವಾಗಿ ಲಭ್ಯವಾಗುವಂತೆ ಮಾಡಬೇಕು ಎಂಬುದು ನಮ್ಮ ನಂಬಿಕೆ ಎಂದು ಪ್ರಧಾನಿ ಮೋದಿ ಹೇಳಿದರು.ಭಾರತೀಯ ನಾಗರಿಕತೆಯಲ್ಲಿ ಪ್ರಕೃತಿಯನ್ನು ತಾಯಿಯಂತೆ ಪೂಜಿಸಲಾಗುತ್ತದೆ. ಶತಮಾನಗಳಿಂದಲೂ ಅಭಿವೃದ್ಧಿ ಮತ್ತು ಪರಿಸರ ಪರಸ್ಪರ ಪರ್ಯಾಯಗಳಲ್ಲ, ಬದಲಾಗಿ ಒಂದಕ್ಕೊಂದು ಪೂರಕವಾಗಿವೆ ಎಂಬ ನಂಬಿಕೆ ನಮ್ಮಲ್ಲಿದೆ. ಬ್ರಿಕ್ಸ್‌ನಲ್ಲೂ ಮಾನವ ಅಭಿವೃದ್ಧಿ ಮತ್ತು ಪರಿಸರದ ನಡುವೆ ಸಮತೋಲನಕ್ಕೆ ಒತ್ತು ನೀಡಲಾಗಿದೆ. ಇದು ಸುಸ್ಥಿರತೆಯ ಅಡಿಪಾಯವಾಗಿದ್ದು, ಭವಿಷ್ಯದ ಪೀಳಿಗೆಗಳತ್ತ ನಮ್ಮ ಹೊಣೆಗಾರಿಕೆಯಾಗಿದೆ ಎಂದು ಮೋದಿ ಹೇಳಿದರು.”ಈ ನಿಟ್ಟಿನಲ್ಲಿ ಹಲವು ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಲಾಗಿದೆ. ಸ್ಮಾರ್ಟ್‌ ಗ್ರಿಡ್‌ಗಳು ಮತ್ತು ಇಂಧನ ಸಂಗ್ರಹಣೆಗೆ ಸಂಬಂಧಿಸಿದಂತೆ ಬ್ರಿಕ್ಸ್‌ ಡಿಜಿಟಲ್ ಸೆಂಟರ್ ಆಫ್ ಎಕ್ಸಲೆನ್ಸ್ ಸ್ಥಾಪಿಸಲಾಗಿದೆ. ಇದರಿಂದ ಸ್ವಚ್ಛ ಇಂಧನ ವ್ಯವಸ್ಥೆಗಳನ್ನು ಮತ್ತಷ್ಟು ವಿಶ್ವಾಸಾರ್ಹ, ಪರಿಣಾಮಕಾರಿ ಮತ್ತು ಎಲ್ಲರಿಗೂ ಸುಲಭವಾಗಿ ಲಭ್ಯವಾಗುವಂತೆ ಮಾಡಲು ನೆರವಾಗಲಿದೆ” ಎಂದರು.

”ಕೃಷಿ ಪರಿಸರಶಾಸ್ತ್ರ (ಅಕ್ರೋಇಕಾಲಜಿ) ಮತ್ತು ಪುನರುತ್ಪಾದಕ ಕೃಷಿಗೆ ಸಂಬಂಧಿಸಿದ ಶ್ರೇಷ್ಠತಾ ಕೇಂದ್ರಗಳು ಸಾಂಪ್ರದಾಯಿಕ ಜ್ಞಾನವನ್ನು ಆಧುನಿಕ ವಿಜ್ಞಾನದೊಂದಿಗೆ ಸಂಯೋಜಿಸಲಿವೆ. ಸಮುದಾಯ ಆಧಾರಿತ ಹವಾಮಾನ ಹೊಂದಾಣಿಕೆಗೆ ರೂಪಿಸಲಾದ ತತ್ವಗಳು, ಹವಾಮಾನ ಬದಲಾವಣೆಯ ವಿರುದ್ಧದ ಕ್ರಮಗಳಲ್ಲಿ ಸ್ಥಳೀಯ ಹಾಗೂ ಮೂಲನಿವಾಸಿ ಜ್ಞಾನವನ್ನು ಪ್ರಮುಖ ಆಧಾರವನ್ನಾಗಿ ಮಾಡಲಿವೆ” ಎಂದು ಪ್ರಧಾನಿ ಹೇಳಿದರು.

[t4b-ticker]
error: Content is protected !!