ಬೆಂಗಳೂರು: ‘ಗಣೇಶೋತ್ಸವ ಸಂದರ್ಭದಲ್ಲಿ ಕಾನೂನುಬಾಹಿರ ಚಟುವಟಿಕೆಗಳಿಗೆ ಅವಕಾಶ ನೀಡಬಾರದು ಎಂಬ ಪೊಲೀಸರ ಕ್ರಮವನ್ನು ಯಾರೂ ವಿರೋಧಿಸುವುದಿಲ್ಲ. ಆದರೆ, ಗಣೇಶ ಮೂರ್ತಿ ವಿಸರ್ಜನೆ ಸಂದರ್ಭದಲ್ಲಿ ಸಾರ್ವಜನಿಕ ರಸ್ತೆಗಳಲ್ಲೂ ಪಟಾಕಿ ಸಿಡಿಸಬಾರದು ಎಂದು ನಿರ್ಬಂಧದ ರೀತಿಯ ಹೇಳಿಕೆಗಳು ಸ್ವೀಕಾರಾರ್ಹವಲ್ಲ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಮಸೀದಿ ಒಳಗೆ ಪ್ರವೇಶಿಸಿ ಪಟಾಕಿ ಸಿಡಿಸುವುದು ಕಾನೂನುಬಾಹಿರ. ಅದಕ್ಕೆ ಯಾರೂ ಅವಕಾಶ ನೀಡಬಾರದು. ಆದರೆ, ಅದೇ ಕಾರಣವನ್ನು ಮುಂದಿಟ್ಟುಕೊಂಡು ಸಾರ್ವಜನಿಕ ರಸ್ತೆಗಳಲ್ಲೂ ಪಟಾಕಿ ಸಿಡಿಸಬಾರದು ಎಂದು ಹೇಳುವುದು ಅತಿರೇಕದ ಕ್ರಮ’ ಎಂದು ಆಕ್ರೋಶ ವ್ಯಕ್ತಪಡಿಸಿದರು.’ಹಿಂದೂ ಸಮಾಜ ಅತ್ಯಂತ ಶಾಂತಿ ಮತ್ತು ಸಂಯಮದಿಂದ ಹಬ್ಬಗಳನ್ನು ಆಚರಿಸುತ್ತಿದೆ. ಅವರ ತಾಳ್ಮೆಯನ್ನು ಪರೀಕ್ಷಿಸುವಂತಹ ಕ್ರಮಗಳನ್ನು ಸರ್ಕಾರ ಕೈಗೊಳ್ಳಬಾರದು. ಧಾರ್ಮಿಕ ಆಚರಣೆಗಳಿಗೆ ಅನಗತ್ಯ ಅಡ್ಡಿ, ಬೆದರಿಕೆ ಅಥವಾ ನಿರ್ಬಂಧ ಹೇರುವ ಮೂಲಕ ಪರಿಸ್ಥಿತಿ ಉದ್ವಿಗ್ನಗೊಂಡು ಮುಂದೆ ಕಾನೂನು ಸುವ್ಯವಸ್ಥೆ ಹದಗೆಟ್ಟರೆ ಅದಕ್ಕೆ ಕಾಂಗ್ರೆಸ್ ನೇತೃತ್ವದ ಸರ್ಕಾರ ಮತ್ತು ಗೃಹ ಸಚಿವರೇ ಹೊಣೆ’ ಎಂದು ಎಚ್ಚರಿಕೆ ನೀಡಿದರು.’ಪೊಲೀಸ್ ಅಧಿಕಾರಿಯ ಹೇಳಿಕೆಯ ಕುರಿತು ಗೃಹ ಸಚಿವ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ತಕ್ಷಣ ಗಮನಹರಿಸಬೇಕು. ಕಾನೂನಿನ ಮಿತಿಯನ್ನು ಮೀರಿ ಬೆದರಿಕೆಯ ರೀತಿಯಲ್ಲಿ ಮಾತನಾಡಿರುವುದು ಸಾಬೀತಾದರೆ ಸಂಬಂಧಿಸಿದ ಅಧಿಕಾರಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.
ಅಧಿವೇಶನದಲ್ಲಿ ರೈತರ ಬಗ್ಗೆ ಚರ್ಚೆ: ‘ರಾಜ್ಯದಲ್ಲಿ ತೀವ್ರಬರಗಾಲವಿದ್ದರೂ ಕಾಂಗ್ರೆಸ್ ಸರ್ಕಾರ ರೈತರ ಸಮಸ್ಯೆಗಳಿಗೆ ಗಂಭೀರವಾಗಿ ಸ್ಪಂದಿಸುತ್ತಿಲ್ಲ. ಮೋಡ ಬಿತ್ತನೆ ಹೆಸರಿನಲ್ಲಿ ಜನರ ಹಣ ವ್ಯರ್ಥ ಮಾಡಲಾಗಿದೆ. ನೀರಿನ ಕೊರತೆ, ಬೆಳೆ ನಷ್ಟ ಮೊದಲಾದ ವಿಚಾರಗಳನ್ನು ಇರಿಸಿಕೊಂಡು ರೈತರ ಸಮಸ್ಯೆಗಳ ಬಗ್ಗೆ ವಿಧಾನ ಮಂಡಲದ ವಿಶೇಷ ಅಧಿವೇಶನದಲ್ಲಿ ಚರ್ಚೆ ಮಾಡುವಂತೆ ಸರ್ಕಾರವನ್ನು ಒತ್ತಾಯಿಸುತ್ತೇವೆ’ ಎಂದು ವಿಜಯೇಂದ್ರ ಹೇಳಿದರು.

















































