ಫತೇಪುರ್ (ಉತ್ತರ ಪ್ರದೇಶ): ಮೊಬೈಲ್‌ನಲ್ಲಿ ನೆಟ್‌ವರ್ಕ್ ಸಿಗುತ್ತಿಲ್ಲ ಹಾಗೂ 5G ಇಂಟರ್ನೆಟ್ ವೇಗ ಕಡಿಮೆಯಾಗಿದೆ ಎಂಬ ಆಕ್ರೋಶಕ್ಕೆ ಗ್ರಾಮಸ್ಥರೆಲ್ಲರೂ ಸೇರಿ ಟೆಲಿಕಾಂ ಕಂಪನಿಯ ನೌಕರನೊಬ್ಬನನ್ನು ಟವರ್ ಕಂಬಕ್ಕೆ ಕಟ್ಟಿಹಾಕಿ ಬರ್ಬರವಾಗಿ ಹಲ್ಲೆ ನಡೆಸಿದ ವಿಚಿತ್ರ ಹಾಗೂ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಫತೇಪುರ್ ಜಿಲ್ಲೆಯಲ್ಲಿ ನಡೆದಿದೆ..
ಕಂಬಕ್ಕೆ ಕಟ್ಟಿಹಾಕಿ ದೌರ್ಜನ್ಯ:ಫತೇಪುರ್ ಜಿಲ್ಲೆಯ ಗ್ರಾಮವೊಂದರಲ್ಲಿ ರಿಲಯನ್ಸ್ ಜಿಯೋ (Jio) ಕಂಪನಿಯ 5G ಸೇವೆ ಕಳೆದ ಕೆಲವು ದಿನಗಳಿಂದ ತೀವ್ರ ತಾಂತ್ರಿಕ ತೊಂದರೆಗೊಳಗಾಗಿತ್ತು. ದಿನನಿತ್ಯದ ಕರೆ ಹಾಗೂ ಆನ್‌ಲೈನ್ ಪಾವತಿಗಳಿಗೆ ತೊಂದರೆಯಾದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಆಕ್ರೋಶಗೊಂಡಿದ್ದರು. ಇದೇ ವೇಳೆ ಟವರ್ ರಿಪೇರಿಗಾಗಿ ಆಗಮಿಸಿದ್ದ ತಾಂತ್ರಿಕ ಸಿಬ್ಬಂದಿಯನ್ನು ಸುತ್ತುವರೆದ ಸ್ಥಳೀಯ ಯುವಕರು, ಮಾತಿಗೆ ಮಾತು ಬೆಳೆದು ಆತನನ್ನು ಸ್ಥಳದಲ್ಲೇ ಇದ್ದ ಟವರ್ ಕಂಬಕ್ಕೆ ಹಗ್ಗದಿಂದ ಬಿಗಿದು ಕಟ್ಟಿಹಾಕಿ ಥಳಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್:”ನಾವು ಪ್ರತಿ ತಿಂಗಳು ಸಾವಿರಾರು ರೂಪಾಯಿ ರೀಚಾರ್ಜ್ ಮಾಡುತ್ತೇವೆ. ಆದರೆ 5G ನೆಟ್‌ವರ್ಕ್ ಮಾತ್ರ ಸಿಗುವುದಿಲ್ಲ” ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ತಾವು ಕೇವಲ ಕೆಳಹಂತದ ನೌಕರನೆಂದು ಆತ ಎಷ್ಟೇ ಮನವಿ ಮಾಡಿದರೂ ಕೇಳದ ಗ್ರಾಮಸ್ಥರು ಕೃತ್ಯ ಎಸಗಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವೈರಲ್ ಆಗಿದೆ.
ಪೊಲೀಸರ ಪ್ರವೇಶ ಹಾಗೂ ಪ್ರಕರಣ ದಾಖಲು:ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಕಂಬಕ್ಕೆ ಕಟ್ಟಲಾಗಿದ್ದ ನೌಕರನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕಾಯ್ದೆಯನ್ನು ಕೈಗೆತ್ತಿಕೊಂಡು ಹಲ್ಲೆ ನಡೆಸಿದ ಗ್ರಾಮಸ್ಥರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

















































