ಬೆಂಗಳೂರು: ಸಂಕಷ್ಟದಲ್ಲಿರುವ ಸಣ್ಣ ರೈತರ ನೆರವಿಗೆಮುಂದಾಗಿರುವ ರಾಜ್ಯ ಸರ್ಕಾರ, ಟ್ರ್ಯಾಕ್ಟರ್ ಮೂಲಕ ಉಚಿತವಾಗಿ ಉಳುಮೆ ಮಾಡಿಕೊಡುವ ‘ಮುಖ್ಯಮಂತ್ರಿ ನೇಗಿಲಯೋಗಿ ಯೋಜನೆ’ ಜಾರಿಗೆ ತರಲು ನಿರ್ಧರಿಸಿದೆ.
ಬುಧವಾರ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಜಿ.ಪರಮೇಶ್ವರ, ‘ಮೂರು ಎಕರೆಗಿಂತ ಕಡಿಮೆ ಭೂಮಿ ಹೊಂದಿರುವ ರೈತರ ಜಮೀನನ್ನು ಉಚಿತವಾಗಿ ಉಳುಮೆ ಮಾಡಿಕೊಡಲಾಗುವುದು. ರಾಜ್ಯದಲ್ಲಿ ಅಂತಹ 59 ಲಕ್ಷ ರೈತರು ಇದ್ದಾರೆ’ ಎಂದರು.’ಟ್ರ್ಯಾಕ್ಟರ್ ಇರುವವರು ತಮ್ಮ ಜಮೀನಿನ ಉಳುಮೆ ಮುಗಿಸಿದ ನಂತರ ಅದನ್ನು ಬಾಡಿಗೆಗೆ ಪಡೆಯಲಾಗುವುದು. ಸಾಧ್ಯವಾದರೆ ಟ್ರ್ಯಾಕ್ಟರ್‌ಗಳನ್ನು ಖರೀದಿಸಲಾಗುವುದು. ಪ್ರಾಯೋಗಿಕವಾಗಿ 31 ತಾಲ್ಲೂಕುಗಳಲ್ಲಿ ಯೋಜನೆ ಆರಂಭಿಸಲು ತೀರ್ಮಾನಿಸಲಾಗಿದೆ. ಇದಕ್ಕೆ ₹ 152 ಕೋಟಿ ಮೀಸಲಿಡಲಾಗಿದೆ’ ಎಂದರು.’ಗೌರಿಬಿದನೂರು ಶಾಸಕ ಪುಟ್ಟಸ್ವಾಮಿ ಗೌಡ ಬಡ ರೈತರಿಗೆ ಜಮೀನು ಉಳುಮೆ ಮಾಡಿಕೊಡುತ್ತಿದ್ದಾರೆ. ಈ ಯೋಜನೆಯನ್ನು ಮುಖ್ಯಮಂತ್ರಿ ಮತ್ತು ನಾನು ಗಮನಿಸಿದ್ದೇವೆ. ಬಹಳ ರೈತರ ಬಳಿ ಎತ್ತುಗಳಿಲ್ಲ. ಅಂಥವರು ತಮ್ಮ ಕೃಷಿ ಭೂಮಿಯನ್ನು ಬೀಳು ಬಿಡುತ್ತಾರೆ. ಕೃಷಿ ಉತ್ಪಾದನೆ ಪ್ರಮಾಣವನ್ನು ಹೆಚ್ಚಿಸುವುದರ ಜೊತೆಗೆ, ಉದ್ಯೋಗ ಸೃಷ್ಟಿ ಆಗಬೇಕು ಎಂಬ ಕಾರಣಕ್ಕೆ ಯೋಜನೆ ರೂಪಿಸಲಾಗಿದೆ. ಯೋಜನೆಗೆ ನಿಯಮಗಳನ್ನು ರೂಪಿಸಿ ಶೀಘ್ರದಲ್ಲಿ ಅನುಷ್ಠಾನಗೊಳಿಸಲಾಗುವುದು. ಮಳೆ ಬಂದು ಕೃಷಿ ಚಟುವಟಿಕೆ ಆರಂಭವಾದ ಬಳಿಕ ಚಾಲನೆ ನೀಡಲು ಉದ್ದೇಶಿಸಲಾಗಿದೆ. ಕೃಷಿ ಇಲಾಖೆಯ ಮೂಲಕ ಯೋಜನೆಗೆ ಜಾರಿಗೆ ಬರಲಿದೆ’ ಎಂದರು.
ಕಾರ್ಮಿಕರಿಗಾಗಿ ‘ಶ್ರಮಿಕ ನಿವಾಸ’
‘ಕೈಗಾರಿಕೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ದೂರದ ಊರುಗಳಲ್ಲಿ ಇರುತ್ತಾರೆ. ಕೆಲಸ ಮಾಡುವ ಜಾಗಕ್ಕೆ ಹತ್ತಿರದಲ್ಲಿಯೇ ಅವರು ವಾಸ ಮಾಡಲು ಮನೆ ಕಟ್ಟಿಕೊಡುವ ಉದ್ದೇಶದಿಂದ ‘ಶ್ರಮಿಕ ನಿವಾಸ’ ಎಂಬ ಹೊಸ ಯೋಜನೆ ರೂಪಿಸಲಾಗಿದೆ’ ಎಂದು ಪರಮೇಶ್ವರ ತಿಳಿಸಿದರು.
‘ದೊಡ್ಡ ಕಂಪನಿಗಳು 10 ಸಾವಿರ ಮನೆಗಳನ್ನು ಕಾರ್ಮಿಕರಿಗಾಗಿ ನಿರ್ಮಿಸಿ ಕೊಡಬೇಕೆಂದು ಸರ್ಕಾರ ಸೂಚನೆ ನೀಡಲಿದೆ. ಕಂಪನಿಯವರಿಗೆ ಸರ್ಕಾರ ಸಹಾಯ ಮಾಡಲಿದೆ. ಈ ಮನೆಗಳನ್ನು ನಿರ್ಮಿಸಲು ಕಂಪನಿಯಲ್ಲಿ ಇಂತಿಷ್ಟು ಕಾರ್ಮಿಕರು ಇರಬೇಕು. ಅದನ್ನು ಆಧರಿಸಿ ಯೋಜನೆಗೆ ಮಾನದಂಡಗಳನ್ನು ನಿಗದಿಪಡಿಸಲಾಗುವುದು. ಮನೆ ಕಟ್ಟಲು ಜಾಗ ಕೇಳಿದರೆ ನೀಡಲಾಗುವುದು. ಐಟಿ-ಬಿಟಿ ಸೇರಿದಂತೆ ಎಲ್ಲ ರೀತಿಯ ಉದ್ಯಮಗಳಿಗೆ ಇದು ಅನ್ವಯ ಆಗಲಿದೆ’ ಎಂದೂ ಹೇಳಿದರು.
ಬಡವರಿಗೆ ಉಚಿತ ನಿವೇಶನ: ‘ಪ್ರತಿ ಜಿಲ್ಲೆಯಲ್ಲಿ ಬಡವರಿಗೆಉಚಿತವಾಗಿ 50 ಸಾವಿರ ನಿವೇಶನ ಹಂಚಿಕೆ ಮಾಡಲು ನಿರ್ಣಯ ತೆಗೆದುಕೊಳ್ಳಲಾಗಿದೆ. ಆ ಮೂಲಕ ರಾಜ್ಯದಾದ್ಯಂತ ಒಟ್ಟು 15 ಲಕ್ಷ ನಿವೇಶನಗಳು ಹಂಚಿಕೆ ಆಗಲಿವೆ’ ಎಂದು ಪರಮೇಶ್ವರ ಹೇಳಿದರು.’ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದವರು, ಅಲ್ಪಸಂಖ್ಯಾತರು ಹಾಗೂ ಸಾಮಾನ್ಯ ವರ್ಗದ ವಸತಿರಹಿತ ಬಡವರಿಗೆ ನಿವೇಶನ ನೀಡಬೇಕೆಂಬ ಉದ್ದೇಶದಿಂದ ಈ ನಿರ್ಣಯ ತೆಗೆದುಕೊಳ್ಳಲಾಗಿದೆ. ತಲಾ 5 ಲಕ್ಷದಂತೆ ಮೂರು ಹಂತಗಳಲ್ಲಿ ನಿವೇಶನಗಳನ್ನು ನೀಡಲು ತೀರ್ಮಾನಿಸಲಾಗಿದೆ. ನವೆಂಬರ್ ವೇಳೆಗೆ ಮೊದಲ ಹಂತದಲ್ಲಿ ನಿವೇಶನ ಹಂಚಿಕೆ ಮಾಡುವ ಯೋಚನೆಯಿದೆ. ಈಗಾಗಲೇ ಜಿಲ್ಲಾಧಿಕಾರಿಗಳು10 ಸಾವಿರ ಎಕರೆ ಗುರುತಿಸಿದ್ದಾರೆ’ ಎಂದರು.
‘ವೈಮಾಂತರಿಕ್ಷ ನೀತಿ’ಗೆ ಸಂಪುಟ ಅಸ್ತು’
ವೈಮಾಂತರಿಕ್ಷ, ರಕ್ಷಣೆ, ವಿಮಾನಯಾನ ಬಿಡಿಭಾಗಗಳ ತಯಾರಿಕೆ ಮತ್ತಿತರ ಕ್ಷೇತ್ರಗಳಲ್ಲಿ ಕರ್ನಾಟಕವನ್ನು ಕೇಂದ್ರವನ್ನಾಗಿ ಮಾಡುವ ಉದ್ದೇಶದಿಂದ ರೂಪಿಸಿರುವ ‘ವೈಮಾಂತರಿಕ್ಷ ನೀತಿ 2026-31’ಕ್ಕೆ ಸಂಪುಟ ಸಭೆ ಅನುಮೋದನೆ ನೀಡಿದೆ’ನೂತನ ನೀತಿಯಡಿ ₹ 60 ಸಾವಿರ ಕೋಟಿ ಹೂಡಿಕೆಯ ಗುರಿ ಹೊಂದಲಾಗಿದೆ. ಇದರಿಂದ 60 ಸಾವಿರ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆಯಿದೆ’ ಎಂದು ಜಿ. ಪರಮೇಶ್ವರ ತಿಳಿಸಿದರು.’ನೀತಿಯಡಿ ಸರ್ಕಾರ ಮತ್ತು ಖಾಸಗಿ ವಲಯ ಹೂಡಿಕೆ ಮಾಡಲಿವೆ. ಇದರಲ್ಲಿ ಫೋಕಸ್ ಏರಿಯಾ, ನಾನ್- ಫೋಕಸ್ ಏರಿಯಾ ಎಂಬ ಎರಡು ವಲಯಗಳು ಇರಲಿವೆ. ವಲಯ-1ರಲ್ಲಿ ಶೇ 30ರಷ್ಟು, ವಲಯ-2ರಲ್ಲಿ ಶೇ 27.50, ವಲಯ- 3 ರಲ್ಲಿ ಶೇ 25ರಷ್ಟು ಬಂಡವಾಳ ಸಹಾಯಧನ ಸಿಗಲಿದೆ.ಎಚ್‌ಎಎಲ್‌ನಲ್ಲಿ 40 ವಿಮಾನಗಳನ್ನು ಟಾಟಾ ಕಂಪನಿಯವರು ತಯಾರಿಸುತ್ತಾರೆ. 97 ಲಘು ಯುದ್ಧ ವಿಮಾನಗಳ ತಯಾರಿಕೆ ಗುರಿಯೂ ಈ ನೀತಿಯ ಭಾಗವಾಗಿದೆ’ ಎಂದು ವಿವರಿಸಿದರು.
















































