ನಮ್ಮೂರ ಹಬ್ಬವೊಂದಕ್ಕೆ ಮನೆಯ ಹಿರಿಯರು, ದೂರದೂರಿನ ಸಂಬಂಧಿಕರೆಲ್ಲರೂ ಬಂದು ಸೇರಿಕೊಂಡಾಗ ಮನೆಯಲ್ಲಿ ಉಂಟಾಗುವ ಸಂಭ್ರಮವಿದೆಯಲ್ಲ, ಅದು ವರ್ಣನಾತೀತ. ಅಡುಗೆ ಮನೆಯಲ್ಲಿ ಒಲೆ ಧಗೆಯ ಜೊತೆಗೆ ನಗೆಯ ಹದ ಬೆರೆತು, ಮನೆಯ ಮೂಲೆಮೂಲೆಯೂ ಅತಿಥಿಗಳ ಕಳಕಳಿಯಿಂದ ಕಳೆಗಟ್ಟುತ್ತದೆ. ಅಚ್ಚರಿಯೆಂಬಂತೆ, ಇಂದು ನಮ್ಮ ವಿಶಾಲ ಭಾರತದ ಅಂಗಳವೂ ಅಕ್ಷರಶಃ ಅಂಥದ್ದೇ ಅತಿಥಿ ಸತ್ಕಾರದ ಸಂಭ್ರಮದಲ್ಲಿ ಮಿಂದೆದ್ದಿದೆ. ದೆಹಲಿಯ ರಾಜಪಥದ ಮಡಿಲಲ್ಲಿರುವ ಭವ್ಯ ‘ಭಾರತ ಮಂಟಪ’ದಲ್ಲಿ 18ನೇ ಬ್ರಿಕ್ಸ್ ಶೃಂಗಸಭೆಯ ಸಡಗರ ಮನೆಮಾಡಿದ್ದು, ಜಾಗತಿಕ ಗಣ್ಯರೆಲ್ಲರೂ ನಮ್ಮನೆಯ ಅತಿಥಿಗಳಾಗಿ ಬಂದು ಸೇರಿದ್ದಾರೆ.
ವಿಶ್ವದ ಪ್ರಮುಖ ನಾಯಕರೆಲ್ಲರೂ ಒಂದೇ ಸೂರಿನಡಿ ಬಂದಿದ್ದಾರೆ. ರಷ್ಯಾದ ಅಧ್ಯಕ್ಷ ಪ್ಲಾಡಿಮಿರ್ ಪುಟಿನ್, ಚೀನಾದ ಅಧ್ಯಕ್ಷ ಜಿನ್‌ಪಿಂಗ್, ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಚಿಯನ್, ದಕ್ಷಿಣ ಆಫ್ರಿಕಾದ ಸಿರಿಲ್ ರಾಮಫೋಸಾ ಹಾಗೂ ಈಜಿಪ್ಟ್ನ ಅಬ್ದುಲ್ ಫತಾಹ್ ಎಲ್-ಸಿಸಿ ಅವರಂತಹ ದಿಗ್ಗಜರು ನಮ್ಮ ಅತಿಥಿಗಳಾಗಿ ಹೆಜ್ಜೆ ಇಟ್ಟಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಹಬ್ಬದ ಮನೆಯ ಯಜಮಾನನ ಜವಾಬ್ದಾರಿಯಂತೆ ಎಲ್ಲರನ್ನೂ ಮುಖಃತಾ ಸ್ವಾಗತಿಸಿ, ಜಾಗತಿಕ ಒಳಿತಿನ ದಾರಿಯ ಬಗ್ಗೆ ಮುಕ್ತವಾಗಿ ಮಾತುಕತೆ ನಡೆಸುತ್ತಿದ್ದಾರೆ.ಕುಟುಂಬದಲ್ಲಿ ಕಷ್ಟ-ಸುಖ ಹಂಚಿಕೊಂಡು ಮುಂದಿನ ದಾರಿಯನ್ನು ರೂಪಿಸಿಕೊಳ್ಳುವ ಹಿರಿಯರಂತೆ, ಇಲ್ಲಿಯೂ ಜಾಗತಿಕ ಆರ್ಥಿಕ ಅನಿಶ್ಚಿತತೆಗಳನ್ನು ಎದುರಿಸುವುದು ಹೇಗೆ ಎನ್ನುವ ಗಂಭೀರ ಚಿಂತನೆ ನಡೆಯುತ್ತಿದೆ.
ಕೇವಲ ಮಾತುಕತೆ ಮಾತ್ರವಲ್ಲದೆ, ಸ್ಥಳೀಯ ಕರೆನ್ಸಿಗಳಲ್ಲೇ ಪರಸ್ಪರ ವ್ಯಾಪಾರ ವಹಿವಾಟು ನಡೆಸುವ ಹೊಸ ಹೆಜ್ಜೆಯೂ ನಮ್ಮ ಮನೆಯ ಅಂಗಳದಿಂದಲೇ ಮೂಡಿಬರುತ್ತಿದೆ. ‘ಸ್ಥಳೀಯ ಸ್ಥಿತಿಸ್ಥಾಪಕತ್ವ, ನಾವೀನ್ಯತೆ, ಸಹಕಾರ ಮತ್ತು ಸುಸ್ಥಿರತೆ’ ಎಂಬ ಧೈಯದೊಂದಿಗೆ, ನಾವೆಲ್ಲರೂ ಒಟ್ಟಾಗಿ ಬೆಳೆಯೋಣ ಎಂಬ ಸಂದೇಶವನ್ನು ಈ ಸಮಾವೇಶ ಸಾರುತ್ತಿದೆ.’ಭಾರತ್ ಇನ್ನೋವೇಟ್ಸ್’ ಪ್ರದರ್ಶನವನ್ನು ಒಟ್ಟಾಗಿ ವೀಕ್ಷಿಸುತ್ತಾ, ಜಂಟಿಯಾಗಿ ಗಿಡ ನೆಡುವ ಮೂಲಕ ಅತಿಥಿಗಳು ಮತ್ತು ಆತಿಥೇಯರ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಿದೆ. ಬಂಧುಗಳು ಮನೆಗೆ ಬಂದಾಗ ಉಂಟಾಗುವ ಹರ್ಷ ಹೇಗೆ ನಮ್ಮ ಮನಸ್ಸಿಗೆ ಮುದ ನೀಡುತ್ತದೆಯೋ, ಹಾಗೆಯೇ ವಿಶ್ವದ ದೊಡ್ಡಣ್ಣಂದಿರೆಲ್ಲರೂ ನಮ್ಮ ಮನೆಗೆ ಬಂದು ಸ್ನೇಹದ ಹಸ್ತ ಚಾಚಿರುವುದು ಭಾರತೀಯರಾದ ನಮಗೆ ಹೆಮ್ಮೆಯ ಕ್ಷಣ.
ನಮ್ಮೊಳಗಿನ ರಾಜಕೀಯ ಏನೇ ಇರಲಿ ಈ ನೆಂಟರ ಕೂಟ ನಮ್ಮ ದೇಶದ ಕೀರ್ತಿಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವುದರಲ್ಲಿ ಯಾವುದೇ ಸಂಶಯವಿಲ್ಲ.

















































