ಬೆಂಗಳೂರು: ‘ಗಣೇಶ ಬಿಜೆಪಿಯವರ ಆಸ್ತಿಯಲ್ಲ. ಗಣೇಶ ಹಬ್ಬದ ಆಚರಣೆಗೆ ಯಾವುದೇ ತಡೆ ಇಲ್ಲ’ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದರು.
ಸುದ್ದಿಗಾರರ ಜೊತೆ ಭಾನುವಾರ ಮಾತನಾಡಿದ ಅವರು, ‘ಸಮಾಜದಲ್ಲಿ ಅಶಾಂತಿ ಮೂಡಿಸಲು ಕುತಂತ್ರಗಳು ನಡೆಯುತ್ತಿದೆ. ಬಿಜೆಪಿಯವರು ಸಮಾಜಘಾತುಕ ಶಕ್ತಿಗಳನ್ನು ಬಳಕೆ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು. ಅಲ್ಲದೆ, ಎಚ್ಚರಿಕೆಯಿಂದ ಇರುವಂತೆ ಪೊಲೀಸರಿಗೆ ಸೂಚನೆ ನೀಡಿದ್ದೇನೆ ಎಂದರು.’ಗಣೇಶೋತ್ಸವ ಆಚರಣೆಗೆ ಸರ್ಕಾರ ಅನೇಕ ನಿರ್ಬಂಧ ಹೇರಿದೆ’ ಎಂಬ ವಿರೋಧ ಪಕ್ಷದ ನಾಯಕ ಆರ್. ಅಶೋಕ ಅವರ ಹೇಳಿಕೆ ಬಗ್ಗೆ ಕೇಳಿದಾಗ, ಅವರು ಈ ವಿಚಾರದಲ್ಲಿ ಕೋಮು ಪ್ರಚೋದನೆ ಮಾಡುತ್ತಿದ್ದಾರೆ’ ಎಂದರು.’ಬಿಜೆಪಿಯವರು ಏನಾದರೂ ಮಾಡಲಿ. ಬಾಲಗಂಗಾಧರ ತಿಲಕರು ಆರಂಭಿಸಿದ ಆಚರಣೆ ನಡೆದುಕೊಂಡು ಬರುತ್ತಿದೆ. ಗಣೇಶ ಹಬ್ಬವನ್ನು ಬಹಳ ಶಾಂತಿಯುತವಾಗಿ ಆಚರಣೆ ಮಾಡಬೇಕು. ಮೆರವಣಿಗೆ ಹೋಗುವಾಗ ಶಿಸ್ತು ಪಾಲನೆ ಆಗಬೇಕು. ವಿದ್ಯುತ್ ಕಂಬ, ತಂತಿಗಳ ಬಗ್ಗೆ ಎಚ್ಚರ ವಹಿಸಬೇಕು’ ಎಂದರು.
ಯಾರಿಗೂ ನಿರ್ಬಂಧ ಹೇರುವುದಿಲ್ಲ: ‘ಅಧಿಕಾರ ದುರುಪಯೋಗ ಮಾಡಿಕೊಂಡು ಯಾರಿಗೂ ನಿರ್ಬಂಧ ಹೇರುವುದಿಲ್ಲ. ಅದು ನಮ್ಮ ಕಾರ್ಯವೈಖರಿಯಲ್ಲ. ಬಿಜೆಪಿಯವರು ಕಾನೂನು ಚೌಕಟ್ಟಿನಲ್ಲಿ ಎಲ್ಲಿ ಬೇಕಾದರೂ ತಮ್ಮ ರಾಜಕೀಯ ಸಭೆ ಮಾಡಬಹುದು’ ಎಂದೂ ಮುಖ್ಯಮಂತ್ರಿ ಹೇಳಿದರು.’ಬಿಜೆಪಿ ಅಧ್ಯಕ್ಷರು ಅನಗತ್ಯವಾಗಿ ಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಕಾನೂನು ವ್ಯಾಪ್ತಿಯಲ್ಲಿ ಅವರು ಏನಾದರೂ ಮಾಡಬಹುದು, ಏನಾದರೂ ಹೇಳಬಹುದು. ಅವರು ಯಾವ ಮೈದಾನದಲ್ಲಿ ಕಾರ್ಯಕ್ರಮ ಮಾಡಿದರೂ ಅವರಿಗೆ ಅನುಮತಿ ನೀಡಿ ಎಂದು ನಾನೇ ಹೇಳಿದ್ದೇನೆ’ ಎಂದರು.
“ಬಿಜೆಪಿಯಿಂದ ಧರ್ಮ ರಾಜಕಾರಣ”
ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಅನುಮತಿ ನೀಡಲಾದ ರೂಟ್ ಮ್ಯಾಪ್‌ನಂತೆಯೇ ಗಣಪತಿ ಮೆರವಣಿಗೆ ಸಾಗಬೇಕು ಎಂಬ ಪೊಲೀಸರ ನಿರ್ದೇಶನವನ್ನು ಬಿಜೆಪಿ ಧರ್ಮ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದೆ’ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.’ಎಕ್ಸ್’ ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಅವರು “ನೀವೀಗ ‘ಧರ್ಮ ರಾಜಕಾರಣ’ ಆರಂಭಿಸಿರುವುದು ನಾಯಕ ಎನಿಸಿಕೊಳ್ಳುವುದಕ್ಕೋ ಅಥವಾ ಅಭದ್ರತೆಯಲ್ಲಿರುವ ವಿರೋಧ ಪಕ್ಷದ ನಾಯಕನ ಸ್ಥಾನ ಉಳಿಸಿಕೊಳ್ಳುವುದಕ್ಕೊ’ ಎಂದು ವಿರೋಧ ಪಕ್ಷದ ನಾಯಕ ಅಶೋಕ ಅವರನ್ನು ಉದ್ದೇಶಿಸಿ ಪ್ರಶ್ನಿಸಿದ್ದಾರೆ.’ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ಕೋಮು ಸಂಘರ್ಷಗಳನ್ನು ನಿಗ್ರಹಿಸುವ ವಿಷಯದಲ್ಲೂ ಸರ್ಕಾರ ಕಟ್ಟುನಿಟ್ಟಿನ ನಿಲುವು ಹೊಂದಿದೆ. ಪೊಲೀಸರ ಮೇಲೆ ದರ್ಪ ಮತ್ತು ದೌರ್ಜನ್ಯ ಪ್ರದರ್ಶಿಸುವುದನ್ನು ಸಹಿಸುವುದಿಲ್ಲ’ ಎಂದೂ ಪ್ರಿಯಾಂಕ್ ಹೇಳಿದ್ದಾರೆ.

















































