ಚುನಾವಣೆಯಲ್ಲಿ ಸೋತಿರಬಹುದು, ಹೋರಾಟ ಸೋತಿಲ್ಲ – ಸಿ.ಟಿ. ರವಿ

Picture of Savistara

Savistara

Bureau Report

ಚಿಕ್ಕಮಗಳೂರು: ‘ಜನರ ಪರವಾಗಿ ಧ್ವನಿ ಎತ್ತಲು ಹಾಗೂ ಅನ್ಯಾಯದ ವಿರುದ್ಧ ಹೋರಾಟ ನಡೆಸಲು ಬಿಜೆಪಿ ಮುಂದಾಗಿದೆ. ಚುನಾವಣೆಯಲ್ಲಿ ನಾನು ಸೋತಿರಬಹುದು. ಆದರೆ, ನಮ್ಮ ಹೋರಾಟ ಸೋತಿಲ್ಲ. ಜನರ ಸಮಸ್ಯೆಗಳಿಗೆ ಪರಿಹಾರ ದೊರಕುವ ತನಕ ಹೋರಾಟ ಮುಂದುವರಿಯಲಿದೆ’ ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಟಿ. ರವಿ ಹೇಳಿದರು.

ರೈತರು, ಬಡವರು, ವೃದ್ಧರು, ವಿಧವೆಯರು ಮತ್ತು ಅಂಗವಿಕಲರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕಳಸಾಪುರದಲ್ಲಿ ಶನಿವಾರ ಬಿಜೆಪಿ ಕಾರ್ಯಕರ್ತರು ನಡೆಸಿದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.ಅಂಗವಿಕಲರು, ವಿಧವೆಯರು ಹಾಗೂ ವೃದ್ಧರಿಗೆ ನೀಡಲಾಗುತ್ತಿದ್ದ ಪಿಂಚಣಿಯನ್ನು ಆದಾಯದ ಮಿತಿಯ ನೆಪದಲ್ಲಿ ಸ್ಥಗಿತಗೊಳಿಸಿರುವುದು ಅನ್ಯಾಯ. ಕೆಲವರಿಗೆ ಆರೇಳು ತಿಂಗಳು, ಮತ್ತೆ ಕೆಲವರಿಗೆ ಒಂದು ವರ್ಷದಿಂದ ಪಿಂಚಣಿ ಹಣ ಬಂದಿಲ್ಲ ಎಂಬ ದೂರುಗಳಿವೆ. ಸರ್ಕಾರ ತಕ್ಷಣ ಪಿಂಚಣಿ ನೀಡಬೇಕು ಎಂದು ಆಗ್ರಹಿಸಿದರು.ಶ್ರಾವಣದಲ್ಲೇ ವಿದ್ಯುತ್‌ ಪೂರೈಕೆ ಇಲ್ಲದಿರುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ದಿನಕ್ಕೆ ಕೆಲವೇ ಗಂಟೆ ವಿದ್ಯುತ್‌ ನೀಡಲಾಗುತ್ತಿದ್ದು, ಇದರಿಂದ ತೋಟಗಳು ಒಣಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಳಸಾಪುರ ಸೇರಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿರ್ಮಿಸಿರುವ ವಿದ್ಯುತ್ ಉಪಕೇಂದ್ರಗಳ ಕಾಮಗಾರಿ ಪೂರ್ಣಗೊಂಡಿದ್ದರೂ ಅವುಗಳಿಗೆ ಚಾಲನೆ ನೀಡಲು ಸರ್ಕಾರ ಮುಂದಾಗಿಲ್ಲ ಎಂದು ಆರೋಪಿಸಿದರು.ಚಿಕ್ಕಮಗಳೂರು ತಾಲ್ಲೂಕು ಸೇರಿ ಮಳೆ ಕೊರತೆಯಿಂದ ಕೃಷಿ ಚಟುವಟಿಕೆಗೆ ತೊಂದರೆಯಾಗಿರುವ ಪ್ರದೇಶಗಳನ್ನು ಬರಪೀಡಿತ ಎಂದು ಘೋಷಿಸಬೇಕು. ಕಡಿಮೆ ಮಳೆಯಿಂದಾಗಿ ಜೋಳ, ರಾಗಿ ಸೇರಿ ವಿವಿಧ ಬೆಳೆಗಳು ಒಣಗುತ್ತಿವೆ. ಬಿತ್ತನೆಗೆ ಖರ್ಚು ಮಾಡಿದ್ದ ಹಣವೂ ರೈತರಿಗೆ ಮರಳದ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಸರ್ಕಾರ ರಾಜಕೀಯ ತಾರತಮ್ಯ ಮಾಡದೆ ರೈತರ ನೆರವಿಗೆ ಧಾವಿಸಬೇಕು ಎಂದು ಆಗ್ರಹಿಸಿದರು.

ಬರ ಘೋಷಣೆಯಾದರೆ ಸರ್ಕಾರದ ವತಿಯಿಂದ ಮೇವು ಬ್ಯಾಂಕ್‌ಗಳನ್ನು ಸ್ಥಾಪಿಸಿ ಜಾನುವಾರುಗಳಿಗೆ ಮೇವು ಒದಗಿಸಲು ಸಾಧ್ಯವಾಗುತ್ತದೆ. ಇನ್ನೊಂದು ತಿಂಗಳಲ್ಲಿ ರೈತರ ಬಳಿ ಇರುವ ಮೇವು ಸಹ ಮುಗಿಯುವ ಸಾಧ್ಯತೆ ಇದೆ. ಆದ್ದರಿಂದ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳದಿದ್ದರೆ ರೈತರನ್ನು ಸಂಘಟಿಸಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದರು.ಬಿಜೆಪಿ ಮುಖಂಡರಾದ ದೇವರಾಜ್, ರವೀಂದ್ರ ಬೆಳವಾಡಿ, ಈಶ್ವರಹಳ್ಳಿ ಮಹೇಶ್‌, ಪಾದಮನೆ ದಿನೇಶ್, ರಾಜು, ಸೀತಾರಾಮ್ ಭರಣ್ಯ, ಪ್ರಕಾಶ್, ಚಂದ್ರಶೇಖ‌ರ್, ಸದಾಶಿವಪ್ಪ ಭಾಗವಹಿಸಿದ್ದರು.

‘ಸತ್ಯ ಮೌನವಾಗಿದ್ದರೆ ಸುಳ್ಳು ಮೆರೆದಾಡಲಿದೆ’ಭರ್ತಿಯಾಗಿರುವ ಬೆಳವಾಡಿ ಕೆರೆಗೆ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಬಾಗಿನ ಸಮರ್ಪಿಸಿದರು.

ಬೆಳವಾಡಿಯ ಉದ್ಭವ ಗಣಪತಿ ಹಾಗೂ ವಿಶ್ವೇಶ್ವರನಿಗೆ ನಮಿಸಿ ನಂತರ ಕೆರೆಗೆ ಬಾಗಿನ ಅರ್ಪಿಸಿದ ಅವರು, ‘ಇಂತಹ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಾಮಾನ್ಯವಾಗಿ ರಾಜಕೀಯ ಮಾತನಾಡುವುದಿಲ್ಲ. ಕೆಲವೊಮ್ಮೆ ಸತ್ಯ ಮೌನವಾಗಿದ್ದಾಗ ಸುಳ್ಳು ಎಲ್ಲೆಡೆ ಮೆರೆದಾಡುತ್ತದೆ. ಆದರೆ, ಅಂತಿಮವಾಗಿ ಗೆಲ್ಲುವುದು ಸತ್ಯವೇ. ಸರಿಯಾದ ಸಮಯದಲ್ಲಿ ಸತ್ಯ ಹೊರಬಂದು ತನ್ನ ಸ್ಥಾನ ಪಡೆದುಕೊಳ್ಳುತ್ತದೆ’ ಎಂದು ಹೇಳಿದರು.55’ಕರಗಡ ಯೋಜನೆಯ ಮೂಲಕ ಗುರುತ್ವಾಕರ್ಷಣೆಯ ಆಧಾರದಲ್ಲಿ ನೀರು ತರಲು ಪ್ರಯತ್ನಿಸಲಾಗಿತ್ತು.

ಅದು ವಿಫಲವಾದ ಬಳಿಕ ಕೈಚೆಲ್ಲದೆ ಪಂಪ್‌ಗಳು ಮತ್ತು ಮೋಟರ್‌ಗಳನ್ನು ಅಳವಡಿಸಿ ಗಾಳಿಹಳ್ಳಿ, ಈಶ್ವರಹಳ್ಳಿ ಹಾಗೂ ಬೆಳವಾಡಿ ಸೇರಿ ಹಲವು ಕೆರೆಗಳನ್ನು ತುಂಬಿಸಿ ದೇವನೂರುವರೆಗೆ ನೀರು ತಲುಪಿಸುವ ಪ್ರಯತ್ನ ಮಾಡಲಾಗಿತ್ತು. ಆದರೆ, ಇದು ಶಾಶ್ವತ ಪರಿಹಾರವಲ್ಲ ಎಂಬ ಕಾರಣಕ್ಕೆ ಭದ್ರಾ ನದಿಯಿಂದ ಶಾಶ್ವತ ನೀರಾವರಿ ಯೋಜನೆ ತರಲು ಪ್ರಯತ್ನಿಸಲಾಯಿತು’ ಎಂದು ಅವರು ವಿವರಿಸಿದರು.

‘ಮೂರನೇ ಹಂತದ ಕಾಮಗಾರಿ ನಡೆಯುತ್ತಿದೆ. ಈ ಹಂತದಲ್ಲಿ ಕಳಸಾಪುರ, ಈಶ್ವರಹಳ್ಳಿ, ಸಿಂದಿಗೆರೆ ಸೇರಿ ವಿವಿಧ ಕೆರೆಗಳಿಗೆ ನೀರು ಬರಲಿದೆ. ನೀರಾವರಿ ಯೋಜನೆಗಳ ಕ್ರೆಡಿಟ್ ನಾನೊಬ್ಬನೇ ಪಡೆಯಲು ಬಯಸುವುದಿಲ್ಲ. ಶ್ರಮಿಸಿದ ಎಲ್ಲರಿಗೂ ಅದರ ಗೌರವ ಸಲ್ಲಬೇಕು. ಜನಪ್ರತಿನಿಧಿಯಾಗಿ ಪ್ರಾಮಾಣಿಕವಾಗಿ ಪ್ರಯತ್ನಿಸಿ ಯೋಜನೆಗಳಿಗೆ ಮಂಜೂರಾತಿ ದೊರಕುವಂತೆ ಮಾಡಿರುವ ಸತ್ಯವನ್ನು ಜನರ ಮುಂದೆ ಇಡುವ ಕೆಲಸ ಮಾಡುತ್ತಿದ್ದೇನೆ’ ಎಂದು ಅವರು ಹೇಳಿದರು.

[t4b-ticker]
error: Content is protected !!