ಬೆಂಗಳೂರು: ‘ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ80ರ ದಶಕದ ಫೋಟೊ ಎಡಿಟಿಂಗ್ ಟ್ರೆಂಡ್ ಬಳಸಿಕೊಂಡು ಸೈಬರ್ ವಂಚಕರು ಜನರಿಗೆ ಮೋಸ ಮಾಡುವ ಸಾಧ್ಯತೆಯಿದೆ’ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಪ್ರತಿಯೊಬ್ಬರ ಮೊಬೈಲ್‌ಗಳಲ್ಲಿ ರೆಟ್ರೋ ಲುಕ್‌ನೊಂದಿಗೆ ಬಣ್ಣಬಣ್ಣದ ಫೋಟೊಗಳು ವಾಟ್ಸ್‌ಆಪ್ ಸ್ಟೇಟಸ್ ಹಾಗೂ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ರಾಜಕಾರಣಿಗಳು, ಸಿನಿಮಾ ತಾರೆಯರು, ಕ್ರೀಡಾಪಟುಗಳು ಸೇರಿ ಸಾಮಾನ್ಯ ಜನರು ಒಳಗೊಂಡಂತೆ 80ರ ದಶಕದ ಟ್ರೇಂಡ್‌ಗೆ ಮಾರು ಹೋಗಿದ್ದಾರೆ.’ಜನರು ಫೋಟೊಗಳನ್ನು ಹಳೆಯ ಶೈಲಿಯಲ್ಲಿ ಪರಿವರ್ತಿಸಲು ಅಪರಿಚಿತ ಅಪ್ಲಿಕೇಶನ್‌ಗಳು ಅಥವಾ ಲಿಂಕ್‌ಗಳನ್ನು ಬಳಸಿದರೆ ವೈಯಕ್ತಿಕ ಮಾಹಿತಿ ಸೋರಿಕೆ ಆಗಬಹುದು. ಈ ಮಾಹಿತಿಯನ್ನು ಬಳಸಿ ಸೈಬರ್ ವಂಚಕರು ಹಣಕಾಸಿನ ವಂಚನೆ ಅಥವಾ ಇತರೆ ದುಷ್ಕೃತ್ಯ ಎಸಗಬಹುದು’ ಎಂದು ಮಾದನಾಯಕನಹಳ್ಳಿ ಠಾಣೆಯ ಪೊಲೀರು ಜನಜಾಗೃತಿ ಸಂದೇಶ ಪ್ರಕಟಿಸಿದ್ದಾರೆ.’ಅನುಮಾನಾಸ್ಪದ ಲಿಂಕ್‌ಗಳನ್ನು ಕ್ಲಿಕ್ ಮಾಡಬಾರದು. ಅಪರಿಚಿತ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಾರದು. ಒಂದು ಕ್ಷಣದ ಟ್ರೆಂಡ್‌ನಿಂದ ವೈಯಕ್ತಿಕ ಮಾಹಿತಿ ಅಪಾಯಕ್ಕೆ ಸಿಲುಕಬಹುದು. ಸೈಬರ್ ವಂಚನೆಯಿಂದ ಪಾರಾಗಲು ಜಾಗರೂಕರಾಗಿರುವುದು ಮುಖ್ಯ. ಕೃತಕ ಬುದ್ದಿಮತ್ತೆ (ಎ.ಐ) ಫೋಟೊ ಸೃಷ್ಟಿಸಲು ಮುಖ ಚಹರೆ (ಫೇಸ್ ರೆಕಗ್ನಿಷನ್) ನೀಡುವುದರಿಂದ ಸೈಬರ್ ವಂಚಕರು ನಿಮ್ಮ ಫೋಟೊಗಳನ್ನು ಬಳಸಿಕೊಳ್ಳುತ್ತಾರೆ. ಕುತೂಹಲ ತಣಿಸಲು ಹೋಗಿ ನಿಮ್ಮ ಫೋಟೊಗಳನ್ನು ಸೈಬರ್ ವಂಚಕರಿಗೆ ನೀಡಿ ಅಪರಾಧಗಳಿಗೆ ಅವಕಾಶ ಮಾಡಿಕೊಡಬಾರದು’ ಎಂದು ಕಿವಿ ಮಾತು ಹೇಳಿದ್ದಾರೆ.
“ಆ್ಯಪ್‌ಗಳನ್ನು ಡೌನ್ ಲೋಡ್ ಮಾಡಿಕೊಳ್ಳಬೇಕಾದರೆ ಕೆಲ ಅನುಮತಿ ಕೇಳುತ್ತದೆ. ಅನುಮತಿ ನೀಡಬೇಕು. ವೈಯಕ್ತಿಕ ಮಾಹಿತಿ ಸೇರಿ ಇತರೆ ಮಾಹಿತಿಗಳನ್ನು ಕೇಳಿದರೆ ಅಂತಹ ಆ್ಯಪ್ ಗಳನ್ನು ಡೌನ್ ಲೋಡ್ ಮಾಡಿಕೊಳ್ಳಬಾರದು. ಅನವಶ್ಯಕ ಆ್ಯಪ್‌ಗಳನ್ನು ಮೊಬೈಲ್‌ನಲ್ಲಿ ಇನ್‌ಸ್ಟಾಲ್ ಮಾಡಿಕೊಳ್ಳುವುದರಿಂದ ದತ್ತಾಂಶ ಕಳವಿಗೆ ದಾರಿಯಾಗುತ್ತದೆ. ಇದೇ ದತ್ತಾಂಶ ಬಳಸಿ, ಸೈಬರ್ ಅಪರಾಧಗಳನ್ನು ವಂಚಕರು ಎಸಗಬಹುದು’ ಎಂದು ಸೈಬರ್ ಕಮಾಂಡ್ ಘಟಕದ ಡಿಐಜಿ ಎಚ್.ಡಿ.ಆನಂದ್ ಕುಮಾರ್ ತಿಳಿಸಿದ್ದಾರೆ.

















































