ಮುಂಬೈ: ವಿವಾಹ, ವಿಚ್ಛೇದನ, ದತ್ತು ಸ್ವೀಕಾರ ಮತ್ತು ಆಸ್ತಿ ಉತ್ತರಾಧಿಕಾರದಂತಹ ವಿಷಯಗಳಲ್ಲಿ ಧರ್ಮದ ಹಸ್ತಕ್ಷೇಪವಿಲ್ಲದೆ ದೇಶಾದ್ಯಂತ ಏಕರೂಪದ ಕಾನೂನು ಜಾರಿಗೆ ತರುವ ಉದ್ದೇಶದ ‘ಸಮಾನ ನಾಗರಿಕ ಸಂಹಿತೆ’ (UCC)ಯನ್ನು 2029ರ ವೇಳೆಗೆ ಬಿಜೆಪಿ ಹಾಗೂ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಜಾರಿಗೊಳಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಮುಂಬೈನಲ್ಲಿ ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಹಲವು ರಾಜ್ಯಗಳಲ್ಲಿ UCC ಜಾರಿಗೆ ಕ್ರಮ ಕೈಗೊಳ್ಳಲಾಗಿದೆ. 2029ರ ವೇಳೆಗೆ ಬಿಜೆಪಿ ಮತ್ತು ಎನ್‌ಡಿಎ ಮೈತ್ರಿಕೂಟ ಆಡಳಿತ ನಡೆಸುತ್ತಿರುವ ಎಲ್ಲಾ 21 ರಾಜ್ಯಗಳಲ್ಲೂ ಸಮಾನ ನಾಗರಿಕ ಸಂಹಿತೆ ಜಾರಿಯಾಗಲಿದೆ ಎಂಬ ಸಂಪೂರ್ಣ ವಿಶ್ವಾಸವಿದೆ ಎಂದು ಹೇಳಿದರು.
ಭಯೋತ್ಪಾದನೆ ವಿರುದ್ಧದ ಕೇಂದ್ರ ಸರ್ಕಾರದ ನೀತಿಯ ಕುರಿತು ಮಾತನಾಡಿದ ಅಮಿತ್ ಶಾ, ಸರ್ಜಿಕಲ್ ಸ್ಟೈಕ್, ವೈಮಾನಿಕ ದಾಳಿ ಮತ್ತು ‘ಆಪರೇಷನ್ ಸಿಂದೂರ’ ಮೂಲಕ ಭಾರತ ಶೂನ್ಯ ಸಹಿಷ್ಣುತೆ ನೀತಿಯನ್ನು ಅನುಸರಿಸುತ್ತಿದೆ ಎಂದು ತಿಳಿಸಿದರು.2014ಕ್ಕೂ ಮುನ್ನ ದೇಶದಲ್ಲಿದ್ದ ಭ್ರಷ್ಟಾಚಾರ, ಜಾತಿವಾದ ಮತ್ತು ಕುಟುಂಬ ರಾಜಕಾರಣದ ಯುಗ ಅಂತ್ಯಗೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತ ಸಾಧನೆ ಆಧಾರಿತ ರಾಜಕಾರಣದತ್ತ ಸಾಗುತ್ತಿದೆ ಎಂದು ಅವರು ಹೇಳಿದರು.ಭಾರತದ ಆರ್ಥಿಕ ಪ್ರಗತಿಯನ್ನೂ ಪ್ರಸ್ತಾಪಿಸಿದ ಅವರು, ದೇಶವು ಹಿಂದೆ ‘ಫ್ರಾಜೈಲ್ ಫೈವ್’ ಎಂದು ಕರೆಯಲಾಗುತ್ತಿದ್ದ ಆರ್ಥಿಕವಾಗಿ ದುರ್ಬಲ ಐದು ರಾಷ್ಟ್ರಗಳ ಪಟ್ಟಿಯಿಂದ ಹೊರಬಂದು ಇದೀಗ ವಿಶ್ವದ ಅಗ್ರ ಐದು ಆರ್ಥಿಕತೆಗಳಲ್ಲಿ ಒಂದಾಗಿದೆ ಎಂದರು. ಇತ್ತೀಚಿನ ಮೊದಲ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಶೇ.7.8ರಷ್ಟು ಬೆಳವಣಿಗೆ ದಾಖಲಿಸಿದ್ದು, ಪ್ರಮುಖ ದೇಶಗಳಿಗೆ ಭಾರತ ಮಾದರಿಯಾಗಿದೆ ಎಂದು ಹೇಳಿದರು.
370ನೇ ವಿಧಿ ರದ್ದು, ನಕ್ಸಲಿಸಂ ನಿಯಂತ್ರಣ ಹಾಗೂ ಈಶಾನ್ಯ ರಾಜ್ಯಗಳಲ್ಲಿ ದಶಕಗಳಿಂದ ಮುಂದುವರಿದಿದ್ದ ಭದ್ರತಾ ಸವಾಲುಗಳನ್ನು ಕೇಂದ್ರ ಸರ್ಕಾರ ಯಶಸ್ವಿಯಾಗಿ ಎದುರಿಸಿದೆ ಎಂದು ಅಮಿತ್ ಶಾ ಹೇಳಿದರು.ಸೆ.17ರಿಂದ ‘ಸೇವಾ ಸಂಕಲ್ಪ ಅಭಿಯಾನ’ ಪ್ರಧಾನಿ ನರೇಂದ್ರ ಮೋದಿ ಅವರು ಸಾರ್ವಜನಿಕ ಸೇವೆಯಲ್ಲಿ 25 ವರ್ಷಗಳನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 17ರಿಂದ ಅಕ್ಟೋಬರ್ 17ರವರೆಗೆ ದೇಶಾದ್ಯಂತ ‘ಸೇವಾ ಸಂಕಲ್ಪ ಅಭಿಯಾನ’ ಆಯೋಜಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದರು.ಪ್ರತಿ ಬೂತ್ ಮಟ್ಟದಲ್ಲಿಯೂ ಅಭಿಯಾನ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಸಾಧನೆಗಳು ಹಾಗೂ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಲಾಗುವುದು ಎಂದು ತಿಳಿಸಿದರು.ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮಾತನಾಡಿ, ರಾಜ್ಯ ಸರ್ಕಾರ ಮತ್ತು ಬಿಜೆಪಿ ಪಕ್ಷ ಜಂಟಿಯಾಗಿ ಈ ಮಹತ್ವಾಕಾಂಕ್ಷಿ ಅಭಿಯಾನದಲ್ಲಿ ಭಾಗವಹಿಸಲಿವೆ ಎಂದು ಹೇಳಿದರು.

















































