ಇತ್ತೀಚೆಗೆ ಯುವಜನತೆಯಲ್ಲಿ ಫ್ಯಾಟಿ ಲಿವರ್ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಆರೋಗ್ಯ ತಪಾಸಣೆ ವೇಳೆ ಆರಂಭಿಕ ಹಂತದ ಫ್ಯಾಟಿ ಲಿವರ್ ಪ್ರಮಾಣ ಹೆಚ್ಚುತ್ತಿರುವುದು ಕಳವಳ ಹುಟ್ಟಿಸುವ ಬೆಳವಣಿಗೆಯಾಗಿದೆ ಎಂದಿರುವ ವಾಸವಿ ಆಸ್ಪತ್ರೆಯ ಆಹಾರ ತಜ್ಞೆ, ಮಧುಮೇಹ ಶಿಕ್ಷಣ ತಜ್ಞೆ ರಶ್ಮಿಆರ್., ಈ ಸಮಸ್ಯೆಯ ಬಗ್ಗೆ ಹಾಗೂ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು ಎನ್ನುವ ಕುರಿತು ಮಾಹಿತಿ ನೀಡಿದ್ದಾರೆ..
ವಿವಿಧ ವಯೋಮಾನದವರಲ್ಲಿ ಗ್ರೇಡ್-1 ಫ್ಯಾಟಿ ಲಿವರ್ ಪ್ರಕರಣಗಳನ್ನು ಹೆಚ್ಚಾಗಿ ಕಂಡುಬರುತ್ತಿವೆ. ಯಾವುದೇ ಸ್ಪಷ್ಟ ಲಕ್ಷಣಗಳಿಲ್ಲ ಎಂಬ ಕಾರಣಕ್ಕೆ ಈ ಸಮಸ್ಯೆಯನ್ನು ನಿರ್ಲಕ್ಷಿಸುವುದು ಒಳ್ಳೆಯದಲ್ಲ.ಚಯಾಪಚಯ ಕ್ರಿಯೆಯ ಅಪಾಯದ ಅಂಶಗಳಿಗೆ ಸಂಬಂಧಿಸಿದ ಫ್ಯಾಟಿ ಲಿವರ್‌ಅನ್ನು ಸಾಮಾನ್ಯವಾಗಿ ‘ಮೆಟಾಬಾಲಿಕ್ ಡಿಸ್ಪಂಕ್ಷನ್-ಅಸೋಸಿಯೇಟೆಡ್ ಸ್ವಿಯಾಟೋಟಿಕ್ ಲಿವರ್ ಡಿಸೀಸ್’ (MASLD) ಎಂದು ಕರೆಯಲಾಗುತ್ತದೆ. ಈ ಸ್ಥಿತಿಯಲ್ಲಿ ಯಕೃತ್ತಿನಲ್ಲಿ ಹೆಚ್ಚುವರಿ ಕೊಬ್ಬು ಸಂಗ್ರಹವಾಗುತ್ತದೆ. ಇದು ಸಾಮಾನ್ಯವಾಗಿ ಬೊಜ್ಜು, ಇನ್ಸುಲಿನ್ ಪ್ರತಿರೋಧ, ಟೈಪ್-2 ಮಧುಮೇಹ ಹಾಗೂ ಅಸಹಜ ಕೊಲೆಸ್ಟ್ರಾಲ್ ಮಟ್ಟಗಳೊಂದಿಗೆ ಸಂಬಂಧ ಹೊಂದಿರುತ್ತದೆ. ಅತಿಯಾಗಿ ತೂಕ ಇರುವವರಲ್ಲಿ ಮಾತ್ರವಲ್ಲ ತೆಳ್ಳಗಿರುವವರಲ್ಲೂ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಫ್ಯಾಟಿ ಲಿವರ್ ಮತ್ತು ಕೊಲೆಸ್ಟ್ರಾಲ್ ಹೆಚ್ಚಳವಾಗುವುದು ಒಂದಕ್ಕೊಂದು ಸಂಬಂಧ ಹೊಂದಿರುವ ಸಾಧ್ಯತೆ ಹೆಚ್ಚು. ಹೀಗಾಗಿ ನಿಯಮಿತ ಆರೋಗ್ಯ ತಪಾಸಣೆ ಅಗತ್ಯ.
ಆರಂಭಿಕ ಹಂತದ ಫ್ಯಾಟಿ ಲಿವರ್ ಸಮಸ್ಯೆಯನ್ನು ಜೀವನಶೈಲಿಯ ಬದಲಾವಣೆಗಳಿಂದ ಸುಧಾರಿಸಿಕೊಳ್ಳಬಹುದು. ವಿಶೇಷವಾಗಿ ಅಧಿಕ ತೂಕ, ಅಸಮರ್ಪಕ ಆಹಾರ ಪದ್ಧತಿ, ದೈಹಿಕ ಚಟುವಟಿಕೆಯ ಕೊರತೆ ಹಾಗೂ ಚಯಾಪಚಯ ಕ್ರಿಯೆಯಲ್ಲಿನ ತೊಂದರೆಯನ್ನು ಸರಿಪಡಿಸಿಕೊಳ್ಳುವುದು ಅಗತ್ಯವಾಗಿರುತ್ತದೆ.ಆರೋಗ್ಯ ಸ್ಥಿತಿಗೆ ಅನುಗುಣವಾಗಿ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಸಮಸ್ಯೆ ಒಂದನೇ ಹಂತ ದಾಟಿದ್ದರೆ ಅಥವಾ ಗಂಭೀರ ಹಂತ ತಲುಪಿದ್ದರೆ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಲೇಬೇಕಾಗುತ್ತದೆ.
ತೂಕವೊಂದೇ ಆರೋಗ್ಯ ನಿರ್ಧರಿಸುವ ಮಾನದಂಡವಲ್ಲ
ಒಬ್ಬ ವ್ಯಕ್ತಿ ತೆಳ್ಳನೆಯ ದೇಹ ಹೊಂದಿದ್ದಾನೆ, ಬೊಜ್ಜಿನ ಸಮಸ್ಯೆಯಿಲ್ಲ ಎಂದ ಮಾತ್ರಕ್ಕೆ ಸಂಪೂರ್ಣವಾಗಿ ಆರೋಗ್ಯವಾಗಿದ್ದಾನೆ ಎನ್ನುವುದು ತಪ್ಪು ಕಲ್ಪನೆ. ತೂಕವೊಂದೇ ಆರೋಗ್ಯವನ್ನು ನಿರ್ಧರಿಸುವ ಮಾನದಂಡವಲ್ಲ. ಪೌಷ್ಟಿಕಾಂಶದ ಮೌಲ್ಯಮಾಪನದಲ್ಲಿ ದೇಹದ ಸಂಯೋಜನೆ, ಸ್ನಾಯುವಿನ ಪ್ರಮಾಣ, ದೇಹದಲ್ಲಿನ ಕೊಬ್ಬಿನ ಶೇಕಡಾವಾರು, ದೇಹದೊಳಗಿನ ಅಂಗಗಳ ಸುತ್ತಲಿನ ಕೊಬ್ಬು (ವಿಸೆರಲ್ ಫ್ಯಾಟ್) ಹಾಗೂ ಸೊಂಟ ಮತ್ತು ಸೊಂಟದ ಕೆಳಭಾಗದ ಅನುಪಾತದ ಜೊತೆಗೆ ಸಂಬಂಧಿತ ರಕ್ತ ಪರೀಕ್ಷೆಗಳನ್ನೂ ಪರಿಗಣಿಸಬೇಕಾಗುತ್ತದೆ.ಆರೋಗ್ಯಯುತ ಜೀವನಕ್ಕೆ ಪ್ರಮುಖ ನಾಲ್ಕು ಅಂಶಗಳೆಂದರೆ, ಸಮತೋಲಿತ ಆಹಾರ, ದೈಹಿಕ ಚಟುವಟಿಕೆ, ಉತ್ತಮ ನಿದ್ದೆ, ಒತ್ತಡ ನಿರ್ವಹಣೆ.ಸಮತೋಲಿತ ಆಹಾರದಲ್ಲಿ ತರಕಾರಿಗಳು, ಅಗತ್ಯ ಪ್ರಮಾಣದ ಪ್ರೋಟಿನ್, ಧಾನ್ಯಗಳಿಂದ ದೊರೆಯುವ ಕಾರ್ಬೋಹೈಡ್ರೆಟ್‌ಗಳು ಇರುವಂತೆ ನೋಡಿಕೊಳ್ಳಬೇಕು. ಹೆಚ್ಚು ಸಂಸ್ಕರಿಸಿದ ಆಹಾರ ಹಾಗೂ ಸಂಸ್ಕರಿತ ಧಾನ್ಯಗಳ ಸೇವನೆಯನ್ನು ತಪ್ಪಿಸುವುದು ಒಳ್ಳೆಯದು. ನಿಯಮಿತ ದೈಹಿಕ ಚಟುವಟಿಕೆ ಮತ್ತು ಸರಿಯಾದ ನಿದ್ದೆ ಉತ್ತಮ ಚಯಾಪಚಯ ಕ್ರಿಯೆಯನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಿದೆ.
















































