ಇತ್ತೀಚೆಗೆ ಮಲಯಾಳದ ನಟ ಮಮ್ಮುಟ್ಟಿ ಅವರು 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ‘ಬ್ರಮಯುಗಂ’ ಸಿನಿಮಾಕ್ಕೆ ‘ಅತ್ಯುತ್ತಮ ನಟ’ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಇದೇ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದ ಮಮ್ಮುಟ್ಟಿ ಅವರ ಹಣೆಗೆ ಮಹಿಳೆಯೊಬ್ಬರು ತಿಲಕ ಇಟ್ಟಿದ್ದರು. ಈ ದೃಶ್ಯವನ್ನೊಳಗೊಂಡ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಾ, ಭಾರಿ ಚರ್ಚೆಗೂ ಕಾರಣವಾಗುತ್ತಿದೆ.
‘ಸ್ವಾಚ್ಯ ಆಫ್ ಯೂನಿಟಿ’ ಎಂಬ ಯುಟ್ಯೂಬ್ ಚಾನಲ್ ಈ ವಿಡಿಯೊವನ್ನು ಹಂಚಿಕೊಂಡಿದೆ. ಇದರಲ್ಲಿ ಮಮ್ಮುಟ್ಟಿ ಅವರು ಬಿಳಿ ಶರ್ಟ್ ಹಾಗೂ ಪ್ಯಾಂಟ್ ಧರಿಸಿದ್ದಾರೆ. ಮುಮ್ಮಟ್ಟಿ ಮುಸ್ಲಿಂ ಕುಟುಂಬದವರಾಗಿದ್ದಾರೆ. ಅವರು ಮುಸ್ಲಿಂ ಆಗಿದ್ದರೂ, ತಿಲಕ ಇಟ್ಟುಕೊಳ್ಳಲು ಹೇಗೆ ಒಪ್ಪಿದರು, ಎಂದು ಒಂದಷ್ಟು ಜನರು ಪ್ರಶ್ನಿಸುತ್ತಿದ್ದಾರೆ.
ಈ ವಿಚಾರ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯಾಗಲು ಶುರುವಾಗುತ್ತಿದ್ದಂತೆ, ಟೀಕಾಕಾರರು ಹಾಗೂ ಟ್ರೋಲರ್‌ಗಳನ್ನು ನಿರ್ದೇಶಕ ಹರಿಶ್ರೀ ಯೂಸುಫ್ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ವಿಡಿಯೊ ಹಂಚಿಕೊಂಡು ಮಾತನಾಡಿರುವ ಅವರು, ‘ ಟ್ರೋಲ್ ಮಾಡುತ್ತಿರುವವರನ್ನು ‘ಬಾವಿಯ ಕಪ್ಪೆ’ ಎಂದು ವ್ಯಂಗ್ಯವಾಗಿ ಹೇಳಿದ್ದಾರೆ.
‘ಇಡೀ ಕೇರಳ ಮತ್ತು ಮಲಯಾಳಿಗಳು ಮಮ್ಮುಟ್ಟಿ ಅವರಿಗೆ ರಾಷ್ಟ್ರೀಯ ಪ್ರಶಸ್ತಿ ಬಂದಿದ್ದಕ್ಕೆ ಸಂಭ್ರಮಿಸುತ್ತಿದ್ದರೆ, ಕೆಲವರು ಮಾತ್ರ ಕೇವಲ ತಿಲಕದ ವಿಷಯ ಹಿಡಿದುಕೊಂಡು ವಿವಾದ ಮಾಡುತ್ತಿದ್ದಾರೆ’ ಎಂದು ಹೇಳಿದ್ದಾರೆ.’ಭಾರತವು ಎಲ್ಲಾ ಧರ್ಮಗಳನ್ನು ಒಳಗೊಂಡಿರುವ ಶ್ರೇಷ್ಠ ದೇಶವಾಗಿದೆ. ನಿಮ್ಮಂತವರು ಎಲ್ಲದಕ್ಕೂ ಧರ್ಮದ ಬಣ್ಣ ಹಚ್ಚಿ ಕೋಮುವಾದ ಸೃಷ್ಟಿಸುತ್ತಾರೆ. ಇನ್ನು ಮುಂದೆ ಹೀಗೆ ಮಾಡಬೇಡಿ’ ಎಂದು ಮನವಿ ಮಾಡಿದ್ದಾರೆ.’ಮಲಯಾಳ ಚಿತ್ರರಂಗವು ಮುಮ್ಮಟ್ಟಿ ಅವರ ಗೆಲುವನ್ನು ಸಂಭ್ರಮಿಸುತ್ತಿರುವಾಗ ಇಂತಹ ಅನಗತ್ಯ ವಿಚಾರಗಳನ್ನು ಚರ್ಚಿಸುವುದನ್ನು ಬಿಡಿ’ ಎಂದಿದ್ದಾರೆ.
















































