ನವದೆಹಲಿ: ‘ದೇಶದ ಭವಿಷ್ಯವನ್ನು ರೂಪಿಸಲು ನಿಖರವಾದ ಅಂಕಿ-ಅಂಶಗಳನ್ನು ಖಚಿತಪಡಿಸಿಕೊಳ್ಳಲು ಜನಗಣತಿಯು ಒಂದು ರಾಷ್ಟ್ರೀಯ ಜವಾಬ್ದಾರಿಯಾಗಿದೆ. ನಾಗರಿಕರು ಜನಗಣತಿ ಪೋರ್ಟಲ್‌ನಲ್ಲಿ ‘ಸ್ವಯಂ ಗಣತಿ’ಯನ್ನು ಪೂರ್ಣಗೊಳಿಸಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
‘ಮನದ ಮಾತು’ ಬಾನುಲಿ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದ ಅವರು, ‘ಇದುವರೆಗೆ 2.6 ಕೋಟಿಗೂ ಹೆಚ್ಚು ಜನರು ಮೊಬೈಲ್ ಫೋನ್‌ಗಳ ಮೂಲಕ ಜನಗಣತಿ ಪೋರ್ಟಲ್ se.census.gov.inನಲ್ಲಿ ತಮ್ಮ ವಿವರಗಳನ್ನು ನಮೂದಿಸಿ, ಸ್ವಯಂ- ಗಣತಿಯನ್ನು ಪೂರ್ಣಗೊಳಿಸಿದ್ದಾರೆ. ಮೊದಲ ಹಂತವು ಬಹುತೇಕ ಪೂರ್ಣಗೊಂಡಿದ್ದು, ಸುಮಾರು 32 ಕೋಟಿ ಕುಟುಂಬಗಳ ಮಾಹಿತಿಯನ್ನು ದಾಖಲಿಸಲಾಗಿದೆ’ ಎಂದು ಹೇಳಿದ್ದಾರೆ.10ನೇ ವಾರ್ಷಿಕೋತ್ಸವ: ಜಮ್ಮು ಕಾಶ್ಮೀರದ ಉರಿ ಸೆಕ್ಟರ್‌ನಲ್ಲಿದ್ದ ಸೇನಾ ನೆಲೆಯ ಮೇಲೆ 2016ರ ಸೆಪ್ಟೆಂಬರ್‌ನಲ್ಲಿ ನಡೆದಿದ್ದ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆ ನಡೆಸಿದ್ದ ‘ಸರ್ಜಿಕಲ್ ಸ್ಟೈಕ್’ನ (ನಿರ್ದಿಷ್ಟ ದಾಳಿ) 10ನೇ ವಾರ್ಷಿಕೋತ್ಸವದ ಕುರಿತು ಮಾತನಾಡಿದ ಮೋದಿ, ‘ಭಯೋತ್ಪಾದನೆಗೆ ಭಾರತ ನೀಡಿದ ನಿರ್ಣಾಯಕ ಪ್ರತಿಕ್ರಿಯೆಯೇ ನಿರ್ದಿಷ್ಟ ದಾಳಿ. ಇದು ವಿಶ್ವದ ಎದುರು ಭಾರತದ ಭಯೋತ್ಪಾದನಾ ವಿರೋಧಿ ನೀತಿಯ ಹೊಸ ಉದಾಹರಣೆಯನ್ನು ಧೈರ್ಯದಿಂದ ಪ್ರದರ್ಶಿಸಿದೆ’ ಎಂದು ತಿಳಿಸಿದ್ದಾರೆ.ಪರಿಸರ ಸಂರಕ್ಷಿಸಿ: ‘ಪರಿಸರ ಹಾಗೂ ಅದರ ವೈವಿಧ್ಯವನ್ನು ಸಂರಕ್ಷಿಸಬೇಕು. ನಮ್ಮ ಪ್ರತಿ ಪ್ರಯತ್ನವೂ ಮುಂದಿನ ಪೀಳಿಗೆಗೆ ನಾವು ಸಲ್ಲಿಸಬೇಕಾದ ಜವಾಬ್ದಾರಿಯಾಗಿದೆ’ ಎಂದು ಅವರು ಹೇಳಿದ್ದಾರೆ.
‘ಅಸ್ಸಾಂನ ಸೊನಾಯ್ ರೂಪೈ ವನ್ಯಜೀವಿ ಅಭಯಾರಣ್ಯದಲ್ಲಿ ಮಾನವ ಹಸ್ತಕ್ಷೇಪದಿಂದಾಗಿ ಆನೆಗಳು ಕಣ್ಮರೆಯಾಗಿದ್ದವು. ಮೂರು ವರ್ಷಗಳ ಹಿಂದೆ ಒತ್ತುವರಿ ತೆರವುಗೊಳಿಸಿದ್ದರಿಂದ ಆನೆಗಳ ಹಿಂಡು ಮತ್ತೆ ಕಂಡುಬರುತ್ತಿದೆ’ ಎಂದು ತಿಳಿಸಿದ್ದಾರೆ.“ಅಸ್ಸಾಂನಲ್ಲಿ ಅಳಿವಿನಂಚಿನಲ್ಲಿದ್ದ ಕುಬ್ಬ ಕಾಡುಹಂದಿಗಳ ಸಂರಕ್ಷಣಾ ಕಾರ್ಯಕ್ರಮ ಕೈಗೊಳ್ಳಲಾಗಿತ್ತು. ಅವುಗಳ ವಾಸಕ್ಕಾಗಿ ಹುಲ್ಲುಗಾವಲುಗಳನ್ನೂ ನಿರ್ಮಿಸಲಾಗಿತ್ತು.
ಇದರ ಫಲವಾಗಿ, ಇಂದು 190ಕ್ಕೂ ಹೆಚ್ಚಿನ ಕುಬ್ಬ ಕಾಡುಹಂದಿಗಳಿವೆ’ ಎಂದು ಮಾಹಿತಿ ನೀಡಿದ್ದಾರೆ.’ಪಶ್ಚಿಮ ಬಂಗಾಳದ ಸುಂದರಬನದ ‘ಜಾರ್ಖಾಲಿ’ಯ ಮಹಿಳೆಯರು ಕಡಲತೀರದಲ್ಲಿ ಚೌಗುಕಾಡುಗಳನ್ನು ನಿರ್ಮಿಸಿದ್ದು, ಇವು ತಮ್ಮ ಹಳ್ಳಿಗಳಿಗೆ ನೈಸರ್ಗಿಕ ರಕ್ಷಣಾ ಕವಚಗಳಾಗಿ ಕಾರ್ಯ ನಿರ್ವಹಿಸುತ್ತಿವೆ. ಜತೆಗೆ, ಆದಾಯವನ್ನೂ ತಂದುಕೊಡುತ್ತಿವೆ. ಈ ಮಹಿಳೆಯರ ಪೈಕಿ ಹೆಚ್ಚಿನವರು ಹುಲಿ ದಾಳಿಯಿಂದ ತಮ್ಮ ಗಂಡಂದಿರನ್ನು ಕಳೆದುಕೊಂಡಿದ್ದಾರೆ’ ಎಂದು ಪ್ರಧಾನಿ ತಿಳಿಸಿದ್ದಾರೆ.
ಮೋದಿ ಹೇಳಿದ್ದು…
ಉತ್ತರ ಪ್ರದೇಶದಲ್ಲಿ ವಿವಿಧ ಸ್ವಸಹಾಯ ಸಂಘಗಳು ನೆಲ್ಲಿಕಾಯಿ ನುಗ್ಗೇಕಾಯಿಯಿಂದ ವಿವಿಧ ಉತ್ಪನ್ನಗಳ ತಯಾರಿಸಿ ಮಾರಾಟ ಮಾಡುವ ಮೂಲಕ ಆರ್ಥಿಕಾಭಿವೃದ್ಧಿ ಹೊಂದುತ್ತಿದ್ದಾರೆ. ಈ ಉತ್ಪನ್ನಗಳು ಅಪೌಷ್ಟಿಕತೆ ನಿವಾರಣೆಗೆ ಅನುಕೂಲವಾಗಿವೆಸೆಪ್ಟೆಂಬರ್ ತಿಂಗಳನ್ನು ಅಪೌಷ್ಟಿಕತೆಯ ವಿರುದ್ಧದ ಹೋರಾಟಕ್ಕೆ ಮೀಸಲಿಡಲಾಗಿದೆ. ಸಮಾಜವನ್ನು ಅಪೌಷ್ಟಿಕತೆಯಿಂದ ಸಂಪೂರ್ಣವಾಗಿ ಮುಕ್ತಗೊಳಿಸಬೇಕು
















































