ಭಾರತೀಯ ಸಂಸ್ಕೃತಿಯ ರಕ್ಷಣೆಗಾಗಿ ಸಿಂಘಾಲ್ ಜನನ: ಚಂಪತ್ ರಾಯ್

Picture of Savistara

Savistara

Bureau Report

ಬೆಂಗಳೂರು: “ಅಶೋಕ್ ಸಿಂಘಾಲ್ ಅವರ ಜನ್ಮವೇ ಭಾರತೀಯಸಂಸ್ಕೃತಿಯ ರಕ್ಷಣೆಗಾಗಿ ಆಗಿತ್ತು. ಹಿಂದೂ ಸಂಸ್ಕೃತಿ ರಕ್ಷಣೆ ಹಾಗೂ ಸಮಾಜದ ಏಕತೆಗೆ ಸಿಂಘಾಲ್ ಕೊಡುಗೆ ಅನನ್ಯ’ ಎಂದು ವಿಶ್ವ ಹಿಂದೂ ಪರಿಷದ್ (ವಿಎಚ್‌ಪಿ) ಕೇಂದ್ರೀಯ ಉಪಾಧ್ಯಕ್ಷ ಚಂಪತ್ ರಾಯ್ ಹೇಳಿದರು.

ನಗರದಲ್ಲಿ ಭಾನುವಾರ ನಡೆದ ವಿಎಚ್‌ಪಿ ಕೇಂದ್ರೀಯ ಅಧ್ಯಕ್ಷರಾಗಿದ್ದ ಅಶೋಕ್ ಸಿಂಘಾಲ್ ಶತಮಾನೋತ್ಸವ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ರಾಮಜನ್ಮಭೂಮಿ ಆಂದೋಲನವನ್ನು ಮಾಧ್ಯಮವನ್ನಾಗಿಸಿಕೊಂಡು ಭಾರತದ 3 ಲಕ್ಷ ಹಳ್ಳಿಗಳಲ್ಲಿ ಜನರನ್ನು ಒಗ್ಗೂಡಿಸಿ ಜನಜಾಗೃತಿ ಮೂಡಿಸಿದರು. ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ವಿವಿಧ ಪಂಥಗಳಿಗೆ ಸೇರಿದ 15,000 ಸಾಧು-ಸಂತರನ್ನು ಒಂದೇ ವೇದಿಕೆಯಲ್ಲಿ ಸೇರಿಸಿದ್ದರು ಎಂದು ಸ್ಮರಿಸಿದರು.ಸಿಂಘಾಲ್ ಅವರ ದೃಷ್ಟಿಯಲ್ಲಿ ಹಿಂದೂ ಸಮಾಜವೆಂದರೆ ಕೇವಲ ಒಂದು ವರ್ಗವಲ್ಲ. ಸಮಗ್ರ ಸಮಾಜ. ಹಿಂದೂಗಳು, ಸಿಬ್ಬರು ಮತ್ತು ಬೌದ್ಧರು ಬೇರೆಯಲ್ಲ, ಎಲ್ಲರೂ ಒಂದೇ ಸಮಾಜದ ಅವಿಭಾಜ್ಯ ಅಂಗ ಎಂದು ಸಾರಿದ್ದರು. ಹಿಂದೂ ಸಮಾಜದಿಂದ ಸಾಮಾಜಿಕ ತಾರತಮ್ಯವನ್ನು ಸಂಪೂರ್ಣವಾಗಿ ಕಿತ್ತೊಗೆಯುವುದು ಹಾಗೂ ಜಗತ್ತಿನಾದ್ಯಂತ ಹಿಂದೂ ಸಮಾಜವನ್ನು ಸಂಘಟಿಸುವುದು ಸಿಂಘಾಲ್ ಬದುಕಿನ ಧೈಯವಾಗಿತ್ತು ಎಂದು ತಿಳಿಸಿದರು.

ಬೇಲಿಮಠದ ಚರಮೂರ್ತಿ ಶಿವರುದ್ರ ಸ್ವಾಮೀಜಿ ಮಾತನಾಡಿ, ‘ಹಿಂದೂ ಸಮಾಜದಲ್ಲಿನ ಮೇಲು-ಕೀಳು ಮತ್ತು ಜಾತಿ ತಾರತಮ್ಯವನ್ನು ತೊಡೆದುಹಾಕಿ, ಅಖಂಡ ಸಮಾಜವನ್ನು ಒಂದೇ ಸೂರಿನಡಿ ತರುವಲ್ಲಿ ಹಾಗೂ ರಾಮಜನ್ಮಭೂಮಿ ಹೋರಾಟವನ್ನು ನಿರ್ಣಾಯಕ ಹಂತಕ್ಕೆ ತಲುಪಿಸುವಲ್ಲಿ ಅಶೋಕ್ ಸಿಂಘಾಲ್ ಅವರ ಪಾತ್ರ ಚಿರಸ್ಮರಣೀಯ’ ಎಂದು ಸ್ಮರಿಸಿದರು.“ಅಯೋಧ್ಯೆಯ ಶಿಲಾನ್ಯಾಸದ ವೇಳೆ ಹಿಂದುಳಿದ ವರ್ಗದ ಕಾಮೇಶ್ವ‌ರ್ ಚೌಪಾಲ್‌ ಅವರ ಕೈಯಿಂದ ಮೊದಲ ಶಿಲೆಯನ್ನು ಇರಿಸುವ ಮೂಲಕ ಸಿಂಘಾಲ್ ಸಾಮಾಜಿಕ ಸಾಮರಸ್ಯದ ಸಂದೇಶ ಸಾರಿದ್ದರು. ಹರಿದ್ವಾರದಿಂದ ಅಮೃತಸರದ ಸ್ವರ್ಣ ಮಂದಿರದವರೆಗೆ ಸದ್ಭಾವನಾ ಯಾತ್ರೆ ಕೈಗೊಂಡಿದ್ದರಿಂದ ಅಮೃತಸರದ ಪಂಚ ಪ್ಯಾರಾಗಳೊಂದಿಗೆ ಸೌಹಾರ್ದಯುತ ಮಾತುಕತೆ ನಡೆಯಲು ಸಾಧ್ಯವಾಯಿತು. ಇದರಿಂದ ಶಾಂತಿ ನೆಲೆಸುವಂತಾಯಿತು’ ಎಂದರು.ಆರ್‌ಎಸ್‌ಎಸ್‌ನ ಅಖಿಲ ಭಾರತ ಸಹ ಬೌದ್ಧಿಕ ಪ್ರಮುಖ್ ಸುಧೀರ್ ಮಾತನಾಡಿ, “ ಸಿಂಘಾಲ್ ಕೇವಲ ಸಂಘಟಕರಲ್ಲ, ತ್ಯಾಗಮಯಿ ಯೋಗಿ ಹಾಗೂ ಅಪ್ರತಿಮ ಯೋಧನ ಅಪರೂಪದ ಸಂಗಮ. ತಮ್ಮ ಪದವಿ ಪತ್ರಗಳನ್ನು ಪೆಟ್ಟಿಗೆಯಲ್ಲಿಟ್ಟು ಆರ್‌ಎಸ್‌ಎಸ್‌ನ ಪೂರ್ಣಾವಧಿ ಪ್ರಚಾರಕರಾಗಿ ಹೊರಟವರಾಗಿದ್ದರು. 65 ವರ್ಷ ನಿಸ್ವಾರ್ಥ ಪ್ರಚಾರಕ ಜೀವನ ನಡೆಸಿ, ತಮ್ಮ 89ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದರು’ ಎಂದು ಹೇಳಿದರು.

[t4b-ticker]
error: Content is protected !!