ಬೆಂಗಳೂರು: ರಾಜ್ಯ ಸರ್ಕಾರದ ಪ್ರಮುಖ ನಿಗಮ ಮಂಡಳಿಗಳಿಗೆ 25 ಶಾಸಕರ ಪಟ್ಟಿಯನ್ನು ಈಗಾಗಲೇ ಫೈನಲ್ ಮಾಡಲಾಗಿದ್ದು, ವಿಧಾನ ಪರಿಷತ್ ಚುನಾವಣೆ ನೀತಿಸಂಹಿತೆ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ಅನುಮತಿ ನಿರೀಕ್ಷೆಯಲ್ಲಿ ಕಾಯಲಾಗುತ್ತಿದೆ.
ಆಯೋಗದ ಸಮ್ಮತಿ ಸಿಗುತ್ತಿದ್ದಂತೆ ಈ ಸಂಬಂಧ ಅಧಿಕೃತ ಆದೇಶಗಳು ಹೊರಬೀಳಲಿವೆ. ಶಾಸಕರ ನೇಮಕ ಆದೇಶಗಳು ಹೊರಬಿದ್ದ ಬಳಿಕ, ಪಕ್ಷದ ಪ್ರಮುಖರನ್ನು ನಿಗಮ-ಮಂಡಳಿಗಳಿಗೆ ನಾಮನಿರ್ದೇಶನ ಮಾಡಲು ಉದ್ದೇಶಿಸಲಾಗಿದೆ. ಬಹುತೇಕ ಕೆಪಿಸಿಸಿ ಪುನಾರಚನೆ ಬಳಿಕ ಈ ನಿಗಮ – ಮಂಡಳಿಗಳ ನೇಮಕ ನಡೆಯಲಿದೆ ಎಂದು ತಿಳಿದುಬಂದಿದೆ.
ಕೆಪಿಸಿಸಿ ಪುನಾರಚನೆ
ಜಿಪಂ, ತಾಪಂ ಸೇರಿದಂತೆ ಮುಂಬರುವ ಸಾಲುಸಾಲು ಚುನಾವಣೆ ಗಮನದಲ್ಲಿಟ್ಟುಕೊಂಡು ಪಕ್ಷವನ್ನು ಸಾಂಸ್ಥಿಕವಾಗಿ ಬಲಪಡಿಸಲು ಕೆಪಿಸಿಸಿಗೆ ಸರ್ಜರಿ ಮಾಡಲಾಗುತ್ತಿದೆ. ಪದಾಧಿಕಾರಿಗಳ ಬದಲಾವಣೆ, ಕಾರ್ಯಕಾರಿಣಿ ರಚನೆ ಜತೆಗೆ ಪ್ರಮುಖವಾಗಿ, ಪಕ್ಷ ಮತ್ತು ಸರಕಾರದ ನಡುವೆ ಸಮನ್ವಯಕ್ಕಾಗಿ ‘ರಾಜಕೀಯ ವ್ಯವಹಾರಗಳ ಸಮಿತಿ’ ರಚನೆ ಪ್ರಕ್ರಿಯೆ ಚಾಲನೆ ಪಡೆದುಕೊಂಡಿದೆ.
ಸರಕಾರದ ಪ್ರಮುಖ ನೀತಿ-ನಿರ್ಧಾರಗಳು ಪೂರ್ವಭಾವಿಯಾಗಿ ಪಕ್ಷದ ವೇದಿಕೆಯಲ್ಲಿ ಚರ್ಚೆಯಾಗಬೇಕು. ಈ ಮೂಲಕ ಪಕ್ಷದ ಸಿದ್ಧಾಂತಗಳಿಗೆ ಪೂರಕವಾಗಿ ಸರಕಾರದ ನಡೆ ಇರಬೇಕು ಹಾಗೂ ಏಕಪಕ್ಷೀಯ ತೀರ್ಮಾನಗಳಿಗೆ ಕಡಿವಾಣ ಹಾಕಬೇಕು ಎಂಬ ಲೆಕ್ಕಾಚಾರದಲ್ಲಿರಾಜಕೀಯ ವ್ಯವಹಾರಗಳ ಸಮಿತಿ ರಚನೆಗೆ ಆಡಳಿತ ಪಕ್ಷದಲ್ಲಿಒತ್ತಡ ಹೆಚ್ಚಿದೆ.
ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರು ಶೀಘ್ರ ಸಮಿತಿ ರಚನೆಗೆ ಒತ್ತಡ ತಂದಿದ್ದು, ಮೂರು ದಿನಗಳ ಹಿಂದೆ ದಿಲ್ಲಿಯಲ್ಲಿರಾಹುಲ್ ಗಾಂಧಿಯನ್ನು ಭೇಟಿಯಾಗಿದ್ದ ಡಿಸಿಎಂ ಡಾ.ಜಿ.ಪರಮೇಶ್ವರ್ ಅವರೂ ಈ ವಿಚಾರವನ್ನು ವರಿಷ್ಠರ ಗಮನಕ್ಕೆ ತಂದಿದ್ದಾರೆ.
ಮಂಗಳವಾರ ಡಿಕೆ ಶಿವಕುಮಾರ್ ದೆಹಲಿ
ಪಕ್ಷ ಅಧಿಕಾರದಲ್ಲಿರುವ ರಾಜ್ಯಗಳಲ್ಲಿರುವಂತೆ ಕರ್ನಾಟಕದಲ್ಲೂ ರಾಜಕೀಯ ವ್ಯವಹಾರಗಳ ಸಮಿತಿ ರಚಿಸಲಾಗುತ್ತಿದ್ದು, ವರಿಷ್ಠರ ಸೂಚನೆಯಂತೆ ಸರಕಾರದ ಮಟ್ಟದಲ್ಲಿ 10 ಸಚಿವರನ್ನು ಒಳಗೊಂಡ ‘ಗ್ರೂಪ್ ಆಫ್ ಮಿನಿಸ್ಟರ್ಸ್ ‘ ರಚನೆಯಾಗಿದ್ದು, ಅದೇ ಮಾದರಿಯಲ್ಲಿಪಕ್ಷ ಮತ್ತು ಸರಕಾರದ ಪ್ರತಿನಿಧಿಗಳನ್ನು ಒಳಗೊಂಡ ರಾಜಕೀಯ ವ್ಯವಹಾರಗಳ ಸಮಿತಿ ಸದ್ಯದಲ್ಲೇ ಅಸ್ತಿತ್ವಕ್ಕೆ ಬರಲಿದೆ. ಅ.6 (ಮಂಗಳವಾರ) ಸಿಎಂ ಡಿ.ಕೆ.ಶಿವಕುಮಾರ್ ದಿಲ್ಲಿಗೆ ತೆರಳುತ್ತಿದ್ದು, ಎರಡು ದಿನಗಳ ಪ್ರವಾಸದ ಅವಧಿಯಲ್ಲಿಜಿಎಸ್‌ಟಿ ಸಭೆಯಲ್ಲಿಭಾಗವಹಿಸಿದ ಬಳಿಕ ಎಐಸಿಸಿ ವರಿ-ಷ್ಠರನ್ನು ಭೇಟಿ ಮಾಡಲಿದ್ದಾರೆ. ಆಗ ಸಮಿತಿ ರಚನೆ ತೀರ್ಮಾನ ಅಂತಿಮವಾಗುವ ನಿರೀಕ್ಷೆಯಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಹೊಸ ಕಾರ್ಯಾಧ್ಯಕ್ಷರ ನೇಮಕ
ಸುಮಾರು 25ರಿಂದ 30 ಜನರನ್ನು ಒಳಗೊಂಡ ಕೆಪಿಸಿಸಿ ಕಾರ್ಯಕಾರಿ ಸಮಿತಿಯನ್ನು ರಚಿಸಲಾಗುತ್ತಿದ್ದು, ಕೆಪಿಸಿಸಿ ಪದಾಧಿಕಾರಿಗಳ ಬದಲಾವಣೆಯೂ ನಡೆಯಲಿದೆ. ಜತೆಗೆ, ಕೆಪಿಸಿಸಿ ನಾನಾ ಮುಂಚೂಣಿ ಘಟಕಗಳಿಗೆ ಹೊಸ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ನೇಮಕವೂ ನಡೆಯಲಿದೆ. ಸದ್ಯ ವಿನಯ್ ಕುಲಕರ್ಣಿ, ವಸಂತಕುಮಾರ್, ತನ್ವೀರ್ ಸೇಠ್, ಜಿ.ಸಿ.ಚಂದ್ರಶೇಖರ್ ಹಾಗೂ ಮಂಜುನಾಥ ಭಂಡಾರಿ ಅವರು ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದು, ಈ ಸ್ಥಾನಗಳಿಗೆ ಹೊಸಬರು ಬರುವ ನಿರೀಕ್ಷೆಯಿದೆ. ಕೆಪಿಸಿಸಿ ಸಂಯೋಜಕರು ಹಾಗೂ ಕಾರ್ಯದರ್ಶಿಗಳ ನೇಮಕ ಸಂಬಂಧ ಡಿಸಿಎಂ ಡಾ.ಜಿ.ಪರಮೇಶ್ವರ್, ಎಚ್.ಕೆ.ಪಾಟೀಲ್, ಬಿ.ಎಲ್.ಶಂಕರ್, ವಿ.ಅರ್.ಸುದರ್ಶನ್ ಇತರೆ ಹಿರಿಯರನ್ನು ಒಳಗೊಂಡ ಸಮಿತಿಯನ್ನು ಈಗಾಗಲೇ ರಚಿಸಲಾಗಿದೆ.
ಮಾಸಾಂತ್ಯಕ್ಕೆ ಹೊಸ ಬ್ಲಾಕ್ ಅಧ್ಯಕ್ಷರ ನೇಮಕ
ಸಂಘಟನ್ ಸೃಜನ್ ಅಭಿಯಾನದ (ಎಸ್‌ಎಸ್‌ಎ) ಭಾಗವಾಗಿ ಈಗಾಗಲೇ ಜಿಲ್ಲಾಕಾಂಗ್ರೆಸ್ ಸಮಿತಿಗಳ (ಡಿಸಿಸಿ) ಅಧ್ಯಕ್ಷರನ್ನು ಬದಲಾವಣೆ ಮಾಡಲಾಗಿದ್ದು, ಬ್ಲಾಕ್ ಅಧ್ಯಕ್ಷರ ನೇಮಕಕ್ಕಾಗಿ 2ನೇ ಹಂತದ ಎಸ್‌ಎಸ್‌ಎ ಭಾಗವಾಗಿ ವೀಕ್ಷಕರನ್ನು ನೇಮಕ ಮಾಡಲಾಗಿದೆ. ವೀಕ್ಷಕರ ವರದಿ ಪಡೆದು ಮಾಸಾಂತ್ಯದೊಳಗೆ ಎಲ್ಲಬ್ಲಾಕ್‌ಗಳಿಗೆ ಹೊಸ ಅಧ್ಯಕ್ಷರನ್ನು ನೇಮಕ ಮಾಡಲಾಗುತ್ತಿದೆ.











































