ಕಬ್ಬುದರ ಬಿಕ್ಕಟ್ಟಿಗೆ ಶಾಶ್ವತ ಪರಿಹಾರ? ಕೇಂದ್ರ ಸಚಿವರೊಂದಿಗೆ ಮಹತ್ವದ ಸಭೆ ನಡೆಸಲಿರುವ ಸಿಎಂ ಡಿಕೆಶಿ

Picture of Savistara

Savistara

Bureau Report

ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದ ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರ ನಡುವಿನ ದರ ಸಮರಕ್ಕೆ ಕೊನೆಗೂ ಒಂದು ತಾರ್ಕಿಕ ಅಂತ್ಯ ಸಿಗುವ ಲಕ್ಷಣಗಳು ಕಾಣಿಸುತ್ತಿವೆ. ಕೇಂದ್ರ ಸರ್ಕಾರ ನಿಗದಿ ಮಾಡಿರುವ ಕಬ್ಬಿನ ದರವನ್ನು ಒಪ್ಪಿಕೊಳ್ಳಲು ರೈತರು ಮತ್ತು ಕಾರ್ಖಾನೆ ಮಾಲೀಕರು ಒಪ್ಪಿಗೆ ಸೂಚಿಸಿದ್ದಾರೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾ‌ರ್ ಅವರು ತಿಳಿಸಿದ್ದಾರೆ.ಇದರ ಬೆನ್ನಲ್ಲೇ, ಮಾರುಕಟ್ಟೆಯಲ್ಲಿ ಸಕ್ಕರೆ ದರ ಹೆಚ್ಚಳ ಮಾಡುವಂತೆ ಕೋರಿ ಕೇಂದ್ರ ಸಚಿವ ಪ್ರಲಾದ್ ಜೋಶಿ ಅವರನ್ನು ಭೇಟಿಯಾಗುವುದಾಗಿ ಸಿಎಂ ಹೇಳಿದ್ದಾರೆ.ಬೆಂಗಳೂರಿಗೆ ಹೊರಡುವ ಮುನ್ನ ಬೆಳಗಾವಿಯ ಸರ್ಕಿಟ್ ಹೌಸ್‌ನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ, ರೈತರು, ಕಾರ್ಖಾನೆ ಮಾಲೀಕರು ಮತ್ತು ಸರ್ಕಾರ ಮೂರೂ ಒಟ್ಟಾಗಿ ತ್ರಿಪಕ್ಷೀಯ ಒಪ್ಪಂದ ಮಾಡಿಕೊಳ್ಳುವ ಮೂಲಕ ಸಮಸ್ಯೆಯನ್ನು ಕಾಯಂ ಆಗಿ ಬಗೆಹರಿಸಲು ನಿರ್ಧರಿಸಲಾಗಿದೆ ಎಂದರು.

ಕಾರ್ಖಾನೆ ಮಾಲೀಕರ ಅಳಲೇನು?

ಸಭೆಯಲ್ಲಿ ಭಾಗವಹಿಸಿದ್ದ ಸುಮಾರು 80ಕ್ಕೂ ಹೆಚ್ಚು ಕಾರ್ಖಾನೆ ಮಾಲೀಕರು ತಮ್ಮ ಕಷ್ಟಗಳನ್ನು ಸಿಎಂ ಮುಂದೆ ತೋಡಿಕೊಂಡಿದ್ದಾರೆ. ಕಳೆದ 10 ವರ್ಷಗಳಿಂದ ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆಯಲ್ಲಿ ಯಾವುದೇ ಏರಿಕೆಯಾಗಿಲ್ಲ. ಸಕ್ಕರೆ ಬೆಲೆ ಜಾಸ್ತಿಯಾಗದ ಹೊರತು ರೈತರಿಗೆ ಹೆಚ್ಚಿನ ಹಣ ನೀಡಲು ನಮಗೂ ಸಾಧ್ಯವಾಗುತ್ತಿಲ್ಲ ಎಂದು ಮಾಲೀಕರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.ಜೊತೆಗೆ ರಾಷ್ಟ್ರೀಕೃತ ಬ್ಯಾಂಕುಗಳಿಂದ ನಮಗೆ ಸಾಲ ಸಿಗುತ್ತಿಲ್ಲ, ಅನಿವಾರ್ಯವಾಗಿ ಸಹಕಾರಿ ಸಂಸ್ಥೆಗಳಿಂದ ಹೆಚ್ಚಿನ ಬಡ್ಡಿಗೆ ಸಾಲ ತರಬೇಕಾಗಿದೆ ಎಂದು ತಮ್ಮ ಆರ್ಥಿಕ ಸಂಕಷ್ಟವನ್ನು ಬಿಚ್ಚಿಟ್ಟಿದ್ದಾರೆ.

ಬಂದ್ ಹಿಂಪಡೆದ ರೈತರಿಗೆ ಸಿಎಂ ಧನ್ಯವಾದ

ಇನ್ನೊಂದೆಡೆ, ಕಬ್ಬು ಕಟಾವು ಮತ್ತು ನುರಿಸುವಿಕೆ ಪ್ರಕ್ರಿಯೆ ತಡವಾಗುತ್ತಿರುವುದರಿಂದ ಹೊಲದಲ್ಲೇ ಬೆಳೆ ಒಣಗಿ ಹೋಗಬಹುದು ಎಂಬ ಆತಂಕ ರೈತರನ್ನು ಕಾಡುತ್ತಿದೆ. ರೈತರು ಉತ್ತಮ ಬೆಲೆ ಕೇಳುತ್ತಿರುವುದು ನೂರಕ್ಕೆ ನೂರು ನ್ಯಾಯಸಮ್ಮತವಾಗಿದೆ ಎಂದ ಸಿಎಂ, ಸರ್ಕಾರದ ಮನವಿಗೆ ಸ್ಪಂದಿಸಿ ಪ್ರತಿಭಟನೆ ಹಾಗೂ ಬಂದ್ ಹಿಂಪಡೆದಿದ್ದಕ್ಕಾಗಿ ರೈತ ಸಂಘಟನೆಗಳಿಗೆ ಕೃತಜ್ಞತೆ ಸಲ್ಲಿಸಿದರು.

“ಇದು ಬರೀ ನಮ್ಮ ರಾಜ್ಯದ ಸಮಸ್ಯೆಯಲ್ಲ, ಇಡೀ ದೇಶದ ಸಕ್ಕರೆ ಉದ್ಯಮ ಎದುರಿಸುತ್ತಿರುವ ಬಿಕ್ಕಟ್ಟು, ಕೇಂದ್ರ ಸಚಿವ ಸಂಪುಟವೇ ಸಕ್ಕರೆ ದರ ಹೆಚ್ಚಳದ ತೀರ್ಮಾನ ತಗೋಬೇಕಾಗಿದೆ. ಕೇಂದ್ರ ಸಚಿವ ಪ್ರಲ್ಲಾದ್ ಜೋಶಿ ಅವರು ನಮ್ಮ ರೈತರ ಕಷ್ಟವನ್ನು ಅರ್ಥ ಮಾಡಿಕೊಂಡು ಸೂಕ್ತ ಪರಿಹಾರದ ಸೂತ್ರದೊಂದಿಗೆ ನೆರವಾಗಲಿದ್ದಾರೆ ಎಂಬ ಭರವಸೆ ನಮಗಿದೆ” ಎಂದು ಶಿವಕುಮಾ‌ರ್ ತಿಳಿಸಿದ್ದಾರೆ

[t4b-ticker]
error: Content is protected !!