ಉಕ್ರೇನ್ ಅಧ್ಯಕ್ಷ, ಅಮೆರಿಕ ಅಧ್ಯಕ್ಷ ಹಾಗೂ ಅಮೆರಿಕ ಉಪಾಧ್ಯಕ್ಷರ ನಡುವೆ ಬಿಸಿಬಿಸಿಯಾಗಿಯೇ ಚರ್ಚೆಯಾಗಿದೆ. ಟ್ರಂಪ್ ಉಕ್ರೇನ್ ಅಧ್ಯಕ್ಷರಿಗೆ ಮಾಧ್ಯಮಗಳ ಮುಂದೆ ಎಚ್ಚರಿಕೆ ನೀಡಿದ್ದಾರೆ. ಇದರಿಂದ ರಷ್ಯಾ ಮತ್ತು ಅದರ ಮಿತ್ರರಾಷ್ಟ್ರ ಸಂಭ್ರಮಿಸಿದೆ.
ಮಾಸ್ಕೋ(ರಷ್ಯಾ): ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಶುಕ್ರವಾರ ಶ್ವೇತಭವನದಲ್ಲಿ ಉಕ್ರೇನಿಯನ್ ನಾಯಕ ವೊಲೊಡಿಮಿರ್ ಝೆಲೆನ್ಸ್ಕಿ ಅವರನ್ನು ತರಾಟೆಗೆ ತೆಗೆದುಕೊಂಡ ಬಳಿಕ ರಷ್ಯಾದ ರಾಜ್ಯ ಮಾಧ್ಯಮ ಮತ್ತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜತೆ ಅವರ ಮಿತ್ರರಾಷ್ಟ್ರ ವಿಜಯೋತ್ಸವವನ್ನು ಆಚರಿಸಿದೆ.ಮೂರನೇ ಮಹಾಯುದ್ಧದೊಂದಿಗೆ ಜೂಜಾಟ: ರಷ್ಯಾ – ಉಕ್ರೇನ್ ಯುದ್ಧದಲ್ಲಿ ಕದನ ವಿರಾಮ ಮಾತುಕತೆ ನಡೆಸಲು ಟ್ರಂಪ್ ಪ್ರಯತ್ನಗಳನ್ನು ನಡೆಸುತ್ತಿದ್ದು, ಈ ಮಧ್ಯೆ ನಿನ್ನೆ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಮಾತುಕತೆ ನಡೆಸಲು ಶ್ವೇತಭವನಕ್ಕೆ ಭೇಟಿ ನೀಡಿದರು. ಈ ವೇಳೆ ನಡೆದ ಸಭೆಯಲ್ಲಿ ಝೆಲೆನ್ಸ್ಕಿ ಆಡಿದ ಮಾತೊಂದಕ್ಕೆ ಟ್ರಂಪ್, ಝೆಲೆನ್ಸ್ಕಿ ಅವರೇ ನೀವು ಸಭೆಗೆ “ಅಗೌರವ‘‘ ತೋರುತ್ತಿದ್ದೀರಿ , “ಭವಿಷ್ಯದಲ್ಲಿ ನಾವು ಏನು ಭಾವಿಸಬೇಕೆಂದು ಹೇಳಲು ನಿಮಗೆ ಯಾವುದೇ ಹಕ್ಕಿಲ್ಲ. ನೀವು(ಉಕ್ರೇನ್) ಮೂರನೇ ಮಹಾಯುದ್ಧದೊಂದಿಗೆ ಜೂಜಾಡುತ್ತಿದ್ದೀರಿ” ಎಂದು ಕೋಪದಲ್ಲೇ ಎಚ್ಚರಿಸಿದರು.ನಿಮ್ಮ ಕೈಯಲ್ಲಿ ಏನೂ ಇಲ್ಲ: ಮುಂದುವರಿದ ಮಾತುಕತೆಯಲ್ಲಿ, ಟ್ರಂಪ್ “ನಾನು ನಿಮಗೆ (ಝೆಲೆನ್ಸ್ಕಿ) ಧೈರ್ಯಶಾಲಿ ವ್ಯಕ್ತಿಯಾಗಲು ಅಧಿಕಾರ ನೀಡಿದ್ದೇನೆ. ನೀನು ಒಪ್ಪಂದ ಮಾಡಿಕೊಳ್ಳಬೇಕು ಇಲ್ಲದಿದ್ದರೆ ನಾವು ಹೊರಗೆ ಹೋಗುತ್ತೇವೆ. ನಿಮ್ಮ ಕೈಯಲ್ಲಿ ಏನೂ ಇಲ್ಲ” ಎಂದು ಟೀಕಿಸಿದರು.
ಟ್ರಂಪ್ನ ಈ ಖಾರವಾದ ನುಡಿ ಅಲ್ಲಿ ನೆರೆದಿದ್ದ ಅಮೆರಿಕದ ಮಾಧ್ಯಮಗಳು ಮುಖ ಮುಖ ನೋಡಿಕೊಳ್ಳುವಂತೆ ಮಾಡಿತು. ಇತ್ತ ಉಕ್ರೇನ್ ಶತ್ರು ರಾಷ್ಟ್ರ ರಷ್ಯಾದ ರಾಜ್ಯ ಮಾಧ್ಯಮಗಳು ಮತ್ತು ಪುಟಿನ್ ಹಾಗೇ ಅವರ ಬೆಂಬಲಿಗರು ಇದನ್ನು ತಕ್ಷಣವೇ ಸಂಭ್ರಮದಂತೆ ಆಚರಿಸಿದರು.
ಪ್ರಮುಖರ ಪ್ರತಿಕ್ರಿಯೆಗಳು ಹೀಗಿವೆ:
ಉಕ್ರೇನ್‌ಗೆ ಬಲವಾದ ಹೊಡೆತ:
- ರಷ್ಯಾದ ಭದ್ರತಾ ಮಂಡಳಿಯ ಉಪ ಮುಖ್ಯಸ್ಥ ಮತ್ತು ರಷ್ಯಾದ ಮಾಜಿ ಅಧ್ಯಕ್ಷ ಡಿಮಿಟ್ರಿ ಮೆಡ್ವೆಡೆವ್ ಟೆಲಿಗ್ರಾಮ್‌ನಲ್ಲಿ ಈ ಸಂವಾದಕ್ಕೆ ಪ್ರತಿಕ್ರಿಯಿಸಿ, “ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಉಕ್ರೇನ್‌ಗೆ ಬಲವಾದ ಹೊಡೆತ ನೀಡಿದ್ದಾರೆ. ‘ಕೀವ್(ಉಕ್ರೇನ್) ಆಡಳಿತವು ಮೂರನೇ ಮಹಾಯುದ್ಧದೊಂದಿಗೆ ಜೂಜಾಡುತ್ತಿದೆ’ ಎಂದು ಟ್ರಂಪ್ ಹೇಳಿರುವುದು ಸರಿಯಾಗಿದೆ’ ಎಂದು ಸಮರ್ಥಿಸಿಕೊಂಡಿದ್ದಾರೆ.
2. ರಾಜ್ಯ ನಿಯಂತ್ರಿತ ಮಾಧ್ಯಮ ಸಂಸ್ಥೆ ಆರ್‌ಟಿ ಟ್ರಂಪ್-ಜೆಲೆನ್ಸ್ಕಿ ಭೇಟಿಯನ್ನು “dressing down” ಎಂದು ನಿರೂಪಿಸಿ, ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹೀಗೆ ಬರೆದಿದೆ: “ಅಮೆರಿಕ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ತರಾಟೆಗೆ ತೆಗೆದುಕೊಳ್ಳುವಾಗ ಝೆಲೆನ್ಸ್ಕಿ ಕಾಲುಗಳ ನಡುವೆ ಕೈಗಳನ್ನು ಹಾಕಿಕೊಂಡು ಕುಳಿತಿದ್ದಾರೆ” ಎಂದು ವ್ಯಂಗ್ಯವಾಡಿದೆ.
3. “ಝೆಲೆನ್ಸ್ಕಿ ಅವರ ಎಲ್ಲಾ ಸುಳ್ಳುಗಳಲ್ಲಿ ದೊಡ್ಡ ಸುಳ್ಳು ಎಂದರೆ 2022 ರಲ್ಲಿ ಕೀವ್ ಆಡಳಿತವು ಬೆಂಬಲವಿಲ್ಲದೇ ಒಂಟಿಯಾಗಿತ್ತು ಎಂದು ಶ್ವೇತಭವನದಲ್ಲಿ ಅವರು ಹೇಳಿದ್ದು” ಎಂದು ರಷ್ಯಾದ ವಿದೇಶಾಂಗ ಸಚಿವಾಲಯದ ವಕ್ತಾರೆ ಮಾರಿಯಾ ಜಖರೋವಾ ಟೆಲಿಗ್ರಾಮ್‌ನಲ್ಲಿ ಬರೆದಿದ್ದಾರೆ.
4. ರಷ್ಯಾದ ನೇರ ಹೂಡಿಕೆ ನಿಧಿಯ ಮುಖ್ಯಸ್ಥ ಕಿರಿಲ್ ಡಿಮಿಟ್ರಿವ್, ಶ್ವೇತಭವನದಲ್ಲಿ ನಡೆದ ಬಿಸಿ ಚರ್ಚೆಯನ್ನು “ಐತಿಹಾಸಿಕ” ಎಂದು ಕರೆದರು.
5. ಯುರೋಪಿಯನ್ ನಾಯಕರು ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿರಿಗೆ ಬೆಂಬಲದ ನೀಡುತ್ತಿದ್ದರೆ, ಮತ್ತೊಂದೆಡೆ, ಹಂಗೇರಿಯ ರಷ್ಯಾ ಸ್ನೇಹಿ ಪ್ರಧಾನಿ ವಿಕ್ಟರ್ ಓರ್ಬನ್ ಟ್ರಂಪ್ ಅವರನ್ನು ಹೊಗಳಿದರು.”ಟ್ರಂಪ್ ಶಾಂತಿಗಾಗಿ ಧೈರ್ಯದಿಂದ ನಿಂತಿದ್ದಾರೆ. ಅನೇಕರಿಗೆ ಇದನ್ನು ಜೀರ್ಣಿಸಿಕೊಳ್ಳಲು ಕಷ್ಟವಾಗಿದೆ. ಬಲಶಾಲಿ ಪುರುಷರು ಶಾಂತಿ ಸ್ಥಾಪಿಸುತ್ತಾರೆ, ದುರ್ಬಲ ಪುರುಷರು ಯುದ್ಧ ಮಾಡುತ್ತಾರೆ” ಎಂದು ಓರ್ಬನ್ ಎಕ್ಸ್‌ನಲ್ಲಿ ಬರೆದಿದ್ದಾರೆ.













































