ಮೈಸೂರು:ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿಗೆ ಕ್ಷಣಗಣನೆ ಆರಂಭವಾಗಿದ್ದು, ಈ ಬಾರಿಯ ವಿಜಯದಶಮಿಯಂದು ಭವ್ಯ ಚಿನ್ನದ ಅಂಬಾರಿಯನ್ನು ಹೊರಲು ಕೊಡಗಿನ ದುಬಾರೆ ಆನೆ ಶಿಬಿರದ ‘ಪ್ರಶಾಂತ’ ಆಯ್ಕೆಯಾಗಿದ್ದಾನೆ. ಮೈಸೂರಿನ ಅರಮನೆ ಮಂಡಳಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಈ ಮಹತ್ವದ ಘೋಷಣೆ ಮಾಡಿದರು.
ಅಭಿಮನ್ಯುಗೆ ವಯಸ್ಸಿನ ವಿಶ್ರಾಂತಿ:ಕಳೆದ 6 ವರ್ಷಗಳಿಂದ ಯಶಸ್ವಿಯಾಗಿ ಚಿನ್ನದ ಅಂಬಾರಿ ಹೊತ್ತು ಸಾಗಿದ್ದ ಬಲಶಾಲಿ ‘ಅಭಿಮನ್ಯು’ ಆನೆಗೆ ವಯಸ್ಸಿನ ಕಾರಣದಿಂದ ಈ ಬಾರಿ ಅಂಬಾರಿ ಜವಾಬ್ದಾರಿಯಿಂದ ವಿಶ್ರಾಂತಿ ನೀಡಲಾಗಿದೆ. ಹೀಗಾಗಿ ಈ ಬಾರಿ ಅಂಬಾರಿ ಹೊರಲು ಹೊಸ ಆನೆ ಯಾರು ಎಂಬ ಕುತೂಹಲ ಗರಿಗೆದರಿತ್ತು. ಪ್ರಶಾಂತ, ಧನಂಜಯ, ಸುಗ್ರೀವ, ಮಹೇಂದ್ರ ಹಾಗೂ ಏಕಲವ್ಯ ಆನೆಗಳ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿತ್ತು.
ಮಹೇಂದ್ರ ಮತ್ತು ಧನಂಜಯನಿಗೆ ದೊರೆತ ಜವಾಬ್ದಾರಿ:ಆಯ್ಕೆ ಪ್ರಕ್ರಿಯೆಯ ವೇಳೆ ಮಹೇಂದ್ರ ಆನೆಯು ಎರಡು ಬಾರಿ ತಾಲೀಮಿನಲ್ಲಿ ಮರದ ಅಂಬಾರಿ ಹೊತ್ತು ಬನ್ನಿಮಂಟಪ ತಲುಪುವಲ್ಲಿ ವಿಫಲವಾದ ಕಾರಣ, ಅಂತಿಮವಾಗಿ ಪ್ರಶಾಂತನಿಗೆ ಈ ಐತಿಹಾಸಿಕ ಜವಾಬ್ದಾರಿ ಒಲಿದಿದೆ. ಇನ್ನು ಧನಂಜಯ ಆನೆಯನ್ನು ‘ಮೀಸಲು ಅಂಬಾರಿ ಆನೆ’ಯಾಗಿ ನಿಯೋಜಿಸಲಾಗಿದೆ.
ಇತರ ಆನೆಗಳ ಪಾತ್ರ:ಅಕ್ಟೋಬರ್ 21ರಂದು ನಡೆಯಲಿರುವ ಅದ್ದೂರಿ ಜಂಬೂಸವಾರಿಯಲ್ಲಿ ಅಭಿಮನ್ಯು ‘ನಿಶಾನೆ’ ಆನೆಯಾಗಿ ಸಾಗಲಿದ್ದರೆ, ಗೋಪಿ ‘ನೌಫತ್’ ಆನೆಯಾಗಿ ಸಾಥ್ ನೀಡಲಿದ್ದಾನೆ. ಕಾವೇರಿ ಮತ್ತು ರೂಪಾ ‘ಕುಮ್ಮಿ’ ಆನೆಗಳಾಗಿ ಪ್ರಶಾಂತನ ಜೊತೆ ಹೆಜ್ಜೆ ಹಾಕಲಿದ್ದು, ಉಳಿದ ಆನೆಗಳು ‘ಸಾಲಾನೆಗಳಾಗಿ’ ಭಾಗವಹಿಸಲಿವೆ.
ಪತ್ರಿಕಾಗೋಷ್ಠಿಯಲ್ಲಿ ಸಚಿವ ಬಸವಂತಪ್ಪ, ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ, ಅರಣ್ಯ ಇಲಾಖೆ ಸಿಎಫ್ ರವಿಶಂಕರ್, ಡಿಸಿಎಫ್ ಐ.ಬಿ. ಪ್ರಭುಗೌಡ ಹಾಗೂ ಆರ್ಎಫ್ಒ ಯಸ್ಮಾ ಮಾಚಮ್ಮ ಉಪಸ್ಥಿತರಿದ್ದರು.











































