ನವದೆಹಲಿ:ಕೇಂದ್ರ ರಾಜಕೀಯದಲ್ಲಿ ದಿಢೀರ್ ಬೆಳವಣಿಗೆಯೊಂದರಲ್ಲಿ ಮಾಹಿತಿ ಮತ್ತು ಪ್ರಸಾರ ಹಾಗೂ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ಎಲ್. ಮುರುಗನ್ ಮಂಗಳವಾರ ಸಂಜೆ ತಮ್ಮ ಹುದ್ದೆಗೆ ಹಠಾತ್ತನೆ ರಾಜೀನಾಮೆ ನೀಡಿದ್ದಾರೆ. ಇದರೊಂದಿಗೆ ರಾಜ್ಯಸಭಾ ಸದಸ್ಯತ್ವಕ್ಕೂ ರಾಜೀನಾಮೆ ನೀಡುವುದಾಗಿ ಘೋಷಿಸುವ ಮೂಲಕ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದ್ದಾರೆ.
ಸಚಿವ ಸ್ಥಾನ ತೊರೆದು ತಳಮಟ್ಟಕ್ಕೆ ಮರಳುವ ಇಚ್ಛೆ:ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದಿರುವ ಸುದೀರ್ಘ ಪತ್ರದಲ್ಲಿ, ತಮ್ಮನ್ನು ಸಚಿವ ಸಂಪುಟದ ಜವಾಬ್ದಾರಿಯಿಂದ ಮುಕ್ತಗೊಳಿಸಲು ಹಾಗೂ ರಾಜ್ಯಸಭೆಗೆ ರಾಜೀನಾಮೆ ನೀಡಲು ಅವಕಾಶ ಮಾಡಿಕೊಡಬೇಕೆಂದು ವಿನಂತಿಸಿಕೊಂಡಿದ್ದಾರೆ. ಮುಂಬರುವ 2029ರ ಲೋಕಸಭಾ ಚುನಾವಣೆಗೆ ಮುನ್ನ ತಮಿಳುನಾಡಿನಲ್ಲಿ ಬಿಜೆಪಿಯನ್ನು ತಳಮಟ್ಟದಿಂದ ಬಲಪಡಿಸಲು ಮತ್ತು ಪಕ್ಷದ ಕಾರ್ಯಕರ್ತರೊಂದಿಗೆ ನಿಕಟವಾಗಿ ಕೆಲಸ ಮಾಡಲು ತಮ್ಮ ಸಂಪೂರ್ಣ ಸಮಯ ಹಾಗೂ ಶಕ್ತಿಯನ್ನು ಮೀಸಲಿಡಲು ಈ ನಿರ್ಧಾರ ಕೈಗೊಂಡಿರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.
’ರಾಷ್ಟ್ರ ಮೊದಲು, ಪಕ್ಷ ನಂತರ’:ತಮ್ಮ ರಾಜೀನಾಮೆ ಪತ್ರವನ್ನು ಸಾಮಾಜಿಕ ಜಾಲತಾಣ ‘ಎಕ್ಸ್’ (X) ನಲ್ಲೂ ಹಂಚಿಕೊಂಡಿರುವ ಅವರು, “ರಾಷ್ಟ್ರ ಮೊದಲು, ಪಕ್ಷ ನಂತರ, ಸ್ವಯಂ ಕೊನೆಗೆ” ಎಂಬ ತತ್ವವೇ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ಮತ್ತು ಬಿಜೆಪಿಯಲ್ಲಿನ ತಮ್ಮ ಮೂರು ದಶಕಗಳ ರಾಜಕೀಯ ಪಯಣಕ್ಕೆ ಮಾರ್ಗದರ್ಶಿಯಾಗಿದೆ ಎಂದಿದ್ದಾರೆ. ಪ್ರಧಾನಿ ಮೋದಿ ಅವರ ಇತ್ತೀಚಿನ ತಮಿಳುನಾಡು ಭೇಟಿಯ ವೇಳೆ ಜನರಲ್ಲಿ ಕಂಡುಬಂದ ಉತ್ಸಾಹವು ರಾಜ್ಯದಲ್ಲಿ ಪಕ್ಷ ಬೆಳೆಸುವ ತಮ್ಮ ನಂಬಿಕೆಯನ್ನು ಮತ್ತಷ್ಟು ದ್ವಿಗುಣಗೊಳಿಸಿದೆ ಎಂದು ಉಲ್ಲೇಖಿಸಿದ್ದಾರೆ.
ದಿನಗೂಲಿ ಕಾರ್ಮಿಕನ ಮಗನಿಂದ ಕೇಂದ್ರ ಸಚಿವನದ ಹಾದಿ:ತಮ್ಮ ಜೀವನದ ಪಯಣವನ್ನು ಮೆಲುಕು ಹಾಕಿರುವ ಅವರು, ತಾವು ಒಬ್ಬ ಸಾಮಾನ್ಯ ದಿನಗೂಲಿ ಕಾರ್ಮಿಕ ಹಾಗೂ ದನ ಕಾಯುವ ಕಷ್ಟಜೀವಿಗಳ ಮಗನೆಂದು ಸ್ಮರಿಸಿದ್ದಾರೆ.
ಕೋಣೂರು ಗ್ರಾಮದ ಸರಳ ಹಿನ್ನೆಲೆಯಿಂದ ಬಂದ ತಮ್ಮಂತಹ ಸಾಮಾನ್ಯ ಕಾರ್ಯಕರ್ತನಿಗೆ ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗದ ಉಪಾಧ್ಯಕ್ಷರಾಗಲು, ಎರಡು ಬಾರಿ ರಾಜ್ಯಸಭೆ ಪ್ರವೇಶಿಸಲು ಮತ್ತು ಕೇಂದ್ರ ಸಚಿವ ಸಂಪುಟ ಸೇರಲು ಅವಕಾಶ ನೀಡಿದ್ದು ಬಿಜೆಪಿಯ ಸಿದ್ಧಾಂತ ಮತ್ತು ಪ್ರಧಾನಿ ಮೋದಿಯವರ ಧುರೀಣತ್ವವೇ ಕಾರಣ ಎಂದು ಕೃತಜ್ಞತೆ ಸಲ್ಲಿಸಿದ್ದಾರೆ.
ರಾಜ್ಯದಲ್ಲಿ ಸಂಘಟನಾ ಪರ್ವ:ತಮಿಳುನಾಡಿನ ಪ್ರತಿಯೊಂದು ಹಳ್ಳಿ, ಬೀದಿಗಳಿಗೆ ಭೇಟಿ ನೀಡಿ ಪಕ್ಷದ ವ್ಯಾಪ್ತಿಯನ್ನು ವಿಸ್ತರಿಸುವುದು ಹಾಗೂ ಪ್ರಧಾನಿ ಮೋದಿಯವರ ವಿಕಸಿತ ಭಾರತದ ಸಂದೇಶವನ್ನು ಪ್ರತಿಯೊಂದು ಮನೆಗೆ ತಲುಪಿಸುವುದೇ ತಮ್ಮ ಮುಂದಿನ ಪ್ರಮುಖ ಗುರಿಯಾಗಿದೆ ಎಂದು ಅವರು ಪುನರುಚ್ಚರಿಸಿದ್ದಾರೆ.











































