ದುಬೈ: ಭಾರತದ ಸ್ಪಿನ್ನರ್‌ಗಳ ಶಿಸ್ತುಬದ್ಧ ದಾಳಿಯಿಂದಾಗಿ ನ್ಯೂಜಿಲೆಂಡ್ ತಂಡವು ಇಲ್ಲಿನ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಸರಣಿಯ ಫೈನಲ್ ಪಂದ್ಯದಲ್ಲಿ 50 ಓವರ್‌ಗಳಲ್ಲಿ 251 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಕೀವಿಸ್ ಪಡೆಗೆ ವಿಲ್ ಯಂಗ್ ಮತ್ತು ರಚಿನ್ ರವೀಂದ್ರ ಉತ್ತಮ ಆರಂಭ ನೀಡಿದರು. ಮತ್ತೆ ಸಿಡಿಯುವ ಸೂಚನೆ ನೀಡಿದ ರಚಿನ್, ಭಾರತೀಯ ಸ್ಪಿನ್ನರ್‌ಗಳ ವಿರುದ್ಧ ಬೀಸಾಟ ಆಡಿದರು. 29 ಎಸೆತಗಳಲ್ಲಿ 37 ರನ್ ಗಳಿಸಿದ್ದಾಗ ಕುಲದೀಪ್ ಯಾದವ್ ಎಸೆತದಲ್ಲಿ ಬೌಲ್ಡ್ ಆಗಿ ನಿರ್ಗಮಿಸಿದರು. ಭಾರತೀಯ ಆಟಗಾರರ ಸಂಭ್ರಮಾಚರಣೆ ರಚಿನ್ ಅವರ ವಿಕೆಟ್‌ನ ಮಹತ್ವದ ಪ್ರತೀಕದಂತಿತ್ತು.ನಂತರ ಬಂದ ಕೇನ್ ವಿಲಿಯಮ್ಪನ್ ಅವರನ್ನೂ ಕುಲದೀಪ್ ಬಲಿ ಪಡೆದರು. ಆವರೆಗೂ 7ರ ಸರಾಸರಿಯಲ್ಲಿ ದಾಖಲಾಗುತ್ತಿದ್ದ ಕೀವಿಸ್ ರನ್ ಗಳಿಕೆಗೆ ಬ್ರೇಕ್ ಬಿತ್ತು. ನಿಯಮಿತವಾಗಿ ಭಾರತದ ಸ್ಪಿನ್ನರ್‌ಗಳು ವಿಕೆಟ್ ಕಿತ್ತರು.
ನ್ಯೂಜಿಲೆಂಡ್ ಪರ ಅತಿ ಹೆಚ್ಚು ರನ್ ಕಾಣಿಕೆ ನೀಡಿದ್ದು ಡೇರಿಲ್ ಮಿಚೆಲ್. ಅವರು 101 ಎಸೆತಗಳಲ್ಲಿ 63 ರನ್ ಗಳಿಸಿದರು. ಗ್ಲೆನ್ ಫಿಲಿಪ್ ನಿಧಾನಗತಿಯ 34 ರನ್ ಬಾರಿಸಿದರು. ಮಿಚೆಲ್ ಬ್ರೇಸ್‌ವೆಲ್ ಅರ್ಧ ಶತಕ ಗಳಿಸಿದರು.
ಭಾರತದ ಪರ ವರುಣ್ ಚಕ್ರವರ್ತಿ ಹಾಗೂ ಕುಲದೀಪ್ ಯಾದವ್ ತಲಾ 2, ಶಮಿ ಹಾಗೂ ಜಡೇಜಾ 2 ವಿಕೆಟ್ ಕಿತ್ತರು.ವೇಗಿಗಳಾದ ಶಮಿ, ಪಾಂಡ್ಯ ದುಬಾರಿಯಾದರು.

















































