ಚೆನ್ನೈ: ತಮಿಳುನಾಡಿನಲ್ಲಿ ಸುಮಾರು ₹13 ಸಾವಿರ ಕೋಟಿ ಮೌಲ್ಯದ ರೈಲ್ವೆ, ರಸ್ತೆ ಮತ್ತು ಪೆಟ್ರೋಲಿಯಂ ಕ್ಷೇತ್ರಕ್ಕೆ ಸಂಬಂಧಿಸಿದ ಯೋಜನೆಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾನುವಾರ ಚಾಲನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು.
ಈ ವೇಳೆ ಮಾತನಾಡಿದ ಮೋದಿ, ತಾವು ‘ಅಭಿವೃದ್ಧಿ’ಯನ್ನೇ ಮುಖ್ಯ ಮಂತ್ರವನ್ನಾಗಿ ಸ್ವೀಕರಿಸಿದ್ದು, ಮುಖ್ಯಮಂತ್ರಿ ಸಿ.ಜೋಸೆಫ್ವಿಜಯ್ ಅವರೊಂದಿಗೆ ಸೇರಿ ರಾಜ್ಯದ ಅಭಿವೃದ್ಧಿಗೆ ಶ್ರಮಿಸುವುದಾಗಿ ವಾಗ್ದಾನ ಮಾಡಿದ್ದಾರೆ.ಕಳೆದ 12 ವರ್ಷಗಳಲ್ಲಿ ಭಾರತವು ರಕ್ಷಣಾ ರಫ್ತು ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಿದೆ ಎಂದು ಹೇಳಿದ್ದಾರೆ.
ಅಭಿವೃದ್ಧಿಯೇ ಮುಖ್ಯ ಮಂತ್ರ
ದೇಶದ ಅಭಿವೃದ್ಧಿಯೇ ನನ್ನ ಮುಖ್ಯ ಮಂತ್ರ. ಈ ಹಿಂದೆ ಮುಖ್ಯಮಂತ್ರಿಯಾಗಿ ರಾಜ್ಯದ ನಿರೀಕ್ಷೆಗಳನ್ನು ನಾನು ಗ್ರಹಿಸಿದ್ದೆ. ಪ್ರಧಾನಿಯಾದ ಬಳಿಕ ರಾಜ್ಯಗಳ ಆಕಾಂಕ್ಷೆಗಳನ್ನು ಈಡೇರಿಸಲು ಹಾಗೂ ಅವುಗಳ ಗುರಿ ತಲುಪಲು ಎಲ್ಲ ಬೆಂಬಲ ನೀಡುತ್ತಿದ್ದೇನೆ ಎಂದಿದ್ದಾರೆ.ತಮಿಳುನಾಡಿನೊಂದಿಗಿನ ತಮ್ಮ ರಾಜಕೀಯ ನಂಟನ್ನು ನೆನಪಿಸಿಕೊಂಡ ಮೋದಿ, ತಾವು ಸಿಎಂ ಆಗಿದ್ದಾಗ ದಿವಂಗತ ನಾಯಕರಾದ ಎಂ.ಕರುಣಾನಿಧಿ ಮತ್ತು ಜಿ. ಜಯಲಲಿತಾ ಅವರೊಂದಿಗೆ ಸಂವಹನ ನಡೆಸಿದ್ದನ್ನು ಸ್ಮರಿಸಿದರು. ಹಾಗೆಯೇ ಪ್ರಧಾನಿಯಾದ ನಂತರ ಮಾಜಿ ಸಿಎಂಗಳಾದ ಒ.ಪನ್ನೀರಸೆಲ್ವಂ, ಎಡಪ್ಪಾಡಿ ಕೆ.ಪಳನಿಸ್ವಾಮಿ ಹಾಗೂ ಎಂ.ಕೆ.ಸ್ಟಾಲಿನ್ ಅವರೊಂದಿಗೂ ಕೆಲಸ ಮಾಡಿರುವುದಾಗಿ ಹೇಳಿದ್ದಾರೆ.
ಅಭಿವೃದ್ಧಿ ಸಂಕಲ್ಪ ಸ್ಥಿರ’ಸರ್ಕಾರಗಳು ಬದಲಾಗಬಹುದು, ಆದರೆ ತಮಿಳುನಾಡಿನ ಅಭಿವೃದ್ಧಿ ಮತ್ತು ಅಲ್ಲಿನ ಜನರಿಗೆ ಸೇವೆ ಸಲ್ಲಿಸುವ ನನ್ನ ಸಂಕಲ್ಪ ಎಂದಿಗೂ ಸ್ಥಿರವಾಗಿರುತ್ತದೆ. ಮುಖ್ಯಮಂತ್ರಿ ವಿಜಯ್ ಅವರ ಜೊತೆಗೂಡಿ ರಾಜ್ಯದ ಅಭಿವೃದ್ಧಿಯನ್ನು ಮಾಡುತ್ತೇವೆ’ ಎಂದು ತಿಳಿಸಿದ್ದಾರೆ.












































