ಪುತ್ತೂರು: ಕರ್ನಾಟಕದ ಅಡಿಕೆ ಬೆಳೆಗಾರರಿಗೆ ಆತಂಕಕಾರಿ ಸುದ್ದಿಯೊಂದು ಎದುರಾಗಿದೆ. ಅಡಿಕೆ ಮರಗಳಲ್ಲಿ ಇದುವರೆಗೆ ಕಂಡುಬರದಿದ್ದ ಹೊಸ ಎಲೆ ತಿನ್ನುವ ಕೀಟವೊಂದು ಕಾಣಿಸಿಕೊಂಡಿದ್ದು, ಭಾರತೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆ (ICAR-CPCRI, ಕಾಸರಗೋಡು) ಅಧಿಕೃತವಾಗಿ ‘Pest Alert’ ಹೊರಡಿಸಿದೆ. ಈ ಕೀಟವನ್ನು ತಾತ್ಕಾಲಿಕವಾಗಿ Acria sp. ಎಂದು ಗುರುತಿಸಲಾಗಿದೆ.
ಎಲ್ಲೆಲ್ಲಿ ಕಾಣಿಸಿಕೊಂಡಿದೆ?:
ಕಾಸರಗೋಡಿನ CPCRI ವಿಜ್ಞಾನಿಗಳ ಪ್ರಕಾರ, ಜಗತ್ತಿನಲ್ಲೇ ಅಡಿಕೆ ಬೆಳೆಯ ಮೇಲೆ ಈ ಕೀಟ ಕಾಣಿಸಿಕೊಂಡಿರುವುದು ಇದೇ ಮೊದಲು!
- ಮೊದಲು ವಿಟ್ಲದ CPCRI ಅಡಿಕೆ ನರ್ಸರಿಯಲ್ಲಿ ಕಾಣಿಸಿಕೊಂಡಿದ್ದ ಈ ಕೀಟ, ಸೆಪ್ಟೆಂಬರ್ 2026ರಲ್ಲಿ ಉತ್ತರ ಕನ್ನಡದ ಸಿದ್ದಾಪುರ ಹಾಗೂ ಅಕ್ಟೋಬರ್ 2026ರಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆಯ ಕನಕಪುರದಲ್ಲೂ ಪತ್ತೆಯಾಗಿದೆ.
- ಬೇರೆ ಬೇರೆ ಜಿಲ್ಲೆಗಳಲ್ಲಿ ಒಂದೇ ಸಮಯದಲ್ಲಿ ಕಾಣಿಸಿಕೊಂಡಿರುವುದರಿಂದ ಇದು ರಾಜ್ಯಾದ್ಯಂತ ಹರಡುವ ಭೀತಿ ಎದುರಾಗಿದೆ.
ಹಾನಿಯ ಲಕ್ಷಣಗಳು:
- ಸಣ್ಣ ಮರಿಹುಳುಗಳು (ಹಸಿರು-ಕಂದು ಬಣ್ಣ) ಎಲೆಗಳ ಮೇಲೆ ರೇಷ್ಮೆಯಂತಹ ತೆಳುವಾದ ಬಲೆ ಕಟ್ಟಿಕೊಳ್ಳುತ್ತವೆ.
- ಬಲೆಯೊಳಗಿದ್ದುಕೊಂಡೇ ಎಲೆಯ ಹಸಿರು ಭಾಗವನ್ನು ಕೆರೆದು ತಿನ್ನುವುದರಿಂದ ಎಲೆಗಳು ಬಿಳಿಚಿಕೊಂಡು ಒಣಗುತ್ತವೆ.
- ಹಾವಳಿ ಹೆಚ್ಚಾದರೆ ಇಡೀ ಮರವೇ ಬೋಳಾಗುತ್ತದೆ ಹಾಗೂ ನರ್ಸರಿಯ ಸಣ್ಣ ಸಸಿಗಳು ಸಂಪೂರ್ಣ ಒಣಗಿ ಸಾಯುತ್ತವೆ.
ಕೀಟದ ವಿವಿಧ ಹಂತಗಳು:
- ಎಲೆಗಳು ತೂತಾಗುವುದು & ಬೋಳಾಗುವುದು: ಹುಳುಗಳು ಹಸಿರು ಭಾಗವನ್ನು ತಿಂದು ಎಲೆಗಳಲ್ಲಿ ತೂತು ಉಂಟುಮಾಡುತ್ತವೆ.
- ಬಲೆ ಹಾಗೂ ಹಿಕ್ಕೆಗಳು: ಎಲೆಯ ಮೇಲೆ ಬಿಳಿ ರೇಷ್ಮೆ ಬಲೆ, ಅದರೊಳಗೆ ಹುಳುವಿನ ಹಿಕ್ಕೆ ಇರುವುದು ಇದರ ಪ್ರಮುಖ ಗುರುತು.
- ಮರಿಹುಳು (Larva): ಹಸಿರು-ಹಳದಿ ಬಣ್ಣದ ಹುಳು ಎಲೆಯನ್ನು ತಿನ್ನುತ್ತದೆ.
- ಕೋಶಾವಸ್ಥೆ & ವಯಸ್ಕ ಚಿಟ್ಟೆ: ಹಳದಿ ಬಣ್ಣದ ಗೂಡಿನಿಂದ ಹೊರಬರುವ ಕಂದು ಬಣ್ಣದ ತಾಯಿ ಚಿಟ್ಟೆ ಮತ್ತಷ್ಟು ಮೊಟ್ಟೆಗಳನ್ನು ಇಡುತ್ತದೆ.
ರೈತರು ಏನು ಮಾಡಬೇಕು?
- (CPCRI ಶಿಫಾರಸು):ಪ್ರತಿದಿನ ತೋಟಕ್ಕೆ ತೆರಳಿ ಎಲೆಗಳ ಕೆಳಭಾಗ ಹಾಗೂ ಸುಳಿಯನ್ನು ಗಮನಿಸಿ. ಬಲೆ ಅಥವಾ ಹುಳು ಕಂಡ ತಕ್ಷಣ ಆ ಎಲೆಯನ್ನು ಕಿತ್ತು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ಸುಟ್ಟು ಹಾಕಿ.
- ತೀವ್ರ ಹಾವಳಿ ಇದ್ದರೆ Chlorantraniliprole 18.5% SC (0.3 ಮಿ.ಲಿ. / ಲೀಟರ್ ನೀರಿಗೆ) ಬೆರೆಸಿ ಸಂಜೆ ವೇಳೆ ಸಿಂಪಡಿಸಿ.
- ನಿಮ್ಮ ತೋಟದಲ್ಲೂ ಇಂತಹ ಲಕ್ಷಣ ಕಂಡರೆ ತಕ್ಷಣ ಫೋಟೋ ತೆಗೆದು, ವಿವರಗಳೊಂದಿಗೆ ಕಾಸರಗೋಡು CPCRI ವಿಜ್ಞಾನಿ ಡಾ. ಮಹೇಂದ್ರನ್ ಬಿ. (ಮೊ: 8277624573) ಅವರಿಗೆ ವಾಟ್ಸಾಪ್ ಮಾಡಿ ಮಾಹಿತಿ ನೀಡಿ.












































