ಮೈಸೂರು: ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ದಸರಾ ವೇದಿಕೆಯಲ್ಲೂ ಜೈ ಕಾಂಗ್ರೆಸ್ ಎಂದು ಹೇಳಿ ಭಾಷಣ ಮುಗಿಸಿದ್ದು ಚರ್ಚೆಗೆ ಗ್ರಾಸವಾಯಿತು.
‘ದಸರಾ ಎಲ್ಲರನ್ನೂ ಬೆಸೆಯುವಂತಹ ಹಬ್ಬವಾದ್ದರಿಂದ ಇದು ನಾಡಹಬ್ಬವಾಗಿದೆ. ಕನ್ನಡಿಗರೆಲ್ಲರೂ ಸಂಭ್ರಮದಿಂದ ಆಚರಿಸುವಂಥದ್ದು. ಸೌಹಾರ್ದವನ್ನು ಸಾರುವಂಥದು’ ಎಂದರು.’ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಯವರು ವಿಶೇಷವಾಗಿ ಜಲದಾಸೋಹ, ಪರಿಸರ ಸಂರಕ್ಷಣೆಯ ಕಾಳಜಿಯಿಂದ ಸೇವೆ ಮಾಡುತ್ತಿದ್ದಾರೆ’ ಎಂದು ಶ್ಲಾಘಿಸಿದರು.’ಅತ್ಯಂತ ಕಡಿಮೆ ಅವಧಿಯಲ್ಲಿ ಹೆಚ್ಚಿನ ಜನಪರ ಯೋಜನೆಗಳನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ನೀಡಿದ್ದಾರೆ’ ಎಂದು ಹೊಗಳಿದರು.
ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ, ‘ಮುಖ್ಯಮಂತ್ರಿಯವರು ಗವಿಸಿದ್ದೇಶ್ವರ ಸ್ವಾಮೀಜಿ ಅವರನ್ನು ಉದ್ಘಾಟನೆಗೆ ಆಯ್ಕೆ ಮಾಡಿದ್ದು ನಮ್ಮೆಲ್ಲರ ಸೌಭಾಗ್ಯ’ ಎಂದರು.’ಡಿಕೆಶಿ ಮೈಸೂರಿನ ಅಳಿಯ. ಇಲ್ಲಿಯವರೇ ಆದ ಸಿದ್ದರಾಮಯ್ಯ ಅವರು ನೀಡಿದ ಜನಪರ ಕಾರ್ಯಕ್ರಮಗಳನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ’ ಎಂದು ಶ್ಲಾಘಿಸಿದರು.’ಮುಖ್ಯಮಂತ್ರಿಯವರು ಗುರುಗಳು, ಹಿರಿಯರು ಹಾಗೂ ಧಾರ್ಮಿಕ ನಂಬಿಕೆಯ ಮೇಲೆ ಗೌರವ ಇಟ್ಟುಕೊಂಡಿದ್ದಾರೆ. ಎಲ್ಲ ಧರ್ಮಗುರುಗಳನ್ನೂ ಅಹ್ವಾನಿಸಿರುವುದು ಬಸವಣ್ಣನವರ ಕಾಲದ ಅನುಭವ ಮಂಟಪದಂತೆ ಕಾಣುತ್ತಿದೆ’ ಎಂದರು.’ಮೈಸೂರು ನಗರ ಸುಂದರವಾಗಿದೆ. ಆದರೆ, ಹೊರವಲಯದಲ್ಲಿ ಮೂಲಸೌಲಭ್ಯಗಳ ಕೊರತೆ ಇದೆ. ಚಾಮುಂಡೇಶ್ವರಿ ಕ್ಷೇತ್ರದ ಜನರಿಗೆ ನೀರು ಕೊಡಿ, ರಸ್ತೆ ಮಾಡಿಸಿಕೊಡಿ, ಕೆರೆಗಳನ್ನು ತುಂಬಿಸಿ ಈ ಭಾಗದ ಜನರನ್ನು ರಕ್ಷಿಸಬೇಕು’ ಎಂದು ಮುಖ್ಯಮಂತ್ರಿ ಅವರನ್ನು ಜಿಟಿಡಿ ಒತ್ತಾಯಿಸಿದರು.












































