ಹೊಸದಿಲ್ಲಿ: ಭಾರತೀಯ ವಾಯುಪಡೆಯ ನೂತನ ಮುಖ್ಯಸ್ಥರಾಗಿ ಏರ್ ಮಾರ್ಷಲ್ ಅಶುತೋಷ್ ದೀಕ್ಷಿತ್ ಅವರನ್ನು ನೇಮಕ ಮಾಡಲಾಗಿದೆ ಎಂದು ಕೇಂದ್ರ ಸರಕಾರ ಮಂಗಳವಾರ ಪ್ರಕಟಿಸಿದೆ. ಅವರು ಅಕ್ಟೋಬರ್ 31ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಹಾಲಿ ವಾಯುಪಡೆ ಮುಖ್ಯಸ್ಥರಾಗಿರುವ ಏರ್ ಚೀಫ್ ಮಾರ್ಷಲ್ ಎ.ಪಿ. ಸಿಂಗ್ ಅವರು ಅಕ್ಟೋಬರ್ 31ರಂದು ನಿವೃತ್ತರಾಗಲಿದ್ದು, ಅವರ ಸ್ಥಾನವನ್ನು ದೀಕ್ಷಿತ್ ಅಲಂಕರಿಸಲಿದ್ದಾರೆ.
ಪ್ರಸ್ತುತ ವಾಯುಪಡೆಯ ಉಪ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿರುವ 59 ವರ್ಷದ ಅಶುತೋಷ್ ದೀಕ್ಷಿತ್ ಅವರು 1986ರ ಡಿಸೆಂಬರ್‌ನಲ್ಲಿ ಭಾರತೀಯ ವಾಯುಪಡೆಯ ಫೈಟರ್ ಸ್ಟ್ರೀಮ್‌ಗೆ ನಿಯೋಜನೆಗೊಂಡಿದ್ದರು. ಅವರು 2028ರ ಡಿಸೆಂಬರ್ 31ರವರೆಗೆ ವಾಯುಪಡೆ ಮುಖ್ಯಸ್ಥರಾಗಿ ಸೇವೆ ಸಲ್ಲಿಸಲಿದ್ದಾರೆ.
ಅಶುತೋಷ್ ದೀಕ್ಷಿತ್ ಅವರು ಪ್ರಾಯೋಗಿಕ ಪರೀಕ್ಷಾರ್ಥ ಪೈಲಟ್ ಹಾಗೂ ಫೈಟ್ ಇನ್‌ಸ್ಟ್ರಕ್ಟರ್ ಆಗಿಯೂ ಸೇವೆ ಸಲ್ಲಿಸಿದ್ದಾರೆ. ಮಿರಾಜ್-2000, ವಿವಿಧ ಮಾದರಿಯ ಮಿಗ್ ಯುದ್ಧ ವಿಮಾನಗಳು, ಜಾಗ್ವಾರ್ ಮತ್ತು ತೇಜಸ್ ಸೇರಿದಂತೆ ಹಲವು ಯುದ್ಧ ವಿಮಾನಗಳಲ್ಲಿ 3,500 ಗಂಟೆಗಳಿಗೂ ಹೆಚ್ಚು ಹಾರಾಟದ ಅನುಭವ ಹೊಂದಿದ್ದಾರೆ.
ಸುಮಾರು ನಾಲ್ಕು ದಶಕಗಳ ವೃತ್ತಿಜೀವನದಲ್ಲಿ ಅವರು ಆಪರೇಷನ್ ಸಫೇದ್ ಸಾಗರ್, ಆಪರೇಷನ್ ರಕ್ಷಕ್, ಕೋಪ್ ಇಂಡಿಯಾ ಹಾಗೂ ಆಪರೇಷನ್ ಸಿಂಧೂರ್ ಸೇರಿದಂತೆ ಹಲವು ಪ್ರಮುಖ ಸೇನಾ ಕಾರ್ಯಾಚರಣೆಗಳು ಮತ್ತು ಸಮರಾಭ್ಯಾಸಗಳಲ್ಲಿ ಭಾಗವಹಿಸಿದ್ದಾರೆ.












































