ದಸರಾ ಹಬ್ಬಕ್ಕೆ ಶಿವಮೊಗ್ಗ ಜಿಲ್ಲೆಯ ರೈಲು ಪ್ರಯಾಣಿಕರಿಗೆ ಮೋದಿ ಸರ್ಕಾರದಿಂದ ಆಧುನಿಕ ಎಲ್‌.ಎಚ್‌.ಬಿ ಬೋಗಿಗಳ ಕೊಡುಗೆ: ಸಂಸದ ಬಿ.ವೈ.ರಾಘವೇಂದ್ರ ಹರ್ಷ

Picture of Savistara

Savistara

Bureau Report

ಶಿವಮೊಗ್ಗ, 11 ಅಕ್ಟೋಬರ್ 2026: ಶಿವಮೊಗ್ಗ-ಮಲೆನಾಡು ಭಾಗದ ರೈಲು ಪ್ರಯಾಣಿಕರಿಗೆ ಉತ್ತಮ ಪ್ರಯಾಣಾನುಭವ ಒದಗಿಸುವ ನಿಟ್ಟಿನಲ್ಲಿ, ಮೈಸೂರು–ತಾಳಗುಪ್ಪ ಎಕ್ಸ್‌ಪ್ರೆಸ್ ಹಾಗೂ ತಾಳಗುಪ್ಪ–ಶಿವಮೊಗ್ಗ ಟೌನ್ ರೈಲುಗಳೂ ಸೇರಿದಂತೆ ನೈರುತ್ಯ ರೈಲ್ವೆಯ ಆರು ರೈಲುಗಳಲ್ಲಿ (ಪರಸ್ಪರ ಮೂಲ ನಿಲ್ದಾಣ ಮತ್ತು ಗಮ್ಯನಿಲ್ದಾಣಗಳ ನಡುವೆ) ಹಳೆಯ ಬೋಗಿಗಳ ಬದಲಿಗೆ ಆಧುನಿಕ ಎಲ್‌.ಎಚ್‌.ಬಿ (ಲಿಂಕ್-ಹಾಫ್‌ಮನ್-ಬುಷ್) ಬೋಗಿಗಳನ್ನು ಅಳವಡಿಸುವ ರೈಲ್ವೆ ಇಲಾಖೆ ನಿರ್ಧಾರ ಸ್ವಾಗತಾರ್ಹ ಮತ್ತು ಸಂತಸದ ಸಂಗತಿ ಎಂದು ಸಂಸದ ಬಿ.ವೈ. ರಾಘವೇಂದ್ರ ಹರ್ಷ ವ್ಯಕ್ತಪಡಿಸಿದ್ದಾರೆ.

“ದೇಶದ ರೈಲ್ವೆ ವ್ಯವಸ್ಥೆಯನ್ನು ಆಧುನೀಕರಿಸುವುದರ ಜೊತೆಗೆ ಪ್ರಯಾಣಿಕರಿಗೆ ಸುರಕ್ಷಿತ, ಆರಾಮದಾಯಕ ಮತ್ತು ಉತ್ತಮ ಸೇವೆಗಳನ್ನು ಒದಗಿಸಲು ಕೇಂದ್ರದ ಪ್ರಧಾನಿ ಶ್ರೀ ನರೇಂದ್ರ ಮೋದಿ ಜೀ ನೇತೃತ್ವದ ಸರ್ಕಾರ ನಿರಂತರವಾಗಿ ಕೈಗೊಳ್ಳುತ್ತಿರುವ ಕ್ರಮಗಳು ಶ್ಲಾಘನೀಯ. ಇದರಿಂದ ನಮ್ಮ ಶಿವಮೊಗ್ಗ ಜಿಲ್ಲೆಯ ನಾಗರಿಕರಿಗೂ ಉತ್ತಮ ಪ್ರಯಾಣಿಕ ಸೌಲಭ್ಯ ಮತ್ತು ಸವಲತ್ತುಗಳು ಲಭ್ಯವಾಗುತ್ತಿವೆ.

Advertisement

ನವರಾತ್ರಿ ಹಾಗೂ ನಾಡಹಬ್ಬ ದಸರೆಯ ಸಂದರ್ಭದಲ್ಲಿ ಈ ಸುರಕ್ಷಿತ, ಆರಾಮದಾಯಕ ಮತ್ತು ಉತ್ತಮ ಸೇವೆ ನಮ್ಮ ಜಿಲ್ಲೆಗೆ ಲಭ್ಯವಾಗುತ್ತಿರುವುದು ದಸರಾ ಹಬ್ಬದ ಕೊಡುಗೆ ಎಂದೇ ನಾನು ಭಾವಿಸುತ್ತೇನೆ. ಇದಕ್ಕಾಗಿ ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜೀ, ಕೇಂದ್ರ ರೈಲ್ವೆ ಸಚಿವ ಶ್ರೀ ಅಶ್ವಿನಿ ವೈಷ್ಣವ್ ಮತ್ತು ಕೇಂದ್ರ ರೈಲ್ವೆ ರಾಜ್ಯ ಸಚಿವ ಶ್ರೀ ವಿ.ಸೋಮಣ್ಣನವರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ”_ ಎಂದು ಸಂಸದ ರಾಘವೇಂದ್ರ ಹೇಳಿದ್ದಾರೆ.

Advertisement

ಶಿವಮೊಗ್ಗ ಹಾಗೂ ಮಲೆನಾಡು ಭಾಗದ ರೈಲು ಸಂಪರ್ಕ ಮತ್ತು ಪ್ರಯಾಣಿಕರ ಸೌಲಭ್ಯಗಳ ಸುಧಾರಣೆಗೆ ಕೇಂದ್ರ ಸರ್ಕಾರ ನೀಡುತ್ತಿರುವ ಸಹಕಾರ, ನೆರವುಗಳು ಇದೇ ರೀತಿ ಮುಂದುವರಿಯುವ ವಿಶ್ವಾಸವಿದೆ ಎಂದಿದ್ದಾರೆ.

Advertisement

ಆಧುನಿಕ ಎಲ್‌.ಎಚ್‌.ಬಿ ಬೋಗಿಗಳು: ನೈರುತ್ಯ ರೈಲ್ವೆಯ ಅಧಿಕೃತ ಆದೇಶದ ಪ್ರಕಾರ, ಮೈಸೂರು–ತಾಳಗುಪ್ಪ ಎಕ್ಸ್‌ಪ್ರೆಸ್‌ನಲ್ಲಿ ಅಕ್ಟೋಬರ್ 20ರಿಂದ ಹಾಗೂ ತಾಳಗುಪ್ಪ–ಶಿವಮೊಗ್ಗ ಟೌನ್ ರೈಲಿನಲ್ಲಿ ಅಕ್ಟೋಬರ್ 21ರಿಂದ ಹೊಸ ಬೋಗಿಗಳ ಅಳವಡಿಕೆ ಜಾರಿಗೆ ಬರಲಿದೆ. ಎಲ್‌.ಎಚ್‌.ಬಿ ಬೋಗಿಗಳು ಆಧುನಿಕ ವಿನ್ಯಾಸ, ಸುಧಾರಿತ ಸುರಕ್ಷತಾ ವೈಶಿಷ್ಟ್ಯಗಳು ಮತ್ತು ಉತ್ತಮ ಪ್ರಯಾಣಾನುಭವಕ್ಕೆ ಹೆಸರುವಾಸಿಯಾಗಿವೆ. ಹಳೆಯ ಬೋಗಿಗಳ ಬದಲಿಗೆ ಇಂತಹ ಆಧುನಿಕ ಬೋಗಿಗಳನ್ನು ಅಳವಡಿಸುವುದರಿಂದ ಶಿವಮೊಗ್ಗ–ಮಲೆನಾಡು ಭಾಗದ ಜನರಿಗೆ ರೈಲು ಪ್ರಯಾಣದ ಗುಣಮಟ್ಟ ಸುಧಾರಿಸಲಿದೆ.

Advertisement

ಹೆಚ್ಚಿನ ಸೌಲಭ್ಯ ಮತ್ತು ಸುರಕ್ಷತೆಗಳ ಜೊತೆಗೆ, ಆಯಾ ರೈಲುಗಳಲ್ಲಿ ಪ್ರಯಾಣಿಕರಿಗೆ ಲಭ್ಯವಿರುವ ಒಟ್ಟು ಸ್ಥಾನಗಳ ಸಂಖ್ಯೆ ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆ. ಈ ಸುಧಾರಣೆಯಿಂದ ಬೆಂಗಳೂರಿಗೆ ಸಂಚರಿಸುವ ಮಲೆನಾಡಿನ ಜನರು, ವಿದ್ಯಾರ್ಥಿಗಳು, ಉದ್ಯೋಗಿಗಳು ಹಾಗೂ ಪ್ರವಾಸಿಗರಿಗೆ ಉತ್ತಮ ರೈಲು ಪ್ರಯಾಣದ ಅನುಭವ ಒದಗಿಸಲು ಸಹಕಾರಿಯಾಗಲಿವೆ ಎಂದು ಸಂಸದರು ಹೇಳಿದ್ದಾರೆ.

Advertisement
[t4b-ticker]
error: Content is protected !!