ಕೈರೊ: ಸೌದಿ ಅರೇಬಿಯಾದ ರಾಜಧಾನಿ ರಿಯಾದ್ನ ಕಿಂಗ್ಖಾಲಿದ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ನಡೆದ ಕ್ಷಿಪಣಿ ದಾಳಿಯಲ್ಲಿ 12 ಮಂದಿ ಮೃತಪಟ್ಟಿದ್ದಾರೆ. 300ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಸೌದಿ ನಾಗರಿಕ ವಿಮಾನಯಾನ ಅಧಿಕಾರಿಗಳು ಭಾನುವಾರ ಮುಂಜಾನೆ ತಿಳಿಸಿದಾಗಿ ‘ಎಪಿ’ ಹಾಗೂ `ಎಎಫ್‌ಪಿ’ ಸುದ್ದಿ ಸಂಸ್ಥೆಗಳು ವರದಿ ಮಾಡಿದೆ.
ಯೆಮನ್‌ನಲ್ಲಿರುವ ಇರಾನ್ ಬೆಂಬಲಿತ ಹೂಥಿ ಬಂಡುಕೋರರು ದಾಳಿ ನಡೆಸಿದ್ದಾರೆ ಎಂದು ಸೌದಿ ನೇತೃತ್ವದ ಮೈತ್ರಿಕೂಟ ಆರೋಪಿಸಿದೆ. ಇರಾನ್ ಯುದ್ಧ ಆರಂಭವಾದ ಬಳಿಕ ಗಲ್ಫ್ ರಾಷ್ಟ್ರವೊಂದರ ಮೇಲೆ ನಡೆದ ಅತ್ಯಂತ ಭೀಕರ ದಾಳಿ ಇದಾಗಿದೆಕಿಂಗ್ ಖಾಲಿದ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ದೇಶೀಯ ವಿಮಾನಗಳ ಟರ್ಮಿನಲ್ 3 ಮತ್ತು 4 ಇರುವ ಸಂಕೀರ್ಣದ ಮೇಲೆ ಕ್ಷಿಪಣಿ ಅಪ್ಪಳಿಸಿದೆ ಎಂದು ಪ್ರಾದೇಶಿಕ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಮೃತರಲ್ಲಿ ನಾಲ್ವರು ಸೌದಿ, ಇಬ್ಬರು ಬಾಂಗ್ಲಾದೇಶ, ಪ್ಯಾಲೆಸ್ಟೀನಿಯನ್, ಅಮೆರಿಕ, ಈಜಿಪ್ಟ್, ಜೋರ್ಡಾನ್, ಸಿರಿಯಾ, ಮತ್ತು ಸುಡಾನ್‌ನ ತಲಾ ಒಬ್ಬರು ಇದ್ದಾರೆ ಎಂದು ಸೌದಿ ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿಂದೆ ವಿಮಾನ ನಿಲ್ದಾಣದ ಮೇಲೆ ನಡೆದದಾಳಿಗಳಲ್ಲಿ ಒಬ್ಬ ಪೈಲಟ್ ಸೇರಿ ಮೂವರು ಸೌದಿ ಪ್ರಜೆಗಳು ಮೃತಪಟ್ಟಿದ್ದರು.
ಹೂಥಿಗಳ ವಿರುದ್ಧ ಸೇನಾ ಕಾರ್ಯಾಚರಣೆಗೆ ಟ್ರಂಪ್ ಚಿಂತನೆ
ದಾಳಿಯ ಬಳಿಕ ಪ್ರತಿಕ್ರಿಯಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಸೌದಿ ಅರೇಬಿಯಾದಲ್ಲಿ ನಡೆದಿರುವುದು ಸ್ವೀಕಾರಾರ್ಹವಲ್ಲ ಎಂದು ಹೇಳಿದ್ದಾರೆ. ಸೌದಿ ಅರೇಬಿಯಾದ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ ಅವರೊಂದಿಗೆ ಮಾತುಕತೆ ನಡೆಸುವುದಾಗಿಯೂ ತಿಳಿಸಿದ್ದಾರೆ.
ಹೂಥಿ ಬಂಡುಕೋರರ ವಿರುದ್ಧ ಸೌದಿ ಅರೇಬಿಯಾ ನಡೆಸುತ್ತಿರುವ ವಾಯುದಾಳಿಗಳಲ್ಲಿ ಅಮೆರಿಕವೂ ಪಾಲ್ಗೊಳ್ಳಬೇಕೇ ಎಂಬ ಬಗ್ಗೆ ಪರಿಶೀಲನೆ ನಡೆಸುತ್ತಿರುವುದಾಗಿ ಟ್ರಂಪ್ ಹೇಳಿದ್ದಾರೆ.
ಸೌದಿ ನೇತೃತ್ವದ ಮೈತ್ರಿಕೂಟವು ಈ ದಾಳಿಯನ್ನು ‘ಪೂರ್ಣ ಪ್ರಮಾಣದ ಯುದ್ಧಾಪರಾಧ’ ಎಂದು ಖಂಡಿಸಿದ್ದು, ಸೂಕ್ತ ತಿರುಗೇಟು ನೀಡುವುದಾಗಿ ಎಚ್ಚರಿಸಿದೆ.ದಾಳಿಯ ಹೊಣೆಯನ್ನು ಹೂಥಿಗಳು ಒಪ್ಪಿಕೊಂಡಿಲ್ಲ. ಇದೇ ವೇಳೆ ಹೂಥಿಗಳ ನಿಯಂತ್ರಣದಲ್ಲಿರುವ ಯೆಮನ್ ರಾಜಧಾನಿ ಸನಾದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಸೌದಿ ಅರೇಬಿಯಾ ದಾಳಿ ನಡೆಸಿದೆ ಎಂದು ಬಂಡುಕೋರರು ಆರೋಪಿಸಿದ್ದಾರೆ.
ವಿಮಾನ ನಿಲ್ದಾಣದ ಕಾರ್ಯಾಚರಣೆ ಸ್ಥಗಿತ
ದಾಳಿಯ ಬಳಿಕ ರಿಯಾದ್ ವಿಮಾನ ನಿಲ್ದಾಣದ ಕಾರ್ಯಾಚರಣೆ ಸ್ಥಗಿತಗೊಂಡಿದೆ. ವಿಮಾನ ನಿಲ್ದಾಣದ ಎಲ್ಲ ಪ್ರವೇಶ ದ್ವಾರಗಳನ್ನು ಮುಚ್ಚಲಾಗಿದ್ದು, ಭಾರಿ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಹಲವು ವಿಮಾನಗಳನ್ನು ಬೇರೆ ವಿಮಾನ ನಿಲ್ದಾಣಗಳಿಗೆ ತಿರುಗಿಸಲಾಗಿದೆ. ಅಮೆರಿಕ, ಬ್ರಿಟನ್, ಜರ್ಮನಿ, ಆಸ್ಟ್ರೇಲಿಯಾ ಮತ್ತು ಕೆನಡಾ ಸೇರಿದಂತೆ ಹಲವು ರಾಷ್ಟ್ರಗಳು ತಮ ನಾಗರಿಕರಿಗೆ ವಿಮಾನ ನಿಲ್ದಾಣದ ಪ್ರದೇಶದಿಂದ ದೂರವಿರುವಂತ ಎಚ್ಚರಿಕೆ ನೀಡಿವೆ.












































