ಮಂಗಳೂರು, ಅ.6: ಕರಾವಳಿ ಕರ್ನಾಟಕದ ಹೆಮ್ಮೆಯ ತುಳು ಭಾಷೆಯನ್ನು ಡಿಜಿಟಲ್ ಜಗತ್ತಿನಲ್ಲಿ ಮತ್ತಷ್ಟು ವಿಸ್ತರಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಡಲಾಗಿದೆ. ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಳಕೆದಾರರು ಇನ್ನು ಮುಂದೆ ನೇರವಾಗಿ ತುಳು ಲಿಪಿಯಲ್ಲೇ ಸಂದೇಶಗಳನ್ನು ಟೈಪ್ ಮಾಡಲು ನೆರವಾಗುವ ‘ಕುರಲ್ ತುಳು ಟಚ್’ (Kural Tulu Touch) ನೂತನ ಕೀಬೋರ್ಡ್ ಅಧಿಕೃತವಾಗಿ ಬಿಡುಗಡೆಯಾಗಿದೆ.
ಸಾಫ್ಟ್‌ವೇರ್ ಇಂಜಿನಿಯರ್‌ಗಳಾದ ಹರ್ಷಿತ್ ದೇವಾಡಿಗ ಹಾಗೂ ಚೈತ್ರಾ ಪೂಜಾರಿ ಅಭಿವೃದ್ಧಿಪಡಿಸಿರುವ ಈ ಕೀಬೋರ್ಡ್ ಅನ್ನು ಬೆಂಗಳೂರಿನಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಆಯೋಜಿಸಿದ್ದ ‘ತುಳುನಾಡ ಜಾನಪದ ಸಂಭ್ರಮ’ ಕಾರ್ಯಕ್ರಮದಲ್ಲಿ ಸಾರ್ವಜನಿಕ ಬಳಕೆಗೆ ಲೋಕಾರ್ಪಣೆಗೊಳಿಸಲಾಯಿತು.
ವಾಟ್ಸಾಪ್, ಸಾಮಾಜಿಕ ಜಾಲತಾಣಗಳಲ್ಲೂ ತುಳು ಲಿಪಿ
‘ಕುರಲ್ ತುಳು ಟಚ್’ ಕೀಬೋರ್ಡ್ ಸದ್ಯ ಆಂಡ್ರಾಯ್ಡ್ ಬಳಕೆದಾರರಿಗೆ ಬಾರವು ಸಾರವು’ (Baravu Saravu) ಆ್ಯಪ್ ಮೂಲಕ ಲಭ್ಯವಿದೆ. ಆ್ಯಪ್‌ನಲ್ಲಿರುವ ‘New Keyboard’ ಆಯ್ಕೆಯನ್ನು ಸಕ್ರಿಯಗೊಳಿಸಿದ ಬಳಿಕ ವಾಟ್ಸಾಪ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ನೇರವಾಗಿ ತುಳು ಲಿಪಿಯಲ್ಲಿ ಸಂದೇಶಗಳನ್ನು ಟೈಪ್ ಮಾಡಬಹುದು.
ತುಳು ಕೀಬೋರ್ಡ್‌ನಿಂದ ಇತರ ಭಾಷೆಗಳ ಕೀಬೋರ್ಡ್‌ಗಳಿಗೆ ಸುಲಭವಾಗಿ ಬದಲಾಯಿಸುವ ಸೌಲಭ್ಯವೂ ಇದ್ದು, ಟೈಪ್ ಮಾಡಿದ ಪಠ್ಯವನ್ನು ಡಿಜಿಟಲ್ ಚಾಟ್‌ಗಳಲ್ಲಿ ಹಂಚಿಕೊಳ್ಳಬಹುದಾದ ಸ್ಟಿಕ್ಕರ್‌ಗಳಾಗಿ ಪರಿವರ್ತಿಸುವ ಆಯ್ಕೆಯೂ ಇದೆ.
ಅಕ್ಷರ, ಗುಣಿತಾಕ್ಷರ, ಒತ್ತಕ್ಷರಗಳಿಗೆ ಬೆಂಬಲ
ಸಾಮಾನ್ಯ ಮೊಬೈಲ್ ಕೀಬೋರ್ಡ್‌ಗಳ ಮಾದರಿಯಲ್ಲೇ ಸರಳವಾಗಿ ಬಳಸಬಹುದಾದ ವಿನ್ಯಾಸವನ್ನು ‘ಕುರಲ್ ತುಳು ಟಚ್’ ಹೊಂದಿದೆ. ತುಳು ಭಾಷೆಯ ಅಕ್ಷರಗಳು. ಸಂಖ್ಯೆಗಳು, ಗುಣಿತಾಕ್ಷರಗಳು ಹಾಗೂ ಒತ್ತಕ್ಷರಗಳನ್ನು ಇದು ಬೆಂಬಲಿಸುತ್ತದೆ. ಹೀಗಾಗಿ ತುಳು ಲಿಪಿಯಲ್ಲಿ ಪದಗಳು ಹಾಗೂ ವಿವಿಧ ಅಕ್ಷರ ಸಂಯೋಜನೆಗಳನ್ನು ನಿಖರವಾಗಿ ಟೈಪ್ ಮಾಡಲು ಸಾಧ್ಯವಾಗಲಿದೆ.ತುಳು ಲಿಪಿಯನ್ನು ಕೇವಲ ಶೈಕ್ಷಣಿಕ ಉದ್ದೇಶಗಳು ಅಥವಾ ದಾಖಲೆಗಳಿಗೆ ಸೀಮಿತಗೊಳಿಸದೆ, ದೈನಂದಿನ ಡಿಜಿಟಲ್ ಸಂವಹನದಲ್ಲೂ ಪ್ರಾಯೋಗಿಕವಾಗಿ ಬಳಸುವಂತೆ ಮಾಡುವುದು ತಮ್ಮ ಉದ್ದೇಶ ಎಂದು ಡೆವಲಪರ್‌ಗಳು ತಿಳಿಸಿದ್ದಾರೆ.ಆ್ಯಪ್ ಅಭಿವೃದ್ಧಿಗೆ Flutter ಹಾಗೂ ಬ್ಯಾಕೆಂಡ್ ಬೆಂಬಲಕ್ಕೆ Firebase ತಂತ್ರಜ್ಞಾನ ಬಳಸಲಾಗಿದ್ದು. ಕೀಬೋರ್ಡ್ ಅಭಿವೃದ್ಧಿಯನ್ನು ಕೇವಲ ಎರಡು ವಾರಗಳಲ್ಲಿ ಪೂರ್ಣಗೊಳಿಸಲಾಗಿದೆ.
ಮೂರು ವರ್ಷಗಳ ಹಿಂದಿನ ತುಳು ಕಲಿಕಾ ಆ್ಯಪ್ ನೆರವು
ಮೂರು ವರ್ಷಗಳ ಹಿಂದೆ ರೂಪಿಸಿದ್ದ ‘ತುಳು ಕಲಿಕೆ ಆ್ಯಪ್’ ಈ ಯೋಜನೆಗೆ ಬಲವಾದ ಅಡಿಪಾಯವಾಯಿತು ಎಂದು ಹರ್ಷಿತ್ ದೇವಾಡಿಗ ತಿಳಿಸಿದ್ದಾರೆ. ಸಣ್ಣ ಮೊಬೈಲ್ ಪರದೆಯಲ್ಲಿ ತುಳು ಅಕ್ಷರಗಳನ್ನು ಸುಲಭವಾಗಿ ಗುರುತಿಸಿ ಟೈಪ್ ಮಾಡಲು ಅನುಕೂಲವಾಗುವಂತೆ ತುಳು ಫಾಂಟ್ ಅನ್ನು ಕೀಬೋರ್ಡ್ ಲೇಔಟ್‌ಗೆ ನಿಖರವಾಗಿ ಮ್ಯಾಪ್ ಮಾಡುವುದು ಪ್ರಮುಖ ತಾಂತ್ರಿಕ ಸವಾಲಾಗಿತ್ತು ಎಂದು ಅವರು ವಿವರಿಸಿದ್ದಾರೆ.ಜೈ ತುಳುನಾಡ್ ಸಂಸ್ಥಾಪಕ ಸದಸ್ಯ ಶರತ್ ಕೊಡವೂರು ಮಾತನಾಡಿ, ಕೇಂದ್ರ ಭಾರತೀಯ ಭಾಷೆಗಳ ಸಂಸ್ಥೆ (CIIL) ಮಾನ್ಯತೆ ಪಡೆದ ತುಳು ಲಿಪಿಯನ್ನು ಡಿಜಿಟಲ್ ಜಗತ್ತಿಗೆ ತರುವ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ. ಬಳಕೆದಾರರಿಗೆ ಗೊಂದಲವಾಗದಂತೆ ಅಕ್ಷರಗಳ ಸರಿಯಾದ ಮ್ಯಾಪಿಂಗ್ ಅತ್ಯಂತ ಮುಖ್ಯವಾಗಿತ್ತು ಎಂದು ಹೇಳಿದ್ದಾರೆ.
‘ಬಾರವು ಸಾರವು ನಲ್ಲಿ ತುಳು ಕಲಿಕೆಗೆ ಹಲವು ಸೌಲಭ್ಯ
‘ಬಾರವು ಸಾರವು’ ಆ್ಯಪ್ ಕೇವಲ ಕೀಬೋರ್ಡ್ ಒದಗಿಸುವುದಕ್ಕೆ ಸೀಮಿತವಾಗಿಲ್ಲ. ತುಳು ಕಲಿಯಲು ಆಸಕ್ತಿ ಹೊಂದಿರುವವರಿಗೆ ಸಮಗ್ರ ಕಲಿಕಾ ವೇದಿಕೆಯಾಗಿಯೂ ಇದು ಕಾರ್ಯನಿರ್ವಹಿಸುತ್ತದೆ.ಆ್ಯಪ್‌ನಲ್ಲಿ ತುಳು ನಿಘಂಟು, ಮೂಲಭೂತ ವಾಕ್ಯಗಳು. ಆಡಿಯೋ ಆಧಾರಿತ ಕಲಿಕಾ ಸಾಮಗ್ರಿಗಳು ಹಾಗೂ ತುಳು ಸಂಸ್ಕೃತಿಯನ್ನು ಪರಿಚಯಿಸುವ ಪಾರಂಪರಿಕ ಛಾಯಾಚಿತ್ರಗಳು ಲಭ್ಯವಿವೆ. ಬಳಕೆದಾರರು ನಿಘಂಟಿಗೆ ಹೊಸ ತುಳು ಪದಗಳನ್ನು ಸೂಚಿಸುವ ಅವಕಾಶವೂ ಇದ್ದು. ಪರಿಶೀಲನೆಯ ಬಳಿಕ ಅವುಗಳನ್ನು ಸೇರಿಸಲಾಗುತ್ತದೆ.Xತುಳು ಲಿಪಿ ಕಲಿಕಾ ವಿಷಯಗಳು ಹಾಗೂ ವೀಡಿಯೊಗಳನ್ನು ಒದಗಿಸಿರುವ ಬನಶ್ರೀ ಅವಿನಾಶ್, ಪಾರಂಪರಿಕ ಲಿಪಿಯನ್ನು ಕಲಿಯಲು ಮತ್ತು ಅಭ್ಯಾಸ ಮಾಡಲು ಆಸಕ್ತಿ ಹೊಂದಿರುವವರಿಗೆ ಈ ವೇದಿಕೆ ಪ್ರಾಯೋಗಿಕ ನೆರವು ನೀಡಲಿದೆ ಎಂದು ತಿಳಿಸಿದ್ದಾರೆ.
ಯೂನಿಕೋಡ್ ಮಾನ್ಯತೆಯ ಬಳಿಕ ಮತ್ತೊಂದು ಮಹತ್ವದ ಹೆಜ್ಜೆ
ತುಳು ತಿಗಳಾರಿ ಲಿಪಿಗೆ ಯೂನಿಕೋಡ್ ಮಾನ್ಯತೆ ದೊರೆತಿರುವುದು ಈ ತಾಂತ್ರಿಕ ಬೆಳವಣಿಗೆಗೆ ಪ್ರಮುಖ ಪ್ರೇರಣೆಯಾಗಿದೆ. 2024ರಲ್ಲಿ ಯೂನಿಕೋಡ್ ಕಾಸ್ಪೋರ್ಟಿಯಂನ ‘ಯೂನಿಕೋಡ್ 16ನೇ ಆವೃತ್ತಿಯಲ್ಲಿ 80 ತುಳು ಅಕ್ಷರಗಳನ್ನು ಸೇರ್ಪಡೆಗೊಳಿಸಲಾಗಿತ್ತು. ಇದರಿಂದ ಡಿಜಿಟಲ್ ವೇದಿಕೆಗಳಲ್ಲಿ ತುಳು ಲಿಪಿಗೆ ಬೆಂಬಲ ಕಲ್ಪಿಸಲು ಹಾಗೂ ಫಾಂಟ್ ಮತ್ತು ಕೀಬೋರ್ಡ್ ಅಭಿವೃದ್ಧಿಪಡಿಸಲು ತಾಂತ್ರಿಕ ಅಡಿಪಾಯ ಸೃಷ್ಟಿಯಾಯಿತು.ತುಳು ವಿದ್ವಾಂಸರು ಹಾಗೂ ತುಳು ಸಾಹಿತ್ಯ ಅಕಾಡೆಮಿಯಂತಹ ಸಂಸ್ಥೆಗಳ ಹಲವು ವರ್ಷಗಳ ಪ್ರಯತ್ನದ ಫಲವಾಗಿ ಈ ತಾಂತ್ರಿಕ ಪ್ರಗತಿ ಸಾಧ್ಯವಾಗಿದೆ. ಇದೀಗ ಸ್ಮಾರ್ಟ್‌ಫೋನ್ ಬಳಕೆ ಹೆಚ್ಚಿರುವ ಯುವ ಪೀಳಿಗೆಗೆ ಕನ್ನಡ ಅಥವಾ ಇಂಗ್ಲಿಷ್ ಲಿಪಿಯ ಬದಲು ತುಳು ಭಾಷೆಯನ್ನು ಅದರ ಮೂಲ ಲಿಪಿಯಲ್ಲೇ ಡಿಜಿಟಲ್ ಸಂವಹನದಲ್ಲಿ ಬಳಸಲು ಹೊಸ ಅವಕಾಶ ದೊರೆತಂತಾಗಿದೆ.ಸದ್ಯ ‘ಕುರಲ್ ತುಳು ಟಚ್’ ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರ ಲಭ್ಯವಿದ್ದು, ಮುಂದಿನ ದಿನಗಳಲ್ಲಿ iOS ಬಳಕೆದಾರರಿಗೂ ಕೀಬೋರ್ಡ್ ಬಿಡುಗಡೆ ಮಾಡಲು ಡೆವಲಪರ್‌ಗಳು ಯೋಜಿಸಿದ್ದಾರೆ.












































