ಸುಳ್ಯ :ಕಸ್ತೂರಿ ರಂಗನ್ ವರದಿ ವಿರೋಧಿಸಿ ಸುಳ್ಯದಲ್ಲಿ ಬೃಹತ್ ಪ್ರತಿಭಟನೆ: ಕರಡು ಅಧಿಸೂಚನೆ ಕೈಬಿಡಲು ಆಗ್ರಹಿಸಿ ತಹಶೀಲ್ದಾರ್‌ಗೆ ಮನವಿ

Picture of Savistara

Savistara

Bureau Report

ಸುಳ್ಯ: ಕಸ್ತೂರಿ ರಂಗನ್ ವರದಿ ಹಾಗೂ 7ನೇ ಕರಡು ಅಧಿಸೂಚನೆಯಡಿ ಪರಿಸರ ಸೂಕ್ಷ್ಮ ವಲಯ (ESA) ಘೋಷಣೆ ವಿರೋಧಿಸಿ ಮಲೆನಾಡು ಜನಹಿತ ರಕ್ಷಣಾ ವೇದಿಕೆ ವತಿಯಿಂದ ಸುಳ್ಯದ ಶ್ರೀ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ತಾಲೂಕು ಮಟ್ಟದ ಬೃಹತ್ ಪ್ರತಿಭಟನಾ ಸಭೆ ನಡೆಯಿತು.ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ರಾಜ್ಯ ಸಂಚಾಲಕ ಕಿಶೋರ್ ಕುಮಾರ್ ಶಿರಾಡಿ ನೇತೃತ್ವದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಕಸ್ತೂರಿ ರಂಗನ್ ವರದಿ ಹಾಗೂ ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ವಲಯದ 7ನೇ ಕರಡು ಅಧಿಸೂಚನೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂಪೂರ್ಣ ಕೈಬಿಡಬೇಕು ಎಂದು ಒತ್ತಾಯಿಸಲಾಯಿತು.

ಪಶ್ಚಿಮ ಘಟ್ಟ ಮತ್ತು ಜನವಸತಿ ಪ್ರದೇಶಕ್ಕೆ ಗಡಿ ಗುರುತು ಮಾಡಬೇಕು, ಕೃಷಿ ಭೂಮಿ ಮತ್ತು ಅರಣ್ಯ ಭೂಮಿಯ ನಡುವೆ ಆನೆ ಕಂದಕ ನಿರ್ಮಿಸಬೇಕು, ಪಶ್ಚಿಮ ಘಟ್ಟಕ್ಕೆ ಅನ್ವಯವಾಗುವ ಅರಣ್ಯ ಸಂರಕ್ಷಣಾ ಕಾಯ್ದೆ ಕೃಷಿ ಭೂಮಿ, ಜನವಸತಿ ಪ್ರದೇಶ ಮತ್ತು ಮೂಲಭೂತ ಸೌಕರ್ಯಕ್ಕೆ ಅನ್ವಯಿಸಬಾರದು, ಕಂದಾಯ ಮತ್ತು ಅರಣ್ಯ ಇಲಾಖೆ ಜಂಟಿ ಸರ್ವೆ ನಡೆಸಿ ರೈತರ ಪ್ಲಾಟಿಂಗ್ ಆಗದ ಭೂಮಿಯನ್ನು ಪ್ಲಾಟಿಂಗ್ ಮಾಡಿಕೊಡಬೇಕು, ರೈತರಿಗೆ ಕೋವಿ ಪರವಾನಿಗೆ ನೀಡಬೇಕು ಮೊದಲಾದ ಬೇಡಿಕೆಗಳನ್ನು ಸಭೆಯಲ್ಲಿ ಮಂಡಿಸಲಾಯಿತು.

ಹಿರಿಯ ಕೃಷಿಕ ಪಿ.ಬಿ. ಪ್ರಭಾಕರ ರೈ ಮಾತನಾಡಿ, ಕೃಷಿಕರ ಜೀವನ ಹಾಳು ಮಾಡುವ ಕಸ್ತೂರಿ ರಂಗನ್ ವರದಿಯನ್ನು ಜಾರಿಗೆ ತರಬಾರದು, ಇದಕ್ಕಾಗಿ ನಾವೆಲ್ಲರೂ ಒಗ್ಗಟ್ಟಾಗಿ ಪ್ರತಿಭಟಿಸಬೇಕು ಎಂದು ಕರೆ ನೀಡಿದರು.ಸುಳ್ಯ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಪಿ.ಸಿ. ಜಯರಾಮ್ ಮಾತನಾಡಿ, ಕಸ್ತೂರಿ ರಂಗನ್ ವರದಿಯನ್ನು ರಾಜಕೀಯ ಮರೆತು ವಿರೋಧಿಸಬೇಕು. ಈ ಬಗ್ಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರೈತರ ಪರವಾಗಿ ಪೂರಕ ತೀರ್ಮಾನ ಕೈಗೊಂಡಿರುವುದು ಸ್ವಾಗತಾರ್ಹ. ಮುಂದಿನ ಹೋರಾಟದಲ್ಲಿ ನಾವೂ ನಿಮ್ಮೊಂದಿಗೆ ಇರುತ್ತೇವೆ ಎಂದರು.

ಸಮಿತಿಯ ಕಾನೂನು ಸಲಹೆಗಾರ ಎಂ. ವೆಂಕಪ್ಪ ಗೌಡ ಮಾತನಾಡಿ, ಕಸ್ತೂರಿ ರಂಗನ್ ವರದಿ ವಿರುದ್ಧ ಕರ್ನಾಟಕ ಸರ್ಕಾರ ಐತಿಹಾಸಿಕ ತೀರ್ಮಾನ ಕೈಗೊಂಡಿದೆ. ರೈತಾಪಿ ವರ್ಗದ ಹಿತರಕ್ಷಣೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸರ್ವಪಕ್ಷಗಳ ವಿಶ್ವಾಸ ಪಡೆದು ಮುಂದಾಗಿದ್ದಾರೆ. ಇದಕ್ಕೆ ಕೇಂದ್ರ ಸರ್ಕಾರದ ಸಹಕಾರ ಅಗತ್ಯವಿದ್ದು, ಜಿಲ್ಲೆಯ ಸಂಸದರು ಸೇರಿದಂತೆ ರಾಜ್ಯದ ಎಲ್ಲಾ ಸಂಸದರು ಧ್ವನಿ ಎತ್ತಬೇಕು ಎಂದರು.

ವಿದ್ಯಾರ್ಥಿಗಳ ಪರವಾಗಿ ನಿಹಾಲ್ ಕೋಡ್ತುಗುಳಿ, ಕು. ಕವನ ಬೆಳ್ಳಿಯಪ್ಪ, ಕು. ಮೋಕ್ಷ ವೆಂಕಪ್ಪ ಮಾತನಾಡಿ ವರದಿಯನ್ನು ವಿರೋಧಿಸಿದರು.ಅಂತಿಮವಾಗಿ ಮಾತನಾಡಿದ ರಾಜ್ಯ ಸಂಚಾಲಕ ಕಿಶೋರ್ ಕುಮಾರ್ ಶಿರಾಡಿ, ಈ ವರದಿ ಜಾರಿಗೆ ಬಂದರೆ ನಮ್ಮ ಧಾರ್ಮಿಕ ಕೇಂದ್ರಗಳು ಮುಂದಿನ ದಿನಗಳಲ್ಲಿ ನಮ್ಮ ಮಕ್ಕಳಿಗೆ ಆರಾಧನೆಗೆ ಸಿಗದಂತಾಗಬಹುದು. ವರದಿ ಜಾರಿಯಿಂದ ಆಗುವ ವಿವಿಧ ಸಮಸ್ಯೆಗಳ ಬಗ್ಗೆ ವಿವರಿಸಿದರು.

ಬಳಿಕ ಪ್ರತಿಭಟನಾಕಾರರು ಪ್ರತಿಭಟನಾ ಸ್ಥಳದಿಂದ ಜಾಥಾ ಮೂಲಕ ಘೋಷಣೆಗಳನ್ನು ಕೂಗುತ್ತಾ ಸುಳ್ಯ ತಾಲೂಕು ಕಚೇರಿಗೆ ತೆರಳಿ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ಪ್ರತಿಭಟನೆಯಲ್ಲಿ ಮುಖಂಡರಾದ ಹರೀಶ್ ಕಂಜಿಪಿಲಿ, ಪಿ.ಎಸ್. ಗಂಗಾಧರ್, ಸುರೇಶ್ ಅಮೈ, ವಿನಯಕುಮಾರ್ ಕಂದಡ್ಕ ಸೇರಿದಂತೆ ನೂರಾರು ಕೃಷಿಕರು ಭಾಗವಹಿಸಿದ್ದರು.

ಕೃಷಿಕ ರವಿಕುಮಾರ್ ಭಟ್ ಉಬರಡ್ಕ ಪ್ರಾಸ್ತಾವಿಕ ಮಾತನಾಡಿದರು. ಸಂಚಾಲಕ ಭುವನೇಂದ್ರ ದಾಸ್ ಸ್ವಾಗತಿಸಿ, ಅಶೋಕ್ ಪೀಚೆ ವಂದಿಸಿದರು. ದುಶಾಂತ್ ಶೀರಡ್ಕ ಮತ್ತು ಶ್ರೀಮತಿ ವನಿತಾ ಮೀನಗದ್ದೆ ಕಾರ್ಯಕ್ರಮ ನಿರೂಪಿಸಿದರು.

News Updates

ಎಸ್‌ಐಆ‌ರ್ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರ ಬೆದರಿಸಿದರೆ ಸುಮ್ಮನಿರಲ್ಲ: ಪೊಲೀಸರಿಗೆ ಸಂಸದ ಕ್ಯಾ. ಚೌಟ ಎಚ್ಚರಿಕೆ – ಕಾಂಗ್ರೆಸ್ ತನ್ನ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಲಿ ಅಕ್ರಮವಾಗಿ ಮತ ರದ್ದು -ಮಾಡಲಾದ ವ್ಯಕ್ತಿಯನ್ನು ತಂದು ಚುನಾವಣಾಧಿಕಾರಿ ಮುಂದೆ ನಿಲ್ಲಿಸಲಿ: ಸಂಸದ ಸವಾಲು

News Updates

ಕೇಂದ್ರ ಸರ್ಕಾರದಿಂದ ಶಿವಮೊಗ್ಗ ನಗರ ಬೈಪಾಸ್ ಹಾಗೂ ನಗರ ವ್ಯಾಪ್ತಿಯ ಹೆದ್ದಾರಿ ಅಭಿವೃದ್ಧಿಗೆ 466.74 ಕೋಟಿ ರೂ. ಮಂಜೂರು; ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಕೃತಜ್ಞತೆ ಸಲ್ಲಿಸಿದ ಸಂಸದ ಬಿ.ವೈ. ರಾಘವೇಂದ್ರ

[t4b-ticker]
error: Content is protected !!