ನೈಋುತ್ಯ ಮುಂಗಾರು ರಾಜ್ಯದಲ್ಲಿ ಅಬ್ಬರಿಸುತ್ತಿದ್ದು, ಕರಾವಳಿ ಮತ್ತು ಒಳನಾಡಿನ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಹವಾಮಾನ ಇಲಾಖೆ ಆರು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಿದೆ. ಕೊಡಗಿನಲ್ಲಿ ತ್ರಿವೇಣಿ ಸಂಗಮ ಭರ್ತಿಯಾಗಿದ್ದು, ರಾಜ್ಯದ ಹಲವೆಡೆ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ. ಮಳೆಯಿಂದಾಗಿ ಅನೇಕ ಅವಾಂತರಗಳು ಸಂಭವಿಸಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ಬೆಂಗಳೂರು: ವಾಯುಭಾರ ಕುಸಿತದಿಂದಾಗಿ ಒಂದು ವಾರ ಮುಂಚಿತವಾಗಿ ಶನಿವಾರ ರಾಜ್ಯ ಪ್ರವೇಶಿಸಿದ ನೈಋುತ್ಯ ಮುಂಗಾರು ಎರಡನೇ ದಿನವೂ ಆರ್ಭಟ ಮುಂದುವರಿಸಿದೆ. ಭಾನುವಾರ ಒಳನಾಡಿನ ಜಿಲ್ಲೆಗಳಿಗೂ ಮಾನ್ಸೂನ್ ವ್ಯಾಪಿಸಿದ್ದು, ಅನೇಕ ಕಡೆ ಅವಾಂತರ ಸೃಷ್ಟಿಯಾಗಿದೆ. ಸೋಮವಾರವೂ ಭಾರಿ ಮಳೆ ಮುಂದುವರಿಯುವ ಸಾಧ್ಯತೆ ಇದೆ.
ಇಂದು 6 ಜಿಲ್ಲೆಗಳಿಗೆ ರೆಡ್ ಅಲರ್ಟ್
ಮುಂದಿನ ಒಂದು ವಾರ ರಾಜ್ಯದಲ್ಲಿ ವ್ಯಾಪಕ ಮಳೆಯಾಗಲಿದೆ. ಇದೇ ವೇಳೆ ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ಕರಾವಳಿ ಮತ್ತು ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಮೇ 28ರವರೆಗೆ ವ್ಯಾಪಕ ಮಳೆಯಾಗಲಿದ್ದು, ಹಲವು ಜಿಲ್ಲೆಗಳಿಗೆ ಹವಾಮಾನ ಇಲಾಖೆ ಎಚ್ಚರಿಕೆಯ ಮುನ್ಸೂಚನೆ ನೀಡಿದೆ. ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ, ಚಿಕ್ಕಮಗಳೂರು, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗೆ ಮೇ ಮೇ 26ಕ್ಕೆ ರೆಡ್ ಅಲರ್ಟ್ ನೀಡಲಾಗಿದೆ. ಧಾರವಾಡ, ಗದಗ, ಹಾವೇರಿ, ಹಾಸನ, ಮೈಸೂರು ಜಿಲ್ಲೆಗೆ ಯೆಲ್ಲೊಅಲರ್ಟ್ ಘೋಷಿಸಲಾಗಿದೆ.
ಕೊಡಗಿನಲ್ಲಿ ಮಳೆ ಅಬ್ಬರ: ತ್ರಿವೇಣಿ ಸಂಗಮ ಭರ್ತಿ
ಕೊಡಗು ಜಿಲ್ಲೆಯಾದ್ಯಂತ ಭಾರೀ ಮಳೆ ಮುಂದುವರಿದಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಮಡಿಕೇರಿ ಮತ್ತು ವಿರಾಜಪೇಟೆ, ಪೊನ್ನಂಪೇಟೆ ತಾಲೂಕು ವ್ಯಾಪ್ತಿಯಲ್ಲಿಭಾರೀ ಮಳೆಯಾಗುತ್ತಿದ್ದು, ನದಿ ತೊರೆಗಳು ಉಕ್ಕಿ ಹರಿಯುತ್ತಿವೆ. ಕಳೆದ ಹಲವು ವರ್ಷಗಳಲ್ಲೇ ಮೊದಲ ಬಾರಿ ಎಂಬಂತೆ ಮೇ ತಿಂಗಳಿನಲ್ಲಿಯೇ ಭಾಗಮಂಡಲ ತ್ರಿವೇಣಿ ಸಂಗಮ ಭರ್ತಿಯಾಗಿದ್ದು, ಸಂಗಮದ ಎದುರಿನ ನೂತನ ಉದ್ಯಾನ, ಪಕ್ಕದ ಗದ್ದೆಗಳೆಲ್ಲವೂ ಸಂಪೂರ್ಣ ಜಲಾವೃತವಾಗಿದೆ.
ಕೊಡಗು: ಕಾಲೇಜು, ಅಂಗನವಾಡಿಗಳಿಗೆ 2 ದಿನ ರಜೆ
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೊಡಗು ಜಿಲ್ಲಾಡಳಿತದೊಂದಿಗೆ ಸಮಾಲೋಚಿಸಿ ಕೊಡಗು ವಿಶ್ವ ವಿದ್ಯಾನಿಲಯದ ವ್ಯಾಪ್ತಿಗೆ ಒಳಪಡುವ ಎಲ್ಲಾ ಘಟಕ ಸರಕಾರಿ ಹಾಗೂ ಸಂಯೋಜಿತ ಮಹಾವಿದ್ಯಾಲಯಗಳಿಗೆ ಮೇ 26 ಹಾಗೂ 27ರಂದು ರಜೆ ಘೋಷಣೆ ಮಾಡಿ ಕೊಡಗು ವಿವಿ ಕುಲಪತಿ ಡಾ.ಅಶೋಕ್ ಸಂಗಪ್ಪ ಆಲೂರ ಆದೇಶಿಸಿದ್ದಾರೆ.
ಅಂಗನವಾಡಿಗಳಿಗೂ ರಜೆ:
ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಿಸಿರುವುದರಿಂದ ಹಾಗೂ ಹೆಚ್ಚಿನ ಗಾಳಿ ಮಳೆ ಇರುವುದರಿಂದ ಅಂಗನವಾಡಿ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಮೇ 26 ಹಾಗೂ 27ರಂದು ಎಲ್ಲಾಅಂಗನವಾಡಿ ಕೇಂದ್ರಗಳಿಗೆ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೋಮವಾರ ವ್ಯಾಪಕ ಮಳೆ
ಮುಂಗಾರು ಆರ್ಭಟ ಇಡೀ ದೇಶದಲ್ಲಿ ಶುರುವಾಗಿದ್ದು ಸೋಮವಾರ ಕೇರಳ, ತಮಿಳುನಾಡು, ಆಂಧ್ರ, ತೆಲಂಗಾಣ, ಮಹಾರಾಷ್ಟ್ರ, ದಿಲ್ಲಿ, ರಾಜಸ್ಥಾನ, ಹರಿಯಾಣ, ಉತ್ತರಾಖಂಡ, ಉತ್ತರ ಪ್ರದೇಶದಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಹಲವು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಕೇರಳದ ಇಡುಕ್ಕಿ, ತ್ರಿಶೂರ್, ವಯನಾಡು, ಕಾಸರಗೋಡು, ಎರ್ನಾಕುಲಂ ಜಿಲ್ಲೆಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಶಾಲಾ ಕಾಲೇಜಿಗೆ ಸೋಮವಾರ ರಜೆ ಘೋಷಿಸಲಾಗಿದೆ.
ದೇಶಾದ್ಯಂತ ಮಳೆ ಅವಾಂತರ
* ದಿಲ್ಲಿ ವಿಮಾ ನನಿಲ್ದಾಣದ ಟರ್ಮಿನಲ್ 1 ಬಳಿ ಚಾವಣಿ ಭಾಗಶಃ ಕುಸಿತ,
* 49 ವಿಮಾನಗಳ ಸಂಚಾರ ಮಾರ್ಗ ಬದಲು, 650 ವಿಮಾನಗಳು ವಿಳಂಬ
* ಭಾರಿ ಗಾಳಿ-ಮಳೆಗೆ ಹೊಳೆಯಂತಾದ ನಗರದ ರಸ್ತೆಗಳು, ಹಲವು ಪ್ರದೇಶ ಜಲಾವೃತ
* ಹಿಮಾಚಲ ಪ್ರದೇಶದ ರಾಂಪುರದಲ್ಲಿ ಮೇಘಸ್ಫೋಟ, ಕೊಚ್ಚಿ ಹೋದ ವಾಹನಗಳು
* ಉತ್ತರ ಪ್ರದೇಶದ ಘಾಜಿಯಾಬಾದ್‌ನಲ್ಲಿ ಮಳೆಗೆ ಪೊಲೀಸ್ ಠಾಣೆ ಮೇಲ್ಚಾವಣಿ ಕುಸಿತ, ಪಿಎಸ್‌ಐ ಸಾವು
ಬಿರುಗಾಳಿ, ನೆರೆಗೆ ಇಬ್ಬರು ಬಲಿಯಾಗಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮರ ಬಿದ್ದು ಆಟೋ ಚಾಲಕ ಮೃತಪಟ್ಟರೆ, ಕಾರವಾರದಲ್ಲಿ ಕಾಳಿ ನದಿಯಲ್ಲಿ ವ್ಯಕ್ತಿಯೊಬ್ಬರು ಕೊಚ್ಚಿ ಹೋಗಿದ್ದಾರೆ.ಚಿಕ್ಕಮಗಳೂರು ಜಿಲ್ಲೆಯಲ್ಲಿ ನೀರು ತುಂಬಿದ ಗುಂಡಿ ರಸ್ತೆಗಳಿಂದ ಜಾರಿ ಮೂರು ಕಾರುಗಳು ನದಿ ಪಾಲಾಗಿವೆ. ಕೊಡಗು, ಶಿವಮೊಗ್ಗ, ಕರಾವಳಿ ಜಿಲ್ಲೆಗಳಲ್ಲಿವಿದ್ಯುತ್ ಸಂಪರ್ಕ ಕಡಿತಗೊಂಡು ಕತ್ತಲು ಆವರಿಸಿದೆ. ನದಿ ತೊರೆಗಳು ತುಂಬಿ ಹರಿಯುತ್ತಿದ್ದು, ತುಂಗಾ ಸೇರಿದಂತೆ ಕೆಲವು ಜಲಾಶಯಗಳು ಮುಂಗಾರಿಗೆ ಮೊದಲೇ ಭರ್ತಿಯಾಗಿವೆ.
ದಕ್ಷಿಣ ಕನ್ನಡ ಜಿಲ್ಲಾದ್ಯಂತ ಭಾರಿ ವರುಣಾರ್ಭಟಕ್ಕೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಕಡಲ ತೀರದಲ್ಲಿ ಕಡಲ್ಕೊರೆತ ಶುರುವಾಗಿದ್ದು, ಅಪಾಯದ ಕರೆಗಂಟೆ ಬಾರಿಸಿದೆ. ಜಿಲ್ಲೆಯಲ್ಲಿ ಒಂದೇ ದಿನ 20ಕ್ಕೂ ಅಧಿಕ ಮನೆಗಳಿಗೆ ಹಾನಿಯಾದರೆ 300ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಜಿಲ್ಲೆಯ ಬಹುತೇಕ ನದಿಗಳ ಹರಿವಿನ ಮಟ್ಟ ಏರಿಕೆಯಾಗಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಚಲಿಸುತ್ತಿದ್ದ ಕಾರಿನ ಮೇಲೆ ಬೃಹತ್ ಮರವೊಂದು ಬಿದ್ದ ಘಟನೆ ಸುಬ್ರಹ್ಮಣ್ಯ-ಉಡುಪಿ ರಾಜ್ಯ ಹೆದ್ದಾರಿಯ ಕಡಬ ತಾಲೂಕಿನ ನೂಜಿಬಾಳ್ತಿಲದಲ್ಲಿ ಭಾನುವಾರ ನಡೆದಿದೆ. ಅದೃಷ್ಟವಶಾಂತ್ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.












































