ಸುಳ್ಯ : ಪ್ರಾಕೃತಿಕ ವಿಕೋಪ ಮುಂಜಾಗೃತಾ ಸಭೆ ಕರೆಂಟ್ ಇಲ್ಲದೆ ಒದ್ದಾಡುತ್ತಿರುವ ಗ್ರಾಮಗಳು | ಮಳೆಗಾಲ ಪೂರ್ವ ಸಿದ್ಧತೆ ಮಾಡದ ಕಾರಣ ಈ ರೀತಿ ಸಮಸ್ಯೆ ಮೆಸ್ಕಾಂ ಅನ್ನು ತರಾಟೆಗೆ ತೆಗೆದುಕೊಂಡ ಶಾಸಕಿ |

Picture of Savistara

Savistara

Bureau Report

ಸುಳ್ಯ: ಮಳೆ ಅರಂಭವಾದ ಬಳಿಕ ಸುಳ್ಯ ತಾಲೂಕಿನ ಗ್ರಾಮಗಳು ಕತ್ತಲಲ್ಲಿದೆ. ತನ್ನ ಗ್ರಾಮದಲ್ಲಿ, ನಮ್ಮ ಮನೆಯಲ್ಲಿ 4 ದಿನಗಳಿಂದ ವಿದ್ಯುತ್ ಇಲ್ಲ. ಮಳೆಗಾಲಕ್ಕೆ ಮುನ್ನ ವಿದ್ಯುತ್‌ ಲೈನ್‌ಗಳನ್ನು ಸುಸ್ಥಿತಿಯಲ್ಲಿಡಲು ಯಾಕೆ ಕ್ರಮ ಕೈಗೊಂಡಿಲ್ಲ, ಮಳೆಗಾಲಕ್ಕೆ ಮುನ್ನ ಏನು ಮಾಡ್ತಾ ಇದ್ರಿ ಎಂದು ಶಾಸಕಿ ಭಾಗೀರಥಿ ಮುರುಳ್ಯ ಮೆಸ್ಕಾಂ ಇಂಜಿನಿಯರ್‌ಗಳನ್ನು ಪ್ರಶ್ನಿಸಿದ್ದಾರೆ. ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆಯಲ್ಲಿ ನಡೆದ

ಪ್ರಾಕೃತಿಕ ವಿಕೋಪ ಮುಂಜಾಗೃತಾ ಸಭೆಯಲ್ಲಿ ಶಾಸಕರು ತಾಲೂಕಿನ ವಿದ್ಯುತ್‌ ಸಮ್ಯಸ್ಯೆಯ ಬಗ್ಗೆ ಖಾರವಾಗಿ ಪ್ರಶ್ನಿಸಿದರು. ವಿದ್ಯುತ್‌ ಇಲ್ಲದೆ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಕರೆಂಟ್ ಇಲ್ಲದೆ ಸಮಸ್ಯೆ ಉಂಟಾಗಿರುವ ಬಗ್ಗೆ ದೂರುಗಳು ಬರುತಿವೆ. ನಮ್ಮ ಗ್ರಾಮದಲ್ಲಿ 4 ದಿನಗಳಿಂದ ಕರೆಂಟ್ ಇಲ್ಲ, ಮೊಬೈಲ್ ಚಾರ್ಜ್ ಮಾಡಲು ಕೂಡ ಸಾಧ್ಯವಾಗದೆ ಜನರು ಪರದಾಡುವ ಸ್ಥಿತಿ ನಿರ್ಮಾಣ ಆಗಿದೆ. ಮಳೆಗಾಲಕ್ಕೆ ಮುನ್ನ ಎಲ್ಲಾ ಸಿದ್ಧತೆಗಳನ್ನು ಮಾಡಿ ಕೊಳ್ಳಲು ಮೊದಲೇ ಸೂಚನೆ ನೀಡಿದ್ದೆ. ಮಳೆಗಾಲ ಪೂರ್ವ ಸಿದ್ಧತೆಗಳು ಮಾಡದ ಕಾರಣ ಈ ರೀತಿ ಸಮಸ್ಯೆ ಆಗಿದೆ ಎಂದು ಶಾಸಕರು ಹೇಳಿದರು.

ಆದುದರಿಂದ ವಿದ್ಯುತ್ ಸಂಬಂಧಿಸಿ ಯಾವುದೇ ಸಮಸ್ಯೆ ಎದುರಾದರೂ ಕೂಡಲೇ ಸ್ಪಂದಿಸಬೇಕು. ಕರೆ ಮಾಡಿದರೆ ಲೈನ್‌ಮೆನ್‌ಗಳು, ಮೆಸ್ಕಾಂನವರು ಸ್ಪಂದಿಸುತ್ತಿಲ್ಲ, ಕರೆ ಸ್ವೀಕರಿಸುತ್ತಿಲ್ಲ ಎಂದ ಅವರು ವಿದ್ಯುತ್ ಕಡಿತ ಆದರೆ ಯಾವ ಕರೆ ಮಾಡಬೇಕಾದ ನಂಬರ್ ತನ್ನ ಕಚೇರಿಗೆ, ಸಾರ್ವಜನಿಕರಿಗೆ ತಿಳಿಸಿ ಎಂದು ಶಾಸಕರು ಖಡಕ್ಕಾಗಿ ಹೇಳಿದರು. ಕೇವಲ 10 ಗ್ಯಾಂಗ್‌ಮೆನ್‌ಗಳಿಂದ ಇಲ್ಲಿನ ಕೆಲಸ ಮಾಡಲು ಸಾಧ್ಯವಿಲ್ಲ, ಆದುದರಿಂದ ಮಳೆಗಾಲಕ್ಕೆ ಹೆಚ್ಚುವರಿ ಗ್ಯಾಂಗ್‌ಮೆನ್‌ಗಳ ನೇಮಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಶಾಸಕರು ಸೂಚಿಸಿದರು. ಅದಕ್ಕೆ ಪೂರಕವಾಗಿ ತಾನು ಮಾತನಾಡುತ್ತೇನೆ ಎಂದು ಅವರು ಹೇಳಿದರು. ಲೈನ್ ಮೇಲೆ ಬೀಳುವ ಕೊಂಬೆ ತೆರವು, ಮರ ತೆರವು, ಕಾಡು ಕಡಿಯಲು ಮತ್ತಿತರ ಕೆಲಸಗಳಿಗೆ ಸ್ಥಳೀಯ ಸಂಘ ಸಂಸ್ಥೆಗಳ, ಸಾರ್ವಜನಿಕರ ಸಹಕಾರ ಪಡೆಯುವಂತೆ ಶಾಸಕರು ಸೂಚಿಸಿದರು.

ಗ್ರಾಮಗಳಲ್ಲಿ ನಡೆಯುತ್ತಿರುವ ಕುಡಿಯುವ ನೀರಿನ ಪೈಪ್‌ ಅಳವಡಿಕೆ, ಕೇಬಲ್ ಅಳವಡಿಕೆಯಿಂದ ಅಗೆದು ಹಾಕಿ ವಿವಿಧ ಕಡೆಗಳಲ್ಲಿ ರಸ್ತೆ ಸಂಚಾರಕ್ಕೆ ತೀವ್ರ ಅಡಚಣೆ ಆಗಿದೆ. ಮಳೆಗಾಲ ಮುಗಿಯುವ ತನಕ ಕಾಮಗಾರಿ ಸ್ಥಗಿತ ಮಾಡಿ, ಅಥವಾ ಜನರಿಗೆ ತೊಂದರೆ ಆಗದಂತೆ ನಡೆಸುವಂತೆ ಶಾಸಕರು ಸೂಚಿಸಿದರು. ಸುಳ್ಯ ನಗರದಲ್ಲಿ ಅಮೃತ್‌ ಕುಡಿಯುವ ನೀರಿನ ಪೈಪ್ ಅಳವಡಿಕೆ ಮಾಡಿ ಸರಿಯಾಗಿ ಹೊಂಡ ಮುಚ್ಚದೆ ಸಮಸ್ಯೆ ಸೃಷ್ಟಿಯಾಗಿರುವ ಬಗ್ಗೆ ಗರಂ ಆದ ಶಾಸಕರು ಕಾಮಗಾರಿ ನಡೆಸುವ ಒಳಚರಂಡಿ ಮಂಡಳಿ ಇಂಜಿನಿಯರ್‌ಗಳಿಗೆ ನೋಟೀಸ್ ಜಾರಿ ಮಾಡಿ ಸಭೆಯಲ್ಲಿ ಹಾಜರಾಗುವಂತೆ ಸೂಚಿಸಲು ನ.ಪಂ. ಮುಖ್ಯಾಧಿಕಾರಿಗೆ ಶಾಸಕರು ತಿಳಿಸಿದರು.

ಮಳೆಗಾಲದಲ್ಲಿ ಪ್ರಾಕೃತಿಕ ವಿಕೋಪ ಉಂಟಾದರೆ ಅಧಿಕಾರಿಗಳು ಕೇಂದ್ರಸ್ಥಾನ ಬಿಟ್ಟು ಹೊರಗೆ ಹೋಗುವಂತಿಲ್ಲ. ಕೇಂದ್ರ ಸ್ಥಾನದಲ್ಲೇ ಇದ್ದು ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಬೇಕು ಎಂದು ಅವರು ಸೂಚನೆ ನೀಡಿದರು.ಮರ ಬೀಳುವುದು, ಗುಡ್ಡ ಜರಿತ, ನದಿ ತಿಂಬಿ ಹರಿಯುವುದು ಇತ್ಯಾದಿ ವಿಕೋಪಗಳು ನಡೆಯುತ್ತಿರುತ್ತದೆ. ಜನರು ಸಮಸ್ಯೆ ಹೇಳಿಕೊಂಡು ಅಧಿಕಾರಿಗಳಿಗೆ ಕರೆ ಮಾಡಿದಾಗ ಕರೆ ಸ್ವೀಕರಿಸಲಿಲ್ಲ ಎಂಬ ದೂರುಗಳು ಬರಬಾರದು. ಕರೆ ಸ್ವೀಕರಿಸಿ ಸ್ಪಂದನೆ ಮಾಡಬೇಕು.ಮತ್ತು ತಕ್ಷಣ ಸ್ಥಳ ಪರಿಶೀಲನೆ ಮಾಡಬೇಕು ಎಂದು ಅವರು ಸೂಚನೆ ನೀಡಿದರು. ಕೆಲವು ಡೆಂಗ್ಯು ಪ್ರಕರಣಗಳು ಕಂಡು ಬಂದಿದೆ ಆರೋಗ್ಯ ಇಲಾಖೆ ಮಾಹಿತಿ ನೀಡಿದ ಹಿನ್ನಲೆಯಲ್ಲಿ ಜಾಗೃತಿ ವಹಿಸಲು ಶಾಸಕರು ಸೂಚಿಸಿದರು. ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ರಾಜಣ್ಣ, ತಹಶೀಲ್ದಾ‌ರ್ ಮಂಜುನಾಥ್, ನ.ಪಂ. ಅಧ್ಯಕ್ಷೆ ಶಶಿಕಲಾ ನೀರಬಿದಿರೆ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

[t4b-ticker]
error: Content is protected !!