ಇಸ್ರೇಲ್ ಮತ್ತು ಇರಾನ್ ನಡುವೆ ಕದನ ವಿರಾಮ ಏರ್ಪಡಿಸಿದಂತೆ, ಇಸ್ರೇಲ್ ಮತ್ತು ಗಾಜಾ ನಡುವಿನ ಯುದ್ಧಕ್ಕೆ ವಿರಾಮ ಹಾಕಲು ಅಮೆರಿಕ ಪ್ರಯತ್ನಿಸುತ್ತಿದೆ.
ವಾಷಿಂಗ್ಟನ್ ಡಿಸಿ, ಅಮೆರಿಕ : ಇಸ್ರೇಲ್ ಮತ್ತು ಗಾಜಾದ ಹಮಾಸ್ ಉಗ್ರರ ನಡುವೆ ನಡೆಯುತ್ತಿರುವ ಕದನಕ್ಕೆ ಎರಡನೇ ಬಾರಿಗೆ ವಿರಾಮ ಬೀಳುವ ಸಾಧ್ಯತೆಯಿದೆ. “60 ದಿನಗಳ ಕದನ ವಿರಾಮಕ್ಕೆ ಇಸ್ರೇಲ್ ಒಪ್ಪಿಕೊಂಡಿದೆ. ಇದನ್ನು ಹಮಾಸ್ ಕೂಡ ಒಪ್ಪಬೇಕು” ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.ಈ ಬಗ್ಗೆ ಅವರು ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದು, “ಗಾಜಾದ ಮೇಲಿನ ತನ್ನ ದಾಳಿಯನ್ನು ನಿಲ್ಲಿಸಿ, 60 ದಿನಗಳ ಕದನ ವಿರಾಮ ನೀಡಲು ಇಸ್ರೇಲ್ ಅಗತ್ಯ ಷರತ್ತುಗಳೊಂದಿಗೆ ಒಪ್ಪಿಕೊಂಡಿದೆ. ಹಮಾಸ್ ಉಗ್ರರೂ ಶಾಂತಿ ಸಂಧಾನಕ್ಕೆ ಒಪ್ಪಿಕೊಳ್ಳಬೇಕು. ಕದನ ವಿರಾಮವನ್ನು ತಿರಸ್ಕರಿಸಿದಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಡಲಿದೆ” ಎಂದು ಎಚ್ಚರಿಕೆ ರವಾನಿಸಿದ್ದಾರೆ.”ಇಸ್ರೇಲ್ ಮತ್ತು ಗಾಜಾದ ನಡುವೆ ಶಾಂತಿ ಸಂಧಾನ ಮಾಡಲು ಕತಾರ್ ಮತ್ತು ಈಜಿಪ್ಟ್ ಶ್ರಮಿಸುತ್ತಿವೆ. ಕದನ ವಿರಾಮ ಪ್ರಸ್ತಾವನೆ ಸಲ್ಲಿಸಿರುವ ಈ ಎರಡು ರಾಷ್ಟ್ರಗಳು, ವಿರಾಮದ ಅವಧಿಯಲ್ಲಿ ಯುದ್ಧವನ್ನು ಕೊನೆಗೊಳಿಸುವ ಮಾತುಕತೆಗಳನ್ನೂ ನಡೆಸಲಿವೆ” ಎಂದು ಅವರು ಹೇಳಿದ್ದಾರೆ.
“ನನ್ನ ಪ್ರತಿನಿಧಿಗಳು ಇಂದು ಗಾಜಾದಲ್ಲಿ ಇಸ್ರೇಲಿ ಅಧಿಕಾರಿಗಳೊಂದಿಗೆ ದೀರ್ಘ ಮತ್ತು ಉತ್ಪಾದಕ ಸಭೆಯನ್ನು ನಡೆಸಿದರು. 60 ದಿನಗಳ CEASEFIRE ಅನ್ನು ಅಂತಿಮಗೊಳಿಸಲು ಇಸ್ರೇಲ್ ಅಗತ್ಯ ಷರತ್ತುಗಳಿಗೆ ಒಪ್ಪಿಕೊಂಡಿದೆ. ಇದೇ ವೇಳೆ, ಯುದ್ಧವನ್ನು ಮುಗಿಸುವ ಸಲುವಾಗಿ ಎಲ್ಲರೊಂದಿಗೆ ಮಾತುಕತೆ ನಡೆಸುತ್ತೇವೆ. ಮಧ್ಯಪ್ರಾಚ್ಯದ ಒಳಿತಿಗಾಗಿ, ಹಮಾಸ್ ಈ ಒಪ್ಪಂದವನ್ನು ಒಪ್ಪಿಕೊಳ್ಳುತ್ತದೆ ಎಂದು ನಾನು ಭಾವಿಸುತ್ತೇನೆ. ಏಕೆಂದರೆ, ಗಾಜಾದಲ್ಲಿ ಈಗಿನ ಪರಿಸ್ಥಿತಿ ಉತ್ತಮವಾಗಿಲ್ಲ. ಅದು ಇನ್ನಷ್ಟು ಹದಗೆಡುವ ಮುನ್ನ ಉತ್ತಮ ತೀರ್ಮಾನಕ್ಕೆ ಬರಬೇಕು” ಎಂದು ಅವರು ಟ್ರುಥ್ ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದಾರೆ.
ನೆತನ್ಯಾಹು ಅಮೆರಿಕ ಭೇಟಿಗೂ ಮೊದಲೇ ಡೀಲ್:
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಜುಲೈ 7 ರಂದು ಅಮೆರಿಕಕ್ಕೆ ಭೇಟಿ ನೀಡಲಿದ್ದಾರೆ. ಅದಕ್ಕೂ ಒಂದು ವಾರದ ಮೊದಲೇ ಕದನ ವಿರಾಮಕ್ಕೆ ಒಪ್ಪಿಗೆ ನೀಡಿದ್ದಾಗಿ ಅಮೆರಿಕ ಘೋಷಿಷಿದೆ. ಇಸ್ರೇಲ್ ಪ್ರಧಾನಿ ಅಮೆರಿಕಕ್ಕೆ ಆಗಮಿಸುವ ಮೊದಲೇ ಅಧ್ಯಕ್ಷ ಟ್ರಂಪ್ ಡೀಲ್ ನಡೆಸಿದ್ದಾರೆ.
ಶಾಂತಿ ಮಾತುಕತೆಗಳು ನಡೆಯುತ್ತಿರುವ ನಡುವೆಯೂ, ಗಾಜಾದಾದ್ಯಂತ ಇಸ್ರೇಲ್ ವೈಮಾನಿಕ ದಾಳಿಗಳನ್ನು ಮುಂದುವರೆಸಿದೆ. ಇಸ್ರೇಲ್ ಮಿಲಿಟರಿ ಪಡೆಗಳು ಪ್ಯಾಲೆಸ್ಟೈನಿಯನ್ನರಿಗೆ ಗಾಜಾ ಪಟ್ಟಿ ತೊರೆಯಲು ಎಚ್ಚರಿಕೆ ನೀಡಿದ್ದವು. ಆದಾಗ್ಯೂ ಜನರು ಸ್ಥಳಾಂತರವಾಗಿಲ್ಲ. ಇದರಿಂದ ಇಸ್ರೇಲ್ ನಡೆಸಿದ 50 ವೈಮಾನಿಕ ದಾಳಿಗಳಲ್ಲಿ ಸಾವು – ನೋವು ಉಂಟಾಗಿದೆ ಎಂದು ವರದಿಯಾಗಿದೆ.ಗಾಜಾದ ವೈದ್ಯಕೀಯ ಮೂಲಗಳ ಪ್ರಕಾರ, ಇಸ್ರೇಲ್ ಪಡೆಗಳು ಗಾಜಾದ ಮೇಲಿನ ದಾಳಿಯಲ್ಲಿ ಕನಿಷ್ಠ 68 ಪ್ಯಾಲೆಸ್ಟೈನಿಯನ್ನರು ಹತರಾಗಿದ್ದಾರೆ. ಇದರಲ್ಲಿ ಗಾಜಾ ನಗರ ಮತ್ತು ಉತ್ತರದ ಪ್ರದೇಶಗಳಲ್ಲಿಯೇ ಅತಿ ಹೆಚ್ಚು ಸಾವಾಗಿದೆ.ಗಾಜಾದ ಆರೋಗ್ಯ ಸಚಿವಾಲಯದ ಪ್ರಕಾರ, ವರ್ಷದಿಂದ ನಡೆಯುತ್ತಿರುವ ಯುದ್ಧದಲ್ಲಿ ಇಲ್ಲಿಯವರೆಗೆ ಕನಿಷ್ಠ 56,500 ಪ್ಯಾಲೆಸ್ಟೈನಿಯನ್ನರು ಬಲಿಯಾಗಿದ್ದಾರೆ. 133,419 ಜನರು ಗಾಯಗೊಂಡಿದ್ದಾರೆ. ಅಕ್ಟೋಬರ್ 7 ರ ದಾಳಿಯ ಸಮಯದಲ್ಲಿ ಇಸ್ರೇಲ್‌ನಲ್ಲಿ ಸುಮಾರು 1,139 ಜನರು ಸಾವನ್ನಪ್ಪಿದ್ದರು. 200 ಕ್ಕೂ ಹೆಚ್ಚು ಜನರನ್ನು ಹಮಾಸ್ ಉಗ್ರರು ಬಂಧಿಸಿ ಸೆರೆಯಾಳುಗಳನ್ನಾಗಿ ಕರೆದೊಯ್ದಿದ್ದರು.













































