ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮುಗಿದ ಬೆನ್ನಲ್ಲೇ ಆಚರಣೆಯ ವೈಖರಿ ಹಾಗೂ ಭದ್ರತಾ ಲೋಪದ ವಿರುದ್ಧ ಮೈಸೂರು ರಾಜಮನೆತನದ ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರು ಸರ್ಕಾರಕ್ಕೆ ಸುದೀರ್ಘ ಪತ್ರ ಬರೆದು ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ರಾಜಮಾತೆ ಪ್ರಮೋದಾದೇವಿ ಆಕ್ಷೇಪಗಳೇನು?
ಅಂಬಾರಿ ಪ್ರೈವೇಟ್ ಆಸ್ತಿ: ಚಿನ್ನದ ಅಂಬಾರಿ ನಮ್ಮ ಖಾಸಗಿ ಆಸ್ತಿಯಾಗಿದ್ದು, ಭದ್ರತೆಯ ಭರವಸೆ ಮೇಲೆ ನೀಡಲಾಗಿತ್ತು. ಆದರೆ ಅಂಬಾರಿ ಸುತ್ತ ಅನಧಿಕೃತ ವ್ಯಕ್ತಿಗಳು ಹಾಗೂ ಪೊಲೀಸರ ಕುಟುಂಬಸ್ಥರು ಸೆಲ್ಫಿ ಪಡೆಯುತ್ತಾ ಭದ್ರತೆಗೆ ಧಕ್ಕೆ ತಂದಿದ್ದಾರೆ.
ಆನೆ ಮಾಹಿತಿ ರಹಸ್ಯ: 45 ವರ್ಷಗಳಲ್ಲಿ ಮೊದಲ ಬಾರಿಗೆ ಅಂಬಾರಿ ಹೊರುವ ಆನೆ (ಪ್ರಶಾಂತ) ವಿಷಯವನ್ನು ಕೊನೆ ಕ್ಷಣದವರೆಗೂ ಮುಚ್ಚಿಡಲಾಗಿತ್ತು. ಡಿಸಿಎಫ್ ಅವರನ್ನು ನಾನೇ ಕೇಳಿ ತಿಳಿದುಕೊಳ್ಳುವ ಸ್ಥಿತಿ ಬಂದಿದ್ದು ಬೇಸರ ತಂದಿದೆ.
ವಿಜಯದಶಮಿಗೆ ಜಂಬೂಸವಾರಿ ಬೇಡ: ವಿಜಯದಶಮಿಯಂದು ಜಂಬೂಸವಾರಿ ನಡೆಸುವುದರಿಂದ ಅರಮನೆಯ ಖಾಸಗಿ ಧಾರ್ಮಿಕ ಕಾರ್ಯಕ್ರಮಗಳಿಗೆ ಅಡ್ಡಿಯಾಗುತ್ತಿದೆ. ಹೀಗಾಗಿ ಚಾಮುಂಡೇಶ್ವರಿ ರಥೋತ್ಸವದಂದು ಜಂಬೂಸವಾರಿ ಮೆರವಣಿಗೆ ನಡೆಸಿ ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಡಿಸಿಎಂ ಪ್ರತಿಕ್ರಿಯೆ:ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, “ಆ ಬಗ್ಗೆ ನನಗೆ ಸಂಪೂರ್ಣ ಮಾಹಿತಿ ಇಲ್ಲ, ವಿಷಯ ಏನೆಂದು ತಿಳಿದುಕೊಂಡು ಮಾತನಾಡುತ್ತೇನೆ” ಎಂದು ತಿಳಿಸಿದ್ದಾರೆ.












































