ಬೆಂಗಳೂರು: ಆನ್‌ಲೈನ್‌ನಲ್ಲಿ ವಸ್ತುಗಳನ್ನು ಆರ್ಡರ್ ಮಾಡಿದಾಗ ಖರೀದಿಸಿದ ಪ್ರೊಡಕ್ಟ್ ಸಿಗುವುದು ಸಾಮಾನ್ಯ. ಆದರೆ, ಫ್ಲಿಪ್‌ಕಾರ್ಟ್ ಪಾರ್ಸಲ್ ಒಂದರಲ್ಲಿ ಟಿ-ಶರ್ಟ್ ಜೊತೆಗೆ ಮಾರಾಟಗಾರನೊಬ್ಬ ಬರೆದಿದ್ದ ಮನಕಲಕುವ ಚೀಟಿಯೊಂದು ಸಿಕ್ಕಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
”ದಯವಿಟ್ಟು ರಿಟರ್ನ್ ಮಾಡಬೇಡಿ” ಎಂದ ಮಾರಾಟಗಾರ: ಕಲ್ಪೇಶ್ ಕೋಲಿ ಎಂಬ ಗ್ರಾಹಕರು ಫ್ಲಿಪ್‌ಕಾರ್ಟ್‌ನಲ್ಲಿ ಎಲ್ (L) ಗಾತ್ರದ ಟಿ-ಶರ್ಟ್ ಖರೀದಿಸಿದ್ದರು. ಪಾರ್ಸಲ್ ತೆರೆದು ನೋಡಿದಾಗ ಅದರೊಳಗೆ ಸಣ್ಣ ಬಿಳಿ ಕಾಗದದ ಚೀಟಿಯೊಂದು ಪತ್ತೆಯಾಗಿದೆ. “ದಯವಿಟ್ಟು ಈ ಉತ್ಪನ್ನವನ್ನು ಹಿಂದಿರುಗಿಸಬೇಡಿ. ನಾನು ಈಗಾಗಲೇ ತೀವ್ರ ನಷ್ಟದಲ್ಲಿದ್ದೇನೆ” ಎಂದು ಮಾರಾಟಗಾರ ಅದರಲ್ಲಿ ಅತ್ಯಂತ ಭಾವುಕವಾಗಿ ಮನವಿ ಮಾಡಿಕೊಂಡಿದ್ದಾನೆ. ಗ್ರಾಹಕರು ಈ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಂತೆ ಪೋಸ್ಟ್ ವೈರಲ್ ಆಗಿದೆ.
ಸಣ್ಣ ವ್ಯಾಪಾರಿಗಳ ಸಂಕಷ್ಟದ ಬಗ್ಗೆ ಚರ್ಚೆ: ಸಾಮಾನ್ಯವಾಗಿ ಗ್ರಾಹಕರು ಗಾತ್ರ ಸರಿಯಿಲ್ಲದಿದ್ದರೆ ಅಥವಾ ಇಷ್ಟವಾಗದಿದ್ದರೆ ತಕ್ಷಣ ಆನ್‌ಲೈನ್‌ನಲ್ಲಿ ರಿಟರ್ನ್ (Return) ಮಾಡುತ್ತಾರೆ. ಆದರೆ, ಹೀಗೆ ವಾಪಸ್ ಬರುವ ಆರ್ಡರ್‌ಗಳಿಂದ ಸಣ್ಣ ವ್ಯಾಪಾರಿಗಳು ಸಾಗಣೆ (Shipping), ಪ್ಯಾಕಿಂಗ್ ಹಾಗೂ ರಿಟರ್ನ್ ವೆಚ್ಚಗಳಿಂದಾಗಿ ಭಾರಿ ಆರ್ಥಿಕ ನಷ್ಟ ಅನುಭವಿಸಬೇಕಾಗುತ್ತದೆ. ಹಬ್ಬದ ಸೀಸನ್‌ನಲ್ಲಿ ಇದು ಸಣ್ಣ ಉದ್ಯಮಿಗಳಿಗೆ ದೊಡ್ಡ ಹೊರೆಯಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಇನ್ನೊಂದೆಡೆ, ಗ್ರಾಹಕರಿಗೆ ಸೂಕ್ತ ಹಾಗೂ ಗುಣಮಟ್ಟದ ಉತ್ಪನ್ನ ಸಿಗದಿದ್ದಾಗ ರಿಟರ್ನ್ ಮಾಡುವುದು ಅವರ ಹಕ್ಕು ಎಂಬ ಮಾತುಗಳೂ ಕೇಳಿಬಂದಿದ್ದು, ಆನ್‌ಲೈನ್ ವ್ಯಾಪಾರದ ಇನ್ನೊಂದು ಕಹಿ ಮುಖವನ್ನು ಈ ಘಟನೆ ತೋರಿಸಿಕೊಟ್ಟಿದೆ.












































