ಮುಂಬೈ, ಜನವರಿ 17: ಮಹಾರಾಷ್ಟ್ರದ ಮುಂಬೈ ಮಹಾನಗರ ಪಾಲಿಕೆ ಚುನಾವಣೆ (BMC Election) ನಡೆದು ನಿನ್ನೆ ಮತ ಎಣಿಕೆ ನಡೆದಿದೆ. ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಬಿಜೆಪಿಗೆ ಬಹುಮತ ಸಿಕ್ಕಿಲ್ಲ. ಹೀಗಾಗಿ, ಬಿಜೆಪಿಯ ಮಿತ್ರಪಕ್ಷವಾದ ಶಿವಸೇನೆಯ (ಶಿಂಧೆ ಬಣ) ಕಾರ್ಪೋರೇಟರ್ಗಳ ಬೆಂಬಲ ಬಿಜೆಪಿಗೆ ಅತ್ಯಗತ್ಯ. ಹೀಗಾಗಿ, ಶಿವಸೇನೆಯ ಕಾರ್ಪೋರೇಟರ್ಗಳನ್ನು ಬೇರೆ ಪಕ್ಷದವರು ತಮ್ಮ ತೆಕ್ಕೆಗೆ ತೆಗೆದುಕೊಳ್ಳಬಹುದು ಎಂಬ ಭಯದಿಂದ ಏಕನಾಥ್ ಶಿಂಧೆ ತಮ್ಮ ಪಕ್ಷದ ಕಾರ್ಪೋರೇಟರ್ಗಳನ್ನು ಬಾಂದ್ರಾದ ಫೈವ್ ಸ್ಟಾರ್ ಹೋಟೆಲ್‌ಗೆ ಶಿಫ್ಟ್ ಮಾಡುವ ಮೂಲಕ ರೆಸಾರ್ಟ್ ರಾಜಕೀಯ ಆರಂಭಿಸಿದ್ದಾರೆ.
ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ)ನಲ್ಲಿ ಅಧಿಕಾರ ರಚನೆಯ ಬಗ್ಗೆ ತೀವ್ರ ಚೌಕಾಶಿ ಆರಂಭವಾಗುತ್ತಿದ್ದಂತೆ, ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ತಮ್ಮ ಶಿವಸೇನಾ ಬಣದಿಂದ ಹೊಸದಾಗಿ ಆಯ್ಕೆಯಾದ ಎಲ್ಲಾ ಕಾರ್ಪೊರೇಟರ್‌ಗಳನ್ನು ಮುಂಬೈನ ಪಂಚತಾರಾ ಹೋಟೆಲ್‌ನಲ್ಲಿ ಇರುವಂತೆ ಸೂಚಿಸಿದ್ದಾರೆ.
ಪಕ್ಷದ ಮೂಲಗಳ ಪ್ರಕಾರ, ಏಕನಾಥ್ ಶಿಂಧೆ ನೇತೃತ್ವದ ಶಿವಸೇನಾ ಪಕ್ಷದ ಟಿಕೆಟ್‌ನಲ್ಲಿ ಆಯ್ಕೆಯಾದ 29 ಕಾರ್ಪೊರೇಟರ್‌ಗಳು ಬಾಂದ್ರಾದ ತಾಜ್ ಲ್ಯಾಂಡ್ಸ್ ಎಂಡ್ ಹೋಟೆಲ್ನಲ್ಲಿಯೇ ಇರಲು ಸೂಚಿಸಲಾಗಿದೆ. ಬಿಎಂಸಿ ಮೇಯರ್ ಕುರಿತು ಮಾತುಕತೆ ನಡೆಯುತ್ತಿರುವ ಈ ಸಮಯದಲ್ಲಿ “ಕುದುರೆ ವ್ಯಾಪಾರ”ದ ಪ್ರಯತ್ನಗಳನ್ನು ತಡೆಯಲು ಈ ಕ್ರಮ ತೆಗೆದುಕೊಳ್ಳಲಾಗಿದೆ.29 ಸ್ಥಾನಗಳೊಂದಿಗೆ ಶಿಂಧೆ ಬಣವು ಬಿಜೆಪಿಗೆ ನಿರ್ಣಾಯಕ ಮಿತ್ರಪಕ್ಷವಾಗಿ ಹೊರಹೊಮ್ಮಿದೆ. ಬಿಜೆಪಿಗೆ ಬಹುಮತವಿಲ್ಲದ ಕಾರಣದಿಂದ ಶಿವಸೇನೆ ಕಿಂಗ್ ಮೇಕರ್ ಆಗಿದೆ. ಹೀಗಾಗಿ, ಏಕನಾಥ್ ಶಿಂಧೆ ಯಾವುದೇ ರಿಸ್ಕ್ ತೆಗೆದುಕೊಳ್ಳಲು ಸಿದ್ಧರಿಲ್ಲ. ದೇಶದ ಅತ್ಯಂತ ಶ್ರೀಮಂತ ನಾಗರಿಕ ಸಂಸ್ಥೆಯಾದ ಬಿಎಂಸಿಯಲ್ಲಿ ಅಧಿಕಾರಕ್ಕೆ ಔಪಚಾರಿಕ ಹಕ್ಕು ಸಾಧಿಸುವವರೆಗೆ ಎಲ್ಲಾ ಕಾರ್ಪೊರೇಟರ್‌ಗಳು ಒಟ್ಟಿಗೆ ಇರಬೇಕೆಂದು ಅವರು ರೆಸಾರ್ಟ್ ರಾಜಕೀಯದ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
2019ರ ಚುನಾವಣಾ ನಂತರದ ಬಿಕ್ಕಟ್ಟಿನ ಸಮಯದಲ್ಲಿ ಕೂಡ ಶಿವಸೇನೆ, ಕಾಂಗ್ರೆಸ್ ಮತ್ತು ಎನ್‌ಸಿಪಿಯ ಪ್ರತಿಸ್ಪರ್ಧಿಗಳು ತಮ್ಮ ಶಾಸಕರನ್ನು ಮುಂಬೈನಾದ್ಯಂತ ಐಷಾರಾಮಿ ಹೋಟೆಲ್‌ಗಳಲ್ಲಿ ಇಟ್ಟಿದ್ದವು. 2022ರ ಶಿವಸೇನೆ ವಿಭಜನೆಯ ಸಮಯದಲ್ಲಿ ಕೂಡ ಇದೇ ರೀತಿಯ ತಂತ್ರವನ್ನು ಅನುಸರಿಸಲಾಗಿತ್ತು. ಇದೀಗ ಮತ್ತೆ ಶಿವಸೇನೆಯಲ್ಲಿ ರೆಸಾರ್ಟ್ ರಾಜಕೀಯ ಶುರುವಾಗಿದೆ.ಬಿಎಂಸಿ ಚುನಾವಣೆಯಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ನೇತೃತ್ವದಲ್ಲಿ ಬಿಜೆಪಿ 227 ವಾರ್ಡ್‌ಗಳಲ್ಲಿ 89 ಅನ್ನು ಗೆದ್ದು 2017ರಲ್ಲಿ ತನ್ನ ಹಿಂದಿನ ಗರಿಷ್ಠ 82 ಸ್ಥಾನಗಳನ್ನು ಮೀರಿಸುವ ಮೂಲಕ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಶಿಂಧೆ ನೇತೃತ್ವದ ಶಿವಸೇನೆ 29 ಸ್ಥಾನಗಳನ್ನು ಪಡೆಯಿತು. ಇದರಿಂದ ಮಹಾಯುತಿ ಮೈತ್ರಿಕೂಟದ ಸಂಖ್ಯೆಯನ್ನು 118ಕ್ಕೆ ಏರಿತು. ಈ ಮೂಲಕ ಮಹಾಯುತಿ ಬಹುಮತದ ಸಂಖ್ಯೆಯಾದ 114 ಸ್ಥಾನಗಳನ್ನು ಪಡೆದುಕೊಂಡಿದೆ. ಆದರೂ ಬೇರೆ ಪಕ್ಷದವರು ತಮ್ಮ ಕಾರ್ಪೋರೇಟರ್ಗಳಿಗೆ ಆಮಿಷವೊಡ್ಡಿ ತನ್ನತ್ತ ಸೆಳೆಯುವ ಭಯ ಇರುವುದರಿಂದ ಮೇಯರ್ ಆಯ್ಕೆಯ ಬಗ್ಗೆ ಅಂತಿಮವಾಗುವವರೆಗೂ ಶಿವಸೇನಾ ಕಾರ್ಪೋರೇಟರ್ಗಳನ್ನು ರೆಸಾರ್ಟ್ನಲ್ಲಿರಿಸಲು ನಿರ್ಧರಿಸಲಾಗಿದೆ.












































