ಉಡುಪಿ : ಶ್ರೀಕೃಷ್ಣಮಠದಲ್ಲಿ ಈಗಾಗಲೇ ಇರುವ ವಸ್ತ್ರ ಸಂಹಿತೆಯ ಅವಧಿಯನ್ನು ಮತ್ತು ದೇವರ ದರ್ಶನದ ಅವಧಿಯನ್ನು ವಿಸ್ತರಿಸಲಾಗಿದೆ.ಇದುವರೆಗೆ ಮಧ್ಯಾಹ್ನ ಮಹಾಪೂಜೆಯವರೆಗೆ ಶ್ರೀಕೃಷ್ಣಮಠದ ಗರ್ಭಗುಡಿ ಸುತ್ತನ್ನು ಪ್ರವೇಶಿಸುವವರು (ಪುರುಷರು) ಅಂಗಿಯನ್ನು ತೆಗೆಯಬೇಕಿತ್ತು. ಈ ನಿಯಮವನ್ನು ಇಡೀ ದಿನಕ್ಕೆ ವಿಸ್ತರಿಸಲಾಗಿದೆ. ಮಹಿಳೆಯರೂ ಕೂಡ ಸಭ್ಯ ಉಡುಪನ್ನೇ ಧರಿಸಬೇಕು. ಜೀನ್ಸ್ ಪ್ಯಾಂಟ್, ಟೀ ಶರ್ಟ್, ಸ್ಟೀವ್‌ಲೆಸ್ ಉಡುಪುಗಳನ್ನು ಧರಿಸಿಕೊಂಡು ಭಕ್ತರು ಬರಬಾರದು. ಇವರಿಗಾಗಿ ಶ್ರೀಕೃಷ್ಣಮಠದ ಕಚೇರಿಯಲ್ಲಿ ಒಂದಿಷ್ಟು ಶಾಲುಗಳನ್ನು ಇರಿಸಲಾಗಿದೆ. ಭಕ್ತರು ಇದನ್ನು ಬಳಸಿಕೊಳ್ಳಬಹುದು ಎಂದು ಮಠದ ದಿವಾನರಾದ ಡಾ| ಉದಯಕುಮಾರ ಸರಳತ್ತಾಯ ತಿಳಿಸಿದ್ದಾರೆ.
ಬೀಚ್‌ಗಳಿಗೆ ಹೋಗುವವರು ಇಲ್ಲಿಗೆ ಅದೇ ಉಡುಗೆಯಲ್ಲಿ ಬಂದು ಇತರರ ಮಾನಸಿಕತೆಯನ್ನು ಕೆಡಿಸಬಾರದು. ಶ್ರೀಕೃಷ್ಣಮಠಕ್ಕೆ ಬರುವವರು ಶ್ರೀಕೃಷ್ಣ ಭಕ್ತರಾಗಿಯೇ ಬರಬೇಕು ಎಂಬ ಉದ್ದೇಶದಿಂದ ಈ ಕ್ರಮವನ್ನು ಜ. 18ರಿಂದಲೇ ಜಾರಿಗೆ ತರಲಾಗಿದೆ. ಇದು ಹೊಸದೇನೂ ಅಲ್ಲ. ಈಗಾಗಲೇ ಅರ್ಧ ದಿನ ಇದ್ದ ನಿಯಮವನ್ನು ಇಡೀ ದಿನಕ್ಕೆ ವಿಸ್ತರಿಸಿದ್ದೇವೆ. ಇತರ ದೇವಸ್ಥಾನಗಳಲ್ಲಿಯೂ ವಸ್ತ್ರಸಂಹಿತೆ ಜಾರಿಯಲ್ಲಿದೆ. ಇದು ಕೇವಲ ಶ್ರೀಕೃಷ್ಣದೇವರ ದರ್ಶನ ಮಾಡುವ ಸುತ್ತು ಪೌಳಿ ಪ್ರವೇಶಿಸುವವರಿಗೆ ಮಾತ್ರ ಅನ್ವಯ ಎಂದು ದಿವಾನರು ತಿಳಿಸಿದ್ದಾರೆ.
ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರು ವುದರಿಂದ ಅವರಿಗೆ ತೊಂದರೆಯಾಗಬಾರದೆಂಬ ಕಾರಣಕ್ಕೆ ಭಕ್ತರ ದೇವರ ದರ್ಶನ ಅವಧಿಯನ್ನು ಕೂಡ ಬೆಳಗ್ಗೆ 4 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ವಿಸ್ತರಿಸಲಾಗಿದೆ.












































