ಕೋಝಿಕೋಡ್: ಇತ್ತೀಚೆಗಷ್ಟೇ, ಸಾಮಾಜಿಕ ಜಾಲತಾಣದಲ್ಲಿಯುವತಿಯೊಬ್ಬಳು ತನಗೆ ಬಸ್ಸಿನಲ್ಲಿ ವ್ಯಕ್ತಿಯೊಬ್ಬ ಅಸಭ್ಯಕರವಾಗಿ ಮುಟ್ಟುತ್ತಿದ್ದಾನೆ ಎಂದು ವಿಡಿಯೋ ಮೂಲಕ ಬಿಂಬಿಸಿ, ಸುಳ್ಳು ಸಂದೇಶವನ್ನು ಸಾರಿದಳು. ಈ ವಿಡಿಯೋ ಜಾಲತಾಣಗಳಲ್ಲಿ ಕ್ಷಣಮಾತ್ರದಲ್ಲಿ ವೈರಲ್ ಆಗಿ, ವ್ಯಕ್ತಿಗೆ ಅಲ್ಲೇ ಹಿಗ್ಗಾಮುಗ್ಗಾ ಥಳಿಸಬೇಕಿತ್ತು ಎಂಬ ಕಮೆಂಟ್ ಗಳಿಂದ ತುಂಬಿತು. ಸಾಕಷ್ಟು ಜನರು, ಆತನಿಗೆ ಸರಿಯಾಗಿ ಬುದ್ದಿ ಕಲಿಸಬೇಕಿತ್ತು ಎಂದೆಲ್ಲ ಆಕ್ರೋಶ ಹೊರಹಾಕಿದರು. ತನ್ನದೇನು ತಪ್ಪಿಲ್ಲದಿದ್ದರೂ ಸುಖಾಸುಮ್ಮನೆ ನನ್ನನ್ನು ವಿಡಿಯೋದಲ್ಲಿ ತೋರಿಸಿ, ಮಾನ-ಮರ್ಯಾದೆ ಕಳೆದಳು ಎಂದು ದೀಪಕ್ (41) ತೀರ ಮನನೊಂದು ಆತ್ಮಹತ್ಯೆಗೆ ಶರಣಾದ ಘಟನೆ ಸದ್ಯ ಇಡೀ ದೇಶದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಇದೆಂಥಾ ಅನ್ಯಾಯ?
ಸಮಾಜದಲ್ಲಿ ವ್ಯಾಪಕ ಛೀಮಾರಿ, ಅವಮಾನಗಳಿಂದ ಬೇಸತ್ತು ಮನನೊಂದ ದೀಪಕ್, ಸಾವಿಗೆ ಶರಣಾಗುವುದೊಂದೇ ದಾರಿ ಎಂದು ಆತ್ಮಹತ್ಯೆ ಮಾಡಿಕೊಂಡರು. ಮಗನ ಅಗಲಿಕೆಯಿಂದ ದುಃಖತಪ್ತರಾಗಿರುವ ಪೋಷಕರು, ಸತ್ಯಾಸತ್ಯತೆ ತಿಳಿಸಿ, ನಮ್ಮ ಪುತ್ರನ ಸಾವಿಗೆ ನ್ಯಾಯ ಕೊಡಿಸಬೇಕು ಎಂದು ಕಣ್ಣೀರಿಟ್ಟಿದ್ದಾರೆ. ಮತ್ತೊಂದೆಡೆ, ಪುರುಷರು ಮಹಿಳೆಯರ ಮಧ್ಯೆ ನಿಂತು ಪ್ರಯಾಣಿಸುವುದೇ ತಪ್ಪಾ? ಸತ್ಯ ತಿಳಿಯದೆ ಹೀಗೆ ಆರೋಪ ಮಾಡುವುದು ಎಷ್ಟು ಸರಿ? ಎಂಬ ಕೂಗುಗಳು ಜೋರಾಗಿವೆ. ಒಂದಷ್ಟು ಸಿಸಿಟಿವಿ ವಿಡಿಯೋಗಳ ಪರಿಶೀಲನೆ ಮತ್ತು ವಿಡಿಯೋ ಸ್ಪಷ್ಟಿಕರಣದಲ್ಲಿ ದೀಪಕ್ ಆ ರೀತಿ ತಪ್ಪಾಗಿ ನಡೆದುಕೊಂಡಿಲ್ಲ ಎಂಬುದು ತಿಳಿದುಬಂದಿದೆ.
ಅಂದು ಬಸ್ಸಿನಲ್ಲಿ….
ಇದಕ್ಕೆ ಪುಷ್ಠಿ ಎಂಬಂತೆ ದೀಪಕ್ ಆತ್ಮಹತ್ಯೆ ಸುದ್ದಿಯನ್ನು ಟಿವಿಯಲ್ಲಿ ನೋಡಿ ಹುಡುಗಿಯೊಬ್ಬಳು, ಅವರ ಸಾವಿನ ಸುದ್ದಿ ಕೇಳಿ ತುಂಬ ನೋವಾಯಿತು. ಅವರನ್ನು ನ್ಯೂಸ್‌ನಲ್ಲಿ ನೋಡಿ ಅತೀವ ದುಃಖ ಉಂಟಾಯಿತು. ಒಂದು ವರ್ಷದ ಹಿಂದೆ ಅದೇ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಅವರೊಂದಿಗೆ ನಾನು ಮಾತನಾಡಿದ್ದೇನೆ. ದೀಪಕ್ ಅವರು ನಿಜಕ್ಕೂ ಒಳ್ಳೆಯ ವ್ಯಕ್ತಿ ಏಕೆ? ಎಂಬುದಕ್ಕೆ ಆ ಘಟನೆಯ ಸಾಕ್ಷಿ ಎಂದು ಹೇಳುವ ಮೂಲಕ ಭಾವುಕರಾಗಿದ್ದಾರೆ.
ಕಣ್ಣೀರು ತರಿಸುತ್ತೆ ಈ ವಿಷಯ…
ಸುಮಾರು ಒಂದು ವರ್ಷದ ಹಿಂದೆ, ದೀಪಕ್ ಅವರನ್ನು ಅದೇ ಬಸ್ಸಿನಲ್ಲಿ ನಾನು ನೋಡಿದ್ದು. ನನ್ನ ಪಕ್ಕದಲ್ಲೇ ಬಂದು ಕುಳಿತರು. ಆ ಸಮಯದಲ್ಲಿ ನನಗೆ ವಿಪರೀತ ಮುಟ್ಟಿನ ನೋವು ಕಾಡುತ್ತಿತ್ತು. ಇದರಿಂದ ನರಳಾಡುತ್ತಿದ್ದ ನನ್ನನ್ನು ಗಮನಿಸಿದ ದೀಪಕ್ ಅವರು, ಏನಾಯಿತು ಎಂದು ವಿಚಾರಿಸಿದರು. ನಾನು ಮೌನವಾಗಿಯೇ ಇದ್ದೆ. ಅದನ್ನು ಅರ್ಥ ಮಾಡಿಕೊಂಡ ಅವರು, ನಿಮ್ಮ ತಾಯಿಗೆ ತಿಳಿಸಿ, ಸಹಾಯ ಪಡೆಯಬೇಕಾ ಎಂದು ಕೇಳಿದರು. ಬಳಿಕ ಅವರ ಬ್ಯಾಗ್‌ನಲ್ಲಿದ್ದ ಔಷಧಿಯನ್ನು ತೆಗೆದುಕೊಳ್ಳುವಂತೆ ಕೊಟ್ಟರು ಎಂದಿದ್ದಾಳೆ ಅನಾಮಧೇಯ ಹುಡುಗಿ.
ಈ ನೋವಿನಿಂದ ಪರೀಕ್ಷೆಗಳಿಗೆ ಗೈರಾಗುವ ಭಯ ನನ್ನಲ್ಲಿ ಕಾಡುತ್ತಿದೆ ಎಂದು ಅವರಿಗೆ ಹೇಳಿದೆ. ಕೂಡಲೇ ನನ್ನ ಸಮಸ್ಯೆಯ ಬಗ್ಗೆ ಬಿಟ್ಟು, ಎಜುಕೇಷನ್ ಕುರಿತು ವಿಚಾರಿಸಿದರು. ನೋಡಿ, ಈ ವಯಸ್ಸಿನಲ್ಲೂ ನಾನು ಜೀವನದೊಂದಿಗೆ ಹೋರಾಟ ಮಾಡುತ್ತಿರುವೆ. ಜೀವನ ಯಾವಾಗಲೂ ಹೀಗೆಯೇ. ಹಾಗಂತ, ನಾನೇನಾದರೂ ಹೆದರಿ ಕೂತಿದ್ದೇನಾ ಅಥವಾ ಹಾಗೆ ಕಾಣುತ್ತಿದ್ದೇನಾ? ಎಂದರು. ಅಷ್ಟಕ್ಕೂ ಅವರು ಪ್ರಯಾಣದುದ್ದಕ್ಕೂ ನನ್ನೊಂದಿಗೆ ಮಾತನಾಡಿದ ರೀತಿ ನಿಜಕ್ಕೂ ನನಗೆ ಆರಾಮದಾಯಕ ಅನಿಸಿತು. ಹೀಗಾಗಿಯೇ, ಟಿವಿಯಲ್ಲಿ ಅವರ ಮುಖ ನೋಡಿದ ಕೂಡಲೇ ಘಟನೆ ನೆನಪಾಯಿತು ಎಂದು ಹೇಳಿಕೊಂಡಿದ್ದಾರೆ.
ದೇಶವ್ಯಾಪಿ ಆಕ್ರೋಶ
ಸದಾ ಇತರರ ಬಗ್ಗೆ ಕಾಳಜಿ ವಹಿಸುತ್ತಿದ್ದ ದೀಪಕ್ ಇಂದು ಯುವತಿಯೊಬ್ಬಳ ವ್ಯೂಪ್ಸ್, ಲೈಕ್ಸ್ ಹುಚ್ಚಿಗೆ ತಮ್ಮ ಪ್ರಾಣವನ್ನೇ ಕಳೆದುಕೊಳ್ಳುವ ಪರಿಸ್ಥಿತಿಗೆ ದೂಡಿದ್ದು ನಿಜಕ್ಕೂ ಎಂಥವರ ರಕ್ತವನ್ನು ಕುದಿಸುತ್ತದೆ. ಯಾವ ತಪ್ಪನ್ನು ಮಾಡದ ಪುರುಷನಿಗೆ ಇದೆಂಥಾ ಶಿಕ್ಷೆ? ಹಾಗಿದ್ದರೆ, ಬಸ್ಸಿನಲ್ಲಿ ಪುರುಷರು ಮಹಿಳೆಯರ ಮಧ್ಯೆ ಪ್ರಯಾಣಿಸುವಂತಿಲ್ಲವೇ? ಇನ್ನೊಬ್ಬರ ಹುಚ್ಚಾಟಕ್ಕೆ ಅಮಾಯಕರು ಬಲಿಯಾಗುವುದು ಎಷ್ಟು ಸರಿ ಎಂಬ ಪ್ರಶ್ನೆಗಳು ಸದ್ಯ ರಾಷ್ಟ್ರಮಟ್ಟದಲ್ಲಿ ಪ್ರತಿಧ್ವನಿಸುತ್ತಿದೆ












































