ಮುಂಬೈ: ದೇವರ ಇಚ್ಛೆ ಇದ್ದರೆ ಬಿಎಂಸಿಯಲ್ಲಿ ನಮ್ಮ ಪಕ್ಷದವರೇ ಮೇಯರ್ ಆಗಬಹುದು ಎಂದು ಶಿವಸೇನಾ(ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಹೇಳಿಕೆ ನೀಡಿರುವುದು ರಾಜ್ಯ ರಾಜಕೀಯದಲ್ಲಿ ದೊಡ್ಡಮಟ್ಟದ ಸಂಚಲನ ಸೃಷ್ಟಿಸಿದ್ದು, ತಮ್ಮ ಬಣದ ಸಂಖ್ಯಾಬಲ ಕಡಿಮೆ ಇದ್ದಾಗಲು ಕೂಡ ಇದು ಹೇಗೆ ಸಾಧ್ಯ, ಏನು ಇದರ ಹಿಂದಿನ ಮರ್ಮ ಎನ್ನುವುದು ರಾಜಕೀಯ ಆಸಕ್ತರ ಪ್ರಶ್ನೆಯಾಗಿದೆ.
ಮುಂಬೈನಲ್ಲಿ ಪರಿಶಿಷ್ಟ ಪಂಗಡ (ಎಸ್‌ಟಿ) ಗುಂಪುಗಳ ಜನಸಂಖ್ಯೆ ಸೇರಿದಂತೆ ಹಲವಾರು ಅಂಶಗಳಿಂದಾಗಿ ಅಂತಹ ಪರಿಸ್ಥಿತಿ ಎದುರಾಗುವುದು ಅಷ್ಟು ಸುಲಭವಲ್ಲ ಎನ್ನುವುದು ರಾಜಕೀಯ ಬಲ್ಲವರ ಮಾತಾಗಿದೆ. ನಗರದಲ್ಲಿ ಎಸ್‌ಟಿ ಜನಸಂಖ್ಯೆ 1,29,653 ಆಗಿದ್ದು, ಕೇವಲ ಎರಡು ಮೀಸಲು ಸ್ಥಾನಗಳನ್ನು ಹೊಂದಿರುವ ಈ ವರ್ಗವು ಚಿಕ್ಕ ಗಾತ್ರದಲ್ಲಿರುವುದರಿಂದ ಮೇಯರ್ ಆಗಿ ಆಯ್ಕೆಯಾಗುವ ಸಾಧ್ಯತೆ ಕಡಿಮೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಚುನಾವಣೆಯ ಮೀಸಲಾತಿ ನೀಡುವಾಗ ಜನಸಂಖ್ಯಾ ಮಾನದಂಡಗಳನ್ನು ಬಳಸಲಾಗುವುದು ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ, ಸದ್ಯ ಅಲ್ಲಿಯೇ ಸ್ಪಷ್ಟತೆಯ ಕೊರತೆ ಇದ್ದು, ಈ ವಿಷಯದ ಬಗ್ಗೆ ತಿಳಿದಿರುವವರು ಲಾಟರಿ ನಡೆಸುವಾಗ ಹಲವಾರು ತಾಂತ್ರಿಕ ಅಂಶಗಳನ್ನು ವಿವರಿಸಲಾಗುವುದು ಎಂದು ಹೇಳುತ್ತಾರೆ. ಬಿಎಂಸಿ ಚುನಾವಣೆಯಲ್ಲಿ ಅಗತ್ಯ ಸಂಖ್ಯೆಯ ಸ್ಥಾನಗಳನ್ನು ಗೆಲ್ಲದಿದ್ದರೂ, ಮೇಯರ್ ಅಭ್ಯರ್ಥಿಯನ್ನು ಹೂಡಲು ಸಾಧ್ಯವಿರುವ ಏಕೈಕ ಪಕ್ಷವೆಂದರೆ ಅದು ಶಿವಸೇನೆ (ಯುಬಿಟಿ) ಎಂದು ಕೆಲವರು ಸುಳಿವು ನೀಡಿದ್ದಾರೆ.ಮೇಯರ್ ಚುನಾವಣೆಯ ವಿಶಿಷ್ಟ ಪ್ರಕ್ರಿಯೆಯಿಂದಾಗಿ. ಅಭ್ಯರ್ಥಿಯ ಆಯ್ಕೆಯನ್ನು ಸರದಿ ಮೀಸಲಾತಿ ಸ್ವರೂಪದಿಂದ ನಿರ್ಧರಿಸಲಾಗುತ್ತದೆ, ಇದನ್ನು ಲಾಟರಿ ಮೂಲಕ ನಿಗದಿಪಡಿಸಲಾಗುತ್ತದೆ. ಈ ಹುದ್ದೆಯನ್ನು ಮಹಿಳೆಯರು, ಎಸ್‌ಸಿ, ಎಸ್‌ಟಿ ಅಥವಾ ಒಬಿಸಿ ವರ್ಗಗಳಿಗೆ ಮೀಸಲಿಡಲಾಗುತ್ತದೆಯೇ ಎಂದು ಲಾಟರಿ ನಿರ್ಧರಿಸುತ್ತದೆ. ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಘೋಷಿಸುವ ಮೊದಲು ಇದನ್ನು ಅಂತಿಮಗೊಳಿಸಬೇಕಾಗುತ್ತದೆ.ಈ ನಿರ್ಣಾಯಕ ಲಾಟರಿಯನ್ನು ನಗರಾಭಿವೃದ್ಧಿ ಇಲಾಖೆ ನಡೆಸುತ್ತದೆ, ಈ ಖಾತೆ ಏಕನಾಥ್ ಶಿಂಧೆಯವರ ಬಳಿ ಇದೆ. ಕಳೆದ ಬಾರಿಯ ಮೇಯರ್ ಕಿಶೋರಿ ಪೆಡ್ನೇಕರ್ ಸಾಮಾನ್ಯ ವರ್ಗಕ್ಕೆ ಸೇರಿದವರಾಗಿರುವುದರಿಂದ, ಈ ಸಲವೂ ಅದೇ ವರ್ಗಕ್ಕೆ ಮುಂಬೈನ ಉನ್ನತ ಹುದ್ದೆ ಒಲಿಯುವ ಸಾಧ್ಯತೆ ಕಡಿಮೆ.ಮುಂಬೈನಲ್ಲಿ ನಡೆಯುವ ಮಹಾನಗರ ಪಾಲಿಕೆ ಚುನಾವಣೆಯಲ್ಲಿ, ಮಹಿಳೆಯರಿಗೆ ಅಥವಾ ನಿರ್ದಿಷ್ಟ ವರ್ಗಗಳಿಗೆ ಕಾರ್ಪೊರೇಟರ್ ಸ್ಥಾನಗಳ ಮೀಸಲಾತಿಯನ್ನು ಸಹ ಲಾಟರಿ ಮೂಲಕ ನಿರ್ಧರಿಸಲಾಗುತ್ತದೆ. 89 ಕಾರ್ಪೊರೇಟರ್‌ಗಳನ್ನು ಹೊಂದಿರುವ ಬಿಜೆಪಿ ಮತ್ತು 29 ಸ್ಥಾನಗಳನ್ನು ಹೊಂದಿರುವ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯಲ್ಲಿ ಎಸ್‌ಟಿ ವರ್ಗದಿಂದ ಹೊಸದಾಗಿ ಆಯ್ಕೆಯಾದ ಯಾವುದೇ ಕಾರ್ಪೊರೇಟರ್‌ಗಳಿಲ್ಲ ಎನ್ನುವುದು ಗಮನಾರ್ಹ ಸಂಗತಿ.ಜನವರಿ 16 ರಂದು ಫಲಿತಾಂಶಗಳು ಪ್ರಕಟವಾದ ಬಳಿಕ ಶಿವಸೇನೆ (ಯುಬಿಟಿ) ಮಾತ್ರ ಮೀಸಲು (ಎಸ್‌ಟಿ) ವರ್ಗದಿಂದ ಗೆದ್ದ ಅಭ್ಯರ್ಥಿಗಳನ್ನು ಹೊಂದಿದೆ. ಶಿವಸೇನೆ (ಯುಬಿಟಿ) ಟಿಕೆಟ್‌ಗಳ ಮೂಲಕ ಒಬ್ಬ ಎಸ್‌ಟಿ ಪುರುಷ ಮತ್ತು ಒಬ್ಬ ಎಸ್‌ಟಿ ಮಹಿಳೆ ಆಯ್ಕೆಯಾಗಿದ್ದಾರೆ. ಜಿತೇಂದ್ರ ವಾಲ್ವಿ ಮತ್ತು ದೀಪ್ಮಲಾ ಬಬನ್ ಬಾಧೆ ಈ ಇಬ್ಬರು ಉದ್ಧವ್ ಬಣದಿಂದ ಆಯ್ಕೆಯಾಗಿದ್ದಾರೆ. ಮುಂಬೈನಲ್ಲಿ ಶಿವಸೇನೆ (ಯುಬಿಟಿ) ಮೇಯರ್ ಹುದ್ದೆಯನ್ನು ಅಲಂಕರಿಸುವುದು ತಮ್ಮ ಕನಸಾಗಿದೆ ದೇವರು ಬಯಸಿದರೆ, ಈ ಕನಸು ನನಸಾಗುತ್ತದೆ ಎಂದು ಉದ್ಧವ್ ಠಾಕ್ರೆ ಶನಿವಾರ ಪಕ್ಷದ ಕಾರ್ಯಕರ್ತರಿಗೆ ತಿಳಿಸಿದ್ದರು.












































