ಬೆಂಗಳೂರು : ಮನರೇಗಾ ಯೋಜನೆ ಹೆಸರು ಬದಲಾವಣೆ ಮಾಡಿ ವಿಬಿ-ಜಿ ರಾಮ್ ಜಿ ಎಂದು ಮರುನಾಮಕರಣ ಮಾಡಿರುವ ಕೇಂದ್ರ ಸರ್ಕಾರದ ನಡೆಯ ವಿರುದ್ಧ ಸಮರ ಸಾರಿರುವ ಕರ್ನಾಟಕ ಸರ್ಕಾರ (Karnataka Government) ಇಂದು ಈ ವಿಚಾರ ಚರ್ಚಿಸಲು ಜಂಟಿ ಅಧಿವೇಶನ (Joint Session) ಕರೆದಿದ್ದು, ಸರ್ಕಾರದ ಭಾಷಣ ಓದಲು ರಾಜ್ಯಪಾಲ (Governor) ಥಾವರ್‌ಚಂದ್ ಗೆಹಲೋಟ್ (Thavarchand Gehlot) ನಿರಾಕರಿಸಿದ್ದಾರೆ.
ಸರ್ಕಾರ ನೀಡಿರುವ ಭಾಷಣ ಓದುವುದಿಲ್ಲ ಎಂದಿರುವ ರಾಜ್ಯಪಾಲರು ಹಲವು ವಿಚಾರಗಳನ್ನು ಭಾಷಣದಿಂದ ಕೈಬಿಡುವಂತೆ ಹೇಳಿದ್ದಾರೆ. ಭಾಷಣದ 11ನೇ ಪ್ಯಾರಾದಲ್ಲಿರುವ ಅಂಶಗಳನ್ನು ಕೈಬಿಡಲು ಆಗ್ರಹಿಸಿದ್ದಾರೆ ಎನ್ನಲಾಗಿದೆ.ಭಾಷಣದಲ್ಲಿದೆ ಎನ್ನಲಾದ ‘ವಿಬಿ ಜಿ ರಾಮ್ ಜಿ ಕಾಯ್ದೆ ಭ್ರಷ್ಟಾಚಾರಕ್ಕೆ ಆಸ್ಪದ ಮಾಡಿಕೊಡುತ್ತದೆ’ ಹಾಗೂ ‘ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡುತ್ತದೆ’ ಎಂಬ ಅಂಶಗಳಿದ್ದು, ಅವುಗಳನ್ನು ಕೈಬಿಡುವಂತೆ ರಾಜ್ಯಪಾಲರು ಹೇಳಿದ್ದಾರೆಈಗಾಗಲೇ ಈ ಕುರಿತು ಸರ್ಕಾರ ತೀರ್ಮಾನ ಕೈಗೊಂಡಿದ್ದು, ಈ ವಿಷಯವನ್ನು ರಾಜ್ಯಪಾಲರ ಗಮನಕ್ಕೂ ತರಲಾಗಿದೆ ಎಂದು ಸರ್ಕಾರದ ಮೂಲಗಳು ಹೇಳಿವೆ. ಹೀಗಿದ್ದರೂ ಒಂದೊಮ್ಮೆ ರಾಜ್ಯಪಾಲರು ಅಧಿವೇಷನಕ್ಕೆ ಗೈರಾದರೆ ಕೋರ್ಟ್ ಮೆಟ್ಟಿಲೇರಲು ಸರ್ಕಾರ ನಿರ್ಧರಿಸಿದೆ.
ರಾಜ್ಯಪಾಲರ ವಿರುದ್ಧ ಕಾನೂನು ಸಮರಕ್ಕೆ ಸರ್ಕಾರ ಸಜ್ಜು
ರಾಜ್ಯಪಾಲರ ನಡೆ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾಗಿರುವ ರಾಜ್ಯ ಸರ್ಕಾರ, ಈ ಸಂಬಂಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಸಿದ್ಧತೆ ನಡೆಸಿದೆ. ರಾಜ್ಯಪಾಲರು ಇಂದು ವಿಧಾನಸಭೆಯಲ್ಲಿ ಸರ್ಕಾರದ ಭಾಷಣವನ್ನು ಓದಲು ಆಗಮಿಸುತ್ತಾರೆ ಎಂಬ ವಿಶ್ವಾಸ ಸರ್ಕಾರಕ್ಕಿದ್ದರೂ, ಅವರು ಹಾಜರಾಗದೇ ಇದ್ದರೆ ತಕ್ಷಣವೇ ಕಾನೂನು ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ.ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಪರವಾಗಿ ಅಡ್ವೊಕೇಟ್ ಜನರಲ್ (ಎಜಿ) ಶಶಿಕಿರಣ್ ಶೆಟ್ಟಿ ದೆಹಲಿಗೆ ತೆರಳಿದ್ದಾರೆ. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಅವರ ಮುಂದೆ ಅರ್ಜಿ ಸಲ್ಲಿಸಲು ಸರ್ಕಾರ ಈಗಾಗಲೇ ನಿರ್ಧಾರ ಕೈಗೊಂಡಿದೆ. ಅರ್ಜಿಯ ಕರಡು ಸಿದ್ಧಪಡಿಸುವ ಜವಾಬ್ದಾರಿಯನ್ನು ಮುಖ್ಯಮಂತ್ರಿ ತಮ್ಮ ಕಾನೂನು ಸಲಹೆಗಾರ ಪೊನ್ನಣ್ಣ ಹಾಗೂ ಎಜಿ ಶಶಿಕಿರಣ್ ಶೆಟ್ಟಿಗೆ ನೀಡಿದ್ದಾರೆ.
ಸರ್ಕಾರದ ಅರ್ಜಿಯಲ್ಲಿ ಏನಿದೆ?
ಸರ್ಕಾರ ಸಲ್ಲಿಸಲು ಉದ್ದೇಶಿಸಿರುವ ಅರ್ಜಿಯಲ್ಲಿ ಎರಡು ಪ್ರಮುಖ ಅಂಶಗಳನ್ನು ಉಲ್ಲೇಖಿಸಲಾಗಿದೆ. ಮೊದಲನೆಯದಾಗಿ, ರಾಜ್ಯಪಾಲರು ಸರ್ಕಾರದ ಭಾಷಣವನ್ನು ಸದನದಲ್ಲಿ ಓದಲೇಬೇಕು ಎಂಬ ನಿರ್ದೇಶನ ನೀಡುವಂತೆ ಕೋರಲಾಗುತ್ತದೆ. ಎರಡನೆಯದಾಗಿ, ಸಂವಿಧಾನಾತ್ಮಕವಾಗಿ ರಾಜ್ಯಪಾಲರಿಗೆ ಇರುವ ಕರ್ತವ್ಯಗಳನ್ನು ಅವರು ಪಾಲಿಸಬೇಕೆಂದು ಸುಪ್ರೀಂ ಕೋರ್ಟ್ ಸ್ಪಷ್ಟ ನಿರ್ದೇಶನ ನೀಡಬೇಕೆಂದು ಸರ್ಕಾರ ಮನವಿ ಮಾಡಲು ಸಿದ್ಧತೆ ನಡೆಸಿದೆ.ರಾಜ್ಯದಲ್ಲಿ ಸಂವಿಧಾನಾತ್ಮಕ ಬಿಕ್ಕಟ್ಟು ಉದ್ಭವಿಸಿರುವುದರಿಂದ, ಸುಪ್ರೀಂ ಕೋರ್ಟ್ ಮಧ್ಯಪ್ರವೇಶ ಅಗತ್ಯವಾಗಿದೆ ಎಂಬ ನಿಲುವನ್ನು ಸರ್ಕಾರ ಹೊಂದಿದೆ. ಇಂದು ಬೆಳಗ್ಗೆ 11 ಗಂಟೆಯವರೆಗೆ ರಾಜ್ಯಪಾಲರ ಆಗಮನಕ್ಕಾಗಿ ಸರ್ಕಾರ ಕಾದು ನೋಡಲಿದೆ. ಆ ವೇಳೆಯೊಳಗೆ ರಾಜ್ಯಪಾಲರು ಭಾಷಣಕ್ಕೆ ಆಗಮಿಸದೇ ಇದ್ದರೆ, ತಕ್ಷಣವೇ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸುವುದಾಗಿ ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ.












































