ಮುಂಬೈ: ಮಹಾರಾಷ್ಟ್ರದ ಎಲ್ಲಾ 29 ಪುರಸಭೆಗಳಲ್ಲಿ ಮೇಯರ್ ಹುದ್ದೆಗಳಿಗೆ ಮೀಸಲಾತಿ ವರ್ಗಗಳನ್ನು ನಿರ್ಧರಿಸುವ ಪ್ರಕ್ರಿಯೆ ಮುಂದುವರೆದಿದ್ದು, ಈ ಲಾಟರಿಯನ್ನು ನಗರಾಭಿವೃದ್ಧಿ ಸಚಿವ ಏಕನಾಥ್ ಶಿಂಧೆಯವರ ಇಲಾಖೆ ನಡೆಸುತ್ತದೆ.ಇಂದು ನಡೆದ ಪ್ರಮುಖ ಬೆಳವಣಿಗೆಯೊಂದರಲ್ಲಿ, ಮುಂಬೈನ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ಸಾಮಾನ್ಯ ವರ್ಗದ ಮಹಿಳೆಯೊಬ್ಬರು ನೇತೃತ್ವ ವಹಿಸಲಿದ್ದಾರೆ ಎಂದು ಲಾಟರಿ ಡ್ರಾ ದೃಢಪಡಿಸಿದೆ ಎಂದು ವರದಿಯಾಗಿದೆ. ರಾಜ್ಯದ ಎಲ್ಲಾ ಮೇಯರ್ ಹುದ್ದೆಯನ್ನು ಸಾಮಾನ್ಯ, ಮಹಿಳೆಯರು, SC, ST ಮತ್ತು OBC ವರ್ಗಗಳಿಗೆ ಮೀಸಲಿಡಲಾಗುವುದು ಎಂದು ಮೂಲಗಳು ತಿಳಿಸಿವೆ. ನಗರಾಭಿವೃದ್ದಿ ಇಲಾಖೆ ಎಲ್ಲಾ ಪುರಸಭೆಗಳ ಮೀಸಲಾತಿಯನ್ನು ಘೋಷಿಸಿದ ಬಳಿಕ, ಅರ್ಹ ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ಸಲ್ಲಿಸಲಿದ್ದಾರೆ.ಉದ್ಧವ್ ಠಾಕ್ರೆ ಬಣದಿಂದ ಆಕ್ಷೇಪಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ) ಮೀಸಲಾತಿ ಲಾಟರಿಯನ್ನು ಬಹಿಷ್ಕರಿಸಿ, ಆಯ್ಕೆ ಮಾದರಿಯಲ್ಲಿ ಅಕ್ರಮವಿದೆ ಎಂದು ಆರೋಪಿಸಿದೆ. ಮೇಯರ್ ಸ್ಥಾನವನ್ನು ಒಬಿಸಿ ಅಥವಾ ಇನ್ನೊಂದು ಮೀಸಲು ವರ್ಗಕ್ಕೆ ವರ್ಗಾಯಿಸಬೇಕಾಗಿದ್ದಾಗ, ಮೇಯರ್ ಸ್ಥಾನವನ್ನು ಮತ್ತೊಮ್ಮೆ ಸಾಮಾನ್ಯ ವರ್ಗಕ್ಕೆ ಏಕೆ ನೀಡಲಾಗಿದೆ ಎಂದು ಯುಬಿಟಿ ನಾಯಕರು ಪ್ರಶ್ನಿಸಿದ್ದಾರೆ.ಯಾರ ಗಮನಕ್ಕೂ ತರದೇ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಶಿವಸೇನೆ (ಯುಬಿಟಿ) ನಾಯಕಿ ಮತ್ತು ಮುಂಬೈನ ಮಾಜಿ ಮೇಯರ್ ಕಿಶೋರಿ ಪೆಡ್ನೇಕರ್ ಹೇಳಿದ್ದಾರೆ. ಲಾಟರಿ ಕಾರ್ಯವಿಧಾನವನ್ನು ಖಂಡಿಸಿದ್ದಾರೆ.ಈ ಸಲ ಎಸ್‌ಟಿ ವರ್ಗಕ್ಕೆ ಮೇಯರ್ ಹುದ್ದೆ ಸಿಗದಿದ್ದಕ್ಕೆ ಶಿವಸೇನೆ (ಯುಬಿಟಿ) ನಿರಾಶೆ ವ್ಯಕ್ತಪಡಿಸಿದೆ. ಆದರೆ ನಿಯಮಗಳ ಪ್ರಕಾರ, ಎಸ್‌ಟಿ ವರ್ಗಕ್ಕೆ ಮೂರು ಅಥವಾ ಅದಕ್ಕಿಂತ ಕಡಿಮೆ ಸ್ಥಾನಗಳನ್ನು ಕಾಯ್ದಿರಿಸಿದ ಪುರಸಭೆಯು ಅದೇ ವರ್ಗಕ್ಕೆ ಮೇಯರ್ ಹುದ್ದೆಯನ್ನು ಹಂಚಿಕೆ ಮಾಡಲು ಸಾಧ್ಯವಿಲ್ಲ. ಈ ಬಾರಿ, ಮುಂಬೈ 227 ರಲ್ಲಿ ಕೇವಲ ಎರಡು ಎಸ್‌ಟಿ-ಮೀಸಲು ಸ್ಥಾನಗಳನ್ನು ಹೊಂದಿತ್ತು, ಆದ್ದರಿಂದ ಆ ವರ್ಗಕ್ಕೆ ಸಾಂವಿಧಾನಿಕವಾಗಿ ಮೇಯರ್ ಸ್ಥಾನ ನೀಡುವುದು ಅಸಾಧ್ಯವಾಗಿತ್ತು. ಮುಂಬೈನಲ್ಲಿ ಸಾಮಾನ್ಯ ವರ್ಗದ ಮಹಿಳಾ ಅಭ್ಯರ್ಥಿಯೊಬ್ಬರು ಮೇಯರ್ ಆಗಲಿದ್ದಾರೆ ಎನ್ನುವುದನ್ನು ಲಾಟರಿ ಅಧಿಕೃತವಾಗಿ ದೃಢಪಡಿಸಿದೆ.
ಪ್ರಮುಖ ಪುರಸಭೆ ನಿಗಮಗಳಲ್ಲಿ ಇಲ್ಲಿಯವರೆಗೆ ಹಂಚಿಕೆ ಮಾಡಲಾದ ವಿಭಾಗಗಳು ಇಲ್ಲಿವೆ
ಕಲ್ಯಾಣ್ ಡೊಂಬಿವಿಲಿ: ಪರಿಶಿಷ್ಟ ಜಾತಿ
ಥಾಣೆ: ಪರಿಶಿಷ್ಟ ಜಾತಿ (ಪುರುಷ)
ಜಲ್ನಾ: ಪರಿಶಿಷ್ಟ ಜಾತಿ (ಮಹಿಳೆ)
ಲಾತೂರ್: ಪರಿಶಿಷ್ಟ ಜಾತಿ (ಮಹಿಳೆ)
ಇಚಲಕರಂಜಿ: ಒಬಿಸಿ (ಪುರುಷ)
ಪನ್ವೇಲ್: ಒಬಿಸಿ (ಪುರುಷ)
ಅಕೋಲಾ: ಒಬಿಸಿ (ಮಹಿಳೆ)
ಅಹಲ್ಯಾನಗರ: ಒಬಿಸಿ (ಮಹಿಳೆ)
ಉಲ್ಲಾಸ್‌ನಗರ: ಒಬಿಸಿ (ಪುರುಷ)
ಕೊಲ್ಹಾಪುರ: ಒಬಿಸಿ (ಪುರುಷ)
ಚಂದ್ರಾಪುರ: ಒಬಿಸಿ (ಮಹಿಳೆ)
ಜಲಗಾಂವ್: ಒಬಿಸಿ (ಮಹಿಳೆ)
ಬಿಎಂಸಿಯಲ್ಲಿ ಬಿಜೆಪಿ ಪಾರುಪತ್ಯ
227 ಸದಸ್ಯ ಬಲದ ಬಿಎಂಸಿಯಲ್ಲಿ ಅಧಿಕಾರ ಹಿಡಿಯಲು 114 ಸ್ಥಾನಗಳು ಬೇಕು. ಬಿಜೆಪಿ 89 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ, ಡಿಸಿಎಂ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ 29 ಸ್ಥಾನಗಳನ್ನು ಗೆದ್ದಿದ್ದು, ಮಹಾಯುತಿ ಮೈತ್ರಿಕೂಟ 118 ವಾರ್ಡ್ಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ. ನಾಲ್ಕು ದಶಕಗಳಿಂದ ಬಿಎಂಸಿಯನ್ನು ಆಳುತ್ತಿರುವ ಠಾಕ್ರೆ ಬಣವು 65 ಸ್ಥಾನಗಳೊಂದಿಗೆ ಎರಡನೇ ಅತಿದೊಡ್ಡ ಪಕ್ಷವಾಗಿದೆ












































