ಉಡುಪಿ: ಸಂಪೂರ್ಣ ಸಾಕ್ಷರತೆಯನ್ನು ಸಾಧಿಸಿದರಾಜ್ಯದ ಮೊದಲ ಜಿಲ್ಲೆಯಾಗಿ ಉಡುಪಿ ಶೀಘ್ರವೇ ತನ್ನ ಹೆಸರನ್ನು ಛಾಪಿಸಲಿದೆ. ಸಾಕ್ಷರತೆಯಲ್ಲಿ ಶೇ.95ರಷ್ಟು ಸಾಧನೆ ಮಾಡಿದರೂ ಆ ಜಿಲ್ಲೆಯನ್ನು ಪೂರ್ಣ ಸಾಕ್ಷರರ ಜಿಲ್ಲೆಯಾಗಿ ಘೋಷಿಸಲಾಗುತ್ತದೆ. ರಾಜ್ಯದ ಯಾವ ಜಿಲ್ಲೆಯೂ ಈವರೆಗೆ ಈ ಸಾಧನೆ ಮಾಡಿಲ್ಲ. ಫೆಬ್ರವರಿ ಎರಡನೇ ವಾರದಲ್ಲಿ ಉಡುಪಿಯನ್ನು ಈ ಸಾಧನೆ ಮಾಡಿದ ರಾಜ್ಯದ ಮೊದಲ ಜಿಲ್ಲೆಯಾಗಿ ಘೋಷಿಸುವ ನಿರೀಕ್ಷೆಯಿದೆ.ಸದ್ಯ ಸರ್ಕಾರ ಸಾಕ್ಷರತ ಆಂದೋಲನಕ್ಕೆ ಹೊಸ ಕಾರ್ಯಕ್ರಮ ಅಥವಾ ಅನುದಾನ ಘೋಷಣೆ ಮಾಡಿಲ್ಲ. ಹೀಗಾಗಿ ಈ ಹಿಂದಿನ ಕಾರ್ಯಕ್ರಮಗಳ ಭಾಗವಾಗಿಯೇ ಶೇ.95ರಷ್ಟು ಸಾಕ್ಷರತೆ ಸಾಧಿಸಲು ಉಡುಪಿ ಜಿಲ್ಲೆ ತನ್ನದೇ ಆದ ಕಾರ್ಯಕ್ರಮ ರೂಪಿಸಿಕೊಂಡಿದೆ. ಜಿಲ್ಲೆಯ 155 ಗ್ರಾಪಂಗಳ ಪೈಕಿ ಬಹುತೇಕ ಎಲ್ಲ ಪಂಚಾಯತ್‌ಗಳಲ್ಲೂ ಅನಕ್ಷರಸ್ಥರಿಗೆ ಅಕ್ಷರ ಕಲಿಸುವ ಕಾರ್ಯ ಪೂರ್ಣವಾಗಿದೆ. 3 ಗ್ರಾಪಂಗಳಲ್ಲಿ ಅನಕ್ಷರಸ್ಥರು ಉಳಿದುಕೊಂಡಿದ್ದು, ಅವರಿಗೂ ಅಕ್ಷರಾಭ್ಯಾಸ ನಡೆಸಲಾಗಿದೆ. ಅದರ ಪರೀಕ್ಷೆ ಫೆಬ್ರವರಿ ಮೊದಲ ವಾರದಲ್ಲಿ ನಡೆಯಲಿದೆ. ಇದಾದ ನಂತರ ಉಡುಪಿಯು ಕರ್ನಾಟಕದ ಮೊದಲ ಸಂಪೂರ್ಣ ಸಾಕ್ಷರ ಜಿಲ್ಲೆಯಾಗಲಿದೆ.
11 ವರ್ಷ ಕಾರ್ಯಕ್ರಮ ಸ್ಥಗಿತ:
ಅಖಂಡ ದಕ್ಷಿಣ ಕನ್ನಡ ಜಿಲ್ಲೆಯು ವಿಭಜನೆಯಾದ ಬಳಿಕ ಉಡುಪಿ ಜಿಲ್ಲೆಯು 2010-11ರಲ್ಲಿ ಸಾಕ್ಷರ ಜಿಲ್ಲೆ ಎಂದು ಗುರುತಿಸಿಕೊಂಡಿತ್ತು. ಜಿಲ್ಲೆಯಲ್ಲಿ ಅನಂತರ ಯಾವುದೇ ರೀತಿಯ ಸಾಕ್ಷರತೆ ಕಾರ್ಯಕ್ರಮ ಅನುಷ್ಠಾನ ನಡೆದಿರಲಿಲ್ಲ. 2022-23ರ ರಾಜ್ಯ ಬಜೆಟ್‌ನಲ್ಲಿ ಘೋಷಿತ ಸಾವಿರ ಗ್ರಾ.ಪಂ. ಸಾಕ್ಷರತೆ ಕಾರ್ಯಕ್ರಮದಿಂದಾಗಿ ಉಡುಪಿ ಜಿಲ್ಲೆಯಲ್ಲೂ ಮತ್ತೆ ಸಾಕ್ಷರತೆ ಕಾರ್ಯಕ್ರಮ ಪ್ರಾರಂಭವಾಗಿತ್ತು. ಈಗ ಆ ಕಾರ್ಯಕ್ರಮವೂ ಪೂರ್ಣಗೊಂಡಿದೆ.
ಕಲಿಕೆ ಹೇಗೆ?
ಅನಕ್ಷರಸ್ಥರನ್ನು ಗುರುತಿಸಿ ಅವರಿಗೆ ಓದು, ಬರಹ ಮತ್ತು ಪ್ರಾಥಮಿಕ ಲೆಕ್ಕಾಚಾರ -ಈ ಮೂರು ವಿಷಯವಾಗಿ ಸಾಕ್ಷರತೆಯ ಪಾಠ ಕಲಿಸಲಾಗುತ್ತದೆ. ಇದಕ್ಕಾಗಿ ‘ಬಾಳಿಗೆ ಬೆಳಕು’ ಓದುವ ಪುಸ್ತಕ ಹಾಗೂ ‘ಸವಿ ಬರಹ’ ಬರೆಯುವ ಪುಸ್ತಕ ನೀಡಲಾಗುತ್ತದೆ. 200 ತಾಸುಗಳ ಕಲಿಕೆ, ಮೂರು ತಿಂಗಳ ಕಲಿಕೆ ಪೂರ್ಣಗೊಂಡ ಅನಂತರ ಮೂಲಭೂತ ಸಾಕ್ಷರತೆಯ ಪರೀಕ್ಷೆ ನಡೆಸಲಾಗುತ್ತದೆ. ಇದು 150 ಅಂಕಗಳ ಪರೀಕ್ಷೆಯಾಗಿದ್ದು, ಓದು, ಬರಹ ಹಾಗೂ ಲೆಕ್ಕಾಚಾರ- ಈ ಮೂರು ವಿಭಾಗಗಳಲ್ಲೂ ತಲಾ 50 ಅಂಕ ಇರುತ್ತವೆ.
ಅದರಲ್ಲಿ ತಲಾ 25 ಅಂಕ ಪಡೆದವರು ತೇರ್ಗಡೆಯಾಗುತ್ತಾರೆ. ತೇರ್ಗಡೆಯಾದವರಿಗೆ ಜಿಲ್ಲಾ ಪಂಚಾಯತ್ ಮೂಲಕ ನವ ಸಾಕ್ಷರರು ಎಂಬ ಪ್ರಮಾಣಪತ್ರ ನೀಡಲಾಗುತ್ತದೆ. ಈ ಪ್ರಮಾಣ ಪತ್ರವು 7ನೇ ತರಗತಿ ತೇರ್ಗಡೆಯಾದವರಿಗೆ ಸಮಾನಗಿರುತ್ತದೆ. ಇದರ ಆಧಾರದಲ್ಲಿ ಎಸೆಸೆಲ್ಸಿ ಪರೀಕ್ಷೆಯನ್ನು ಖಾಸಗಿ ಅಭ್ಯರ್ಥಿಯಾಗಿ ನೇರ ಬರೆಯಲು ಅವಕಾಶವಿದೆ.ರಾಜ್ಯ ಸರಕಾರ 2022-23ರ ಬಜೆಟ್‌ನಲ್ಲಿ ಸಾವಿರ ಗ್ರಾಪಂ ಸಾಕ್ಷರತೆಯ ಕಾರ್ಯಕ್ರಮ ಘೋಷಿಸಿತ್ತು. ಜಿ.ಪಂ. ಲಿಂಕ್ ಡಾಕ್ಯುಮೆಂಟ್ ಹಾಗೂ ನವ ಭಾರತ ಸಾಕ್ಷರತೆ ಕಾರ್ಯಕ್ರಮಗಳ ಅಡಿಯಲ್ಲಿ ಜಿಲ್ಲಾ ವಯಸ್ಕರ ಶಿಕ್ಷಣ ಸಮಿತಿಯು ‘ಎಲ್ಲರಿಗೂ ಶಿಕ್ಷಣ’ ಎಂಬ ಸಾಕ್ಷರತೆ ಕಾರ್ಯಕ್ರಮ ಜಾರಿಗೊಳಿಸಿದೆ. ಇದಾದ ಮೂರು ವರ್ಷಗಳಲ್ಲಿ 3 ವಿಧದ ಸಾಕ್ಷರತೆ ಕಾರ್ಯಕ್ರಮಗಳಲ್ಲಿ ಉಡುಪಿ ಜಿಲ್ಲೆಯ 5,130 ವಯಸ್ಕ ಅನಕ್ಷರಸ್ಥರು ಅಕ್ಷರಸ್ಥರಾಗಿದ್ದಾರೆ.
ದಕ್ಷಿಣ ಕನ್ನಡದಲ್ಲಿ ಪ್ರಗತಿ ಹೇಗಿದೆ?
ಸಾಕ್ಷರತೆಯಲ್ಲಿ ಶೇ.95ರಷ್ಟು ಸಾಧನೆ ಮಾಡಿದರೂ ಶೇ.100ರಷ್ಟು ಸಾಧನೆಯೆಂದು ಪರಿಗಣಿಸಲಾಗುತ್ತದೆ. ಸದ್ಯ ರಾಜ್ಯದಲ್ಲಿ ಉಡುಪಿ ಪ್ರಥಮ ಸ್ಥಾನದಲ್ಲಿದ್ದರೆ ದ.ಕ. ಎರಡನೇ ಸ್ಥಾನದಲ್ಲಿದೆ. ದ.ಕ. ಜಿಲ್ಲೆಯಲ್ಲಿ 220 ಗ್ರಾಮ ಪಂಚಾಯತ್‌ಗಳಿದ್ದು, ಸುಮಾರು ಶೇ.77ರಲ್ಲಿ ಸಾಧನೆ ಪೂರ್ಣಗೊಳಿಸಿದರೆ ದ.ಕ. ಕೂಡ ಸಂಪೂರ್ಣ ಸಾಕ್ಷರ ಜಿಲ್ಲೆಯಾಗಲಿದೆ.
ಉಡುಪಿ ಜಿಲ್ಲೆಯು 2026ರ ಫೆಬ್ರವರಿಯಲ್ಲಿ ಶೇ.95ಕ್ಕೂ ಅಧಿಕ ಸಾಕ್ಷರರನ್ನು ಹೊಂದಿದ ಜಿಲ್ಲೆಯಾಗಲಿದೆ. ಈ ಸಾಧನೆ ಮಾಡಿದ ರಾಜ್ಯದ ಮೊದಲ ಜಿಲ್ಲೆಯೂ ಆಗಲಿದೆ. ಶೇ.95ರಷ್ಟು ಸಾಧನೆ ಮಾಡಿದರೆ ಸಂಪೂರ್ಣ ಸಾಕ್ಷರ ಜಿಲ್ಲೆಯೆಂದು ಘೋಷಿಸಲು ನಿಯಮಗಳಲ್ಲಿ ಅವಕಾಶವಿದೆ. ಹೊಸ ಕಾರ್ಯಕ್ರಮ, ಅನುದಾನ ಘೋಷಣೆಯಾಗಿಲ್ಲ. ಹಿಂದಿನ ಕಾರ್ಯಕ್ರಮದಂತೆಯೇ ಯೋಜನೆ ನಡೆಯುತ್ತಿದೆ.
- ಯೋಗ ನರಸಿಂಹ ಸ್ವಾಮಿ ಕೆ.ಎಂ., ಉಡುಪಿ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ
ಉಡುಪಿ ಜಿಲ್ಲೆಯ ಅಂಕಿ ಅಂಶಜಿ.ಪಂ. ಲಿಂಕ್ ಡಾಕ್ಯುಮೆಂಟ್ ಕಾರ್ಯಕ್ರಮದಡಿ 2022-23ರಿಂದ 2024-25 ಸಾಲಿನ ವರೆಗೆ ಮೂರು ವರ್ಷಗಳಲ್ಲಿ ತಲಾ 46 ಮಂದಿಗೆ, ಸಾವಿರ ಗ್ರಾ.ಪಂ. ಸಾಕ್ಷರತೆ ಕಾರ್ಯಕ್ರಮದಡಿ ಈ ಮೂರು ವರ್ಷಗಳಲ್ಲಿ 3,937 ಮಂದಿಗೆ ಹಾಗೂ ನವ ಭಾರತ ಸಾಕ್ಷರತೆ ಕಾರ್ಯಕ್ರಮದಡಿ ಈ ಮೂರು ವರ್ಷಗಳಲ್ಲಿ 2,083 ಮಂದಿ ಸಹಿತ ಒಟ್ಟು ಮೂರು ವರ್ಷಗಳಲ್ಲಿ 6,158 ಮಂದಿಗೆ ಅಕ್ಷರ ಜ್ಞಾನ ನೀಡಲಾಗಿದೆ.
- ರಾಜು ಖಾರ್ವಿ ಕೊಡೇರಿ









































